ಪುನರಪಿ ಜನನಿ ಜಠರೇ ಶಯನಂ

ಒಂದು ಕಾಲ್ಪನಿಕ ಕಥೆ  

- ವಾಸುದೇವ ಕೆ

ಒಂದು ಮಬ್ಬುಗತ್ತಲಿನ ರೂಮಿನ ಮೂಲೆಯಲ್ಲಿ ಮಂಚದ ಬಿಳಿ ಹಾಸಿಗೆಯ ಮೇಲೆ ಸುಮಾರು 18ರ ವಯಸ್ಸಿನ ಯುವಕ ಬತ್ತಲೆಯಾಗಿ ಮಲಗಿದ್ದ. ಅವನ ಬಾಯಿಗೆ ಮತ್ತು ಮೂಗಿಗೆ ಹಲವು ಟ್ಯೂಬುಗಳು ಅಳವಡಿಸಲಾಗಿತ್ತು. ಅವನ ದೇಹದ ಹಲವು ಬಾಗಗಳಿಂದ ಮೆಡಿಕಲ್ ಪ್ರೋಬ್ಗಳು ಪಕ್ಕದಲ್ಲಿದ್ದ ದೊಡ್ಡ ಮಷೀನ್ ಒಂದಕ್ಕೆ ಕನೆಕ್ಟ್ ಮಾಡಲಾಗಿ, ಆ ಮಷೀನ್ ಇಂದ ಮಂದಗತಿಯಲ್ಲಿ ಬೀಪ್ ಶಬ್ದ ಮತ್ತು ಬದಲಾಗುತ್ತಿದ್ದ ಕೆಲವು ಗ್ರಾಫ್ ಗಳು ಮತ್ತು ಸಂಖ್ಯೆಗಳು ಅಲ್ಲಿದ್ದ ಮಾನಿಟರ್ ಮೇಲೆ ಬರುತ್ತಿದ್ದವು. ಆ ಯುವಕ ಪ್ರಜ್ಞೆ ಇಲ್ಲದಿದ್ದರೂ ಸಹ ಶಾಂತ ರೀತಿಯಲ್ಲಿ ಉಸಿರಾಡುತ್ತಿದ್ದರಿಂದ ಅವನ ಹೊಟ್ಟೆಯ ಭಾಗ ಮೇಲೆ ಕೆಳಗೆ ಹೋಗುತ್ತಿತ್ತು. ಆ ಯುವಕನ ಮುಖದಲ್ಲಿ ಮೀಸೆ ಮತ್ತು ಗಡ್ಡ ಬೆಳೆದು, ಅವನು ಶೇವ್ ಮಾಡಿ ಬಹಳ ತಿಂಗಳುಗಳೇ ಆಗಿರಬೇಕು ಅನ್ನಿಸುತ್ತೆ. 

ಯುವಕನ ಮಂಚದ ಸಮೀಪ, ಅದೇ ರೀತಿಯ ಮತ್ತೊಂದು ಮಂಚದಲ್ಲಿ ಯಾರು ಇರದೇ ಖಾಲಿಯಾಗಿತ್ತು, ಆದರೆ ಹಲವು ಕೊಳವೆಗಳು ಮತ್ತು ಪ್ರೋಬ್ ಗಳು ಹಾಸಿಗೆ ಮೇಲೆ ಬಿದ್ದಿದ್ದು ಮತ್ತೊಂದು ಮಷೀನ್ ಗೆ ಕನೆಕ್ಟ್ ಆಗಿದ್ದವು. ಆದರೆ ಆ ಮಷೀನ್ ಮಾನಿಟರ್ ಮೇಲೆ ಯಾವುದೇ ಗ್ರಾಫ್ ಇರದೇ, ಒಂದು ತಾರೀಕು ಮತ್ತು ವೇಳೆಯನ್ನು ಕೆಂಪು ಬಣ್ಣದಲ್ಲಿ ತೋರಿಸುತ್ತಿತ್ತು "1 ಜನವರಿ 2051"

ಆ ರೂಮಿನಲ್ಲಿ ಕೇವಲ ಮಷೀನ್ ಬೀಪ್ ಮತ್ತು ಕೆಲವು ಫ್ಯಾನ್ ತಿರುಗುತ್ತಿದ್ದ ಶಬ್ದಗಳು ಮಾತ್ರ  ಇತ್ತು. ಬೆಳಕು ಬಹಳ ಕಡಿಮೆ ಇದ್ದು, ರೂಮಿನಲ್ಲಿ ಮಂಚಗಳ ಎದುರಿಗೆ ಬಹಳ ದೊಡ್ಡ ಟಿವಿ, ಮೂಲೆಯಲ್ಲಿ ದೊಡ್ಡ ರೆಫ್ರಿಜಿರೇಟರ್, ಕುಕಿಂಗ್ ಯೂನಿಟ್ ಮತ್ತು ಒಂದು ಮನೆಗೆ ಬೇಕಾದ ಎಲ್ಲ ಸಾಮಗ್ರಿಗಳು ಇತ್ತು. ಮತ್ತೊಂದು ಮೂಲೆಯಲ್ಲಿ ಒಂದು ಟೇಬಲ್ , ಪುಸ್ತಕಗಳು, ಮೂರು ದೊಡ್ಡ ಕಪಾಟುಗಳು ಕಾಣಿಸುತ್ತಿತ್ತು. ಆದರೆ ರೂಮಿನಲ್ಲಿ ಯಾವುದೇ ಕಿಟಕಿ, ಬಾಗಿಲು ಕಾಣಿಸಲಿಲ್ಲ!

ಇದ್ದಕ್ಕಿದ್ದಂತೆ, ಯುವಕನಿಗೆ ಕನೆಕ್ಟ್ ಆಗಿದ್ದ ಮಷೀನ್ ಇಂದ ಜೋರಾಗಿ ಬೀಪ್ ಶಬ್ದ ಬರಲು ತೊಡಗಿತು, ಯುವಕನ ದೇಹ ಅಲುಗಾಡಲು ಆರಂಭಿಸಿತು. ಯುವಕ ಮೆತ್ತಗೆ ಅವನ ಕಣ್ಣು ತೆರೆದು, ಸುತ್ತಲೂ ನೋಡಿದ. ಮೆತ್ತಗೆ ಅವನ ಬಾಯಿ ಮತ್ತು ಮೂಗಿಗೆ ಜೋಡಿಸಿದ್ದ ಟ್ಯೂಬ್ ಗಳನ್ನು ತೆಗೆದ. ಅವನ ಎದುರಿದ್ದ ಅದಾಗದೆ ಟಿವಿ ಹಾಗು ರೂಮಿನ ಎಲ್ಲ ಲೈಟ್ಗಳು ಆನ್ ಆದವು. ಯುವಕ ಆಶ್ಚರ್ಯದಿಂದ ಎಲ್ಲ ಕಡೆ ನೋಡಿದ, ತಕ್ಷಣ ಆ ಯುವಕನಿಗೆ ಅಳವಡಿಸಿದ್ದ ಎಲ್ಲ ಟ್ಯೂಬ್ ಗಳು, ಪ್ರೋಬ್ ಗಳು ಬಿಚ್ಚುಕೊಂಡು ಮಷೀನ್ ಕಡೆಗೆ ಹೋಗಿಬಿಟ್ಟವು. ಅವನು ಕುಳಿತು ತನ್ನಷ್ಟಕ್ಕೆ ತಾನೇ ಉಸಿರಾಡಿದ.

ಟಿವಿಯ ಮೇಲೆ 'ಹಾಯ್ ಜೀವನ್' ಎನ್ನುವ ಪದಗಳು ಮೂಡಿದವು. ಯುವಕ ತನ್ನ ಹೆಸರನ್ನು ನೋಡಿ ಸಂತಸದಿಂದ ಕೈಗಳನ್ನು ಮೇಲೆತ್ತಿ ಜೋರಾಗಿ 'ಹಾಯ್' ಎಂದ. 

ಒಬ್ಬ 60ರ ಹರೆಯದ ಸಂತಸದಿಂದ ಇರುವ ಮನುಷ್ಯನ ಮುಖ ಟಿವಿ ಯಲ್ಲಿ ಕಾಣಿಸಿತು. ಯುವಕ  'ಅಪ್ಪಾ ಅಪ್ಪಾ' ಎಂದು ಕಿರುಚತೊಡಗಿದ. ಟಿವಿ ಯಲ್ಲಿ ಬಂದವರು ಮಾತನಾಡಲು ಶುರು ಮಾಡಿದರು 'ಜೀವನ್, ಹೊಸ ಪ್ರಪಂಚಕ್ಕೆ ನಿನಗೆ ಸ್ವಾಗತ. ನಾನು ಈಗ ಹೇಳುವ ಮಾತುಗಳನ್ನು ಸರಿಯಾಗಿ ಕೇಳಿಸಿಕೋ. ಮನಸ್ಸನ್ನು ಗಟ್ಟಿ ಮಾಡಿಕೊಂಡು ನಾನು ಹೇಳಿದ ಹಾಗೆ ಮಾಡು.

ಮಾತು ನಿಲ್ಲಿಸಿ ಜೋರಾಗಿ ಉಸಿರುತೆಗೆದುಕೊಂಡು ಆ ವ್ಯಕ್ತಿ ಮತ್ತೆ ಮಾತನಾಡಿದರು "ಡಿಯರ್ ಜೀವನ್, ನಿನ್ನ ಪಕ್ಕದಲ್ಲಿರುವ ಮಂಚವನ್ನು ನೋಡು - ಅಲ್ಲಿ ಯಾರು ಇರದಿದ್ದರೆ, ನಾನು ಮತ್ತು ನಿಮ್ಮಮ್ಮ ಬದುಕಿಲ್ಲ ಎಂದರ್ಥ, ನಾವು ಸತ್ತ ದಿನ ಹಾಗು ಟೈಮ್ ಅನ್ನು ನಮ್ಮ ಮಂಚಕ್ಕೆ ಅಂತಿದ್ದ ಮಾನಿಟರ್ ತೋರಿಸುತ್ತಿದೆ ನೋಡು". ಜೀವನ್ ಅಳುಕಿನಿಂದ ಪಕ್ಕದ ಮಂಚವನ್ನು ನೋಡಿದ ಅಲ್ಲಿ ಯಾರು ಇರಲಿಲ್ಲ. ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದ "ಅಪ್ಪಾ ಅಮ್ಮ ನನ್ನನ್ನು ಒಬ್ಬನೇ ಬಿಟ್ಟು ಎಲ್ಲಿ ಹೋದಿರಿ " ಎಂದು ಕೂಗಿದ.

ಅಪ್ಪನ ಮಾತು ಮುಂದುವರಿಯಿತು "ಜೀವನ್, ಯೋಚಿಸಬೇಡ. ಈ ವಿಡಿಯೋವನ್ನು ನಿನಗಾಗಿ ನಾನು ಸಾಯುವ ಮುಂಚೆ ರೆಕಾರ್ಡ್ ಮಾಡಿ ಈಗ ತೋರಿಸುತ್ತಿದ್ದೇನೆ. ನೀನು ಈಗ ಈ ಜಾಗದಲ್ಲಿ ಬದುಕಿರುವ ಏಕೈಕ ಜೀವಿ. ಹೆದರಬೇಡ ಇದೇ ರೂಮಿನಲ್ಲಿ ನಿನಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಇನ್ನು ಐದು ವರ್ಷ ಸುಖಕರವಾಗಿ ಇರಲು ಅವಕಾಶ ಮಾಡಿದ್ದೇನೆ. ನೀನು ಒಂದು ದೊಡ್ಡ ಪರೀಕ್ಷೆಯನ್ನು ಗೆದ್ದು ಬಂದಿದ್ದೀಯ - ನನಗೆ ಬಹಳ ಸಂತೋಷವಾಗಿದೆ. ನಿನ್ನನ್ನು ಬದುಕಿ ಉಳಿಸಲು ಬಹಳ ಕಷ್ಟಪಟ್ಟು ಈ ರೂಮನ್ನು ಸಿದ್ಧಪಡಿಸಿದ್ದೇವೆ. ನಾನು ಮುಂದೆ ಹೇಳುವ ಮಾತುಗಳನ್ನು ಗಮನವಿಟ್ಟು ಕೇಳು"

"ನಿನಗಿದು ಗೊತ್ತೇ, ನೀನು ಅದೇ ಹಾಸಿಗೆ ಮೇಲೆ ಸುಮಾರು ಹತ್ತು ವರ್ಷ ನಿನ್ನ ಮೆದುಳಿಗೆ ಮತ್ತು ದೇಹಕ್ಕೆ ಯಾವುದೇ ತೊಂದರೆ ಆಗದಂತೆ ಮೆಡಿಕಲ್ ಇಂಡ್ಯೂಸ್ಡ್ ಕೋಮಾದಲ್ಲಿ ಮಲಗುವಂತೆ ಮಾಡಿದ್ದೆ. ನೀನು ಆರೋಗ್ಯವಾಗಿ ಬದುಕುಳಿದಿರುವುದರಿಂದ ನಿನಗೆ ಅಳವಡಿಸಿದ್ದ ಎಲ್ಲ ಟ್ಯೂಬ್ ಮತ್ತು ಪ್ರೋಬ್ ಗಳ ಸಂಪರ್ಕ ಕಡಿದುಕೊಂಡಿವೆ. ನೀನು ಬಹಳ ಲಕ್ಕಿ ... ಆದರೆ ನಿಮ್ಮಮ್ಮ ಮತ್ತು ನಾನು ಅಷ್ಟು ಲಕ್ಕಿ ಅಲ್ಲ!" ಈ ಮಾತು ಕೇಳಿದ ಜೀವನ್ ಕಣ್ಣಿನಲ್ಲಿ ಧಾರಾಕಾರವಾಗಿ ಕಣ್ಣೀರು ಬಂದಿತು. ಬಿಕ್ಕಿ ಬಿಕ್ಕಿ ಅಳತೊಡಗಿದ. 

"ಸಾಕು, ಸಮಾಧಾನ ಮಾಡಿಕೋ ಕಂದ ವಾಸ್ತವವನ್ನು ಒಪ್ಪಿಕೊ. ಮುಂದೆ ಏನು ಮಾಡಬೇಕೆಂದು ನಾನು ವಿವರವಾಗಿ ತಿಳಿಸುತ್ತೇನೆ ಮತ್ತು ನಾನು ನಿನ್ನ ಜೊತೆ ಇದ್ದೆ ಇರುತ್ತೇನೆ. ಈಗ ತಾನೇ ಧೀರ್ಘಕಾಲದ ನಿದ್ದೆ ಇಂದ ಎದ್ದಿದ್ದೀಯ. ನಿನ್ನ ಜೊತೆಗಿರಲಿ ಎಂದು ಒಬ್ಬ ರೋಬೋಟ್ ಅನ್ನು ಸೃಷ್ಟಿ ಮಾಡಿದ್ದೇನೆ. ಅವನ ಹೆಸರು ಮಿಂಚು, ಇಗೋ ಅಲ್ಲಿ ಬರುತ್ತಿದ್ದಾನೆ ನೋಡು. ಅವನು ಹೇಳಿದ ರೀತಿ ಈಗ ಮಾಡು, ಸ್ವಲ್ಪ ಸಮಯದ ನಂತರ ನಾನು ಮತ್ತೆ ಇದೇ ಪರದೆ ಮೇಲೆ ಬರುತ್ತೀನಿ. ಟೇಕ್ ಕೇರ್" ಎಂದು ಅಭಿ ಟಾಟಾ ಮಾಡಿದರು. 

ಒಂದು ಮೂರು ಅಡಿ ಎತ್ತರದ ಚಿಕ್ಕ ಹುಡುಗನ ರೂಪದ ರೋಬೋಟ್ ಮಿಂಚು ಓಡುತ್ತಾ ಬಂದ. "ಹಾಯ್ ಜೀವನ್ ಹೇಗಿದ್ದಿಯೋ, ನಾನು ಮಿಂಚು ಕಣೋ" ಎಂದು ಬಹಳ ವರ್ಷಗಳ ಸ್ನೇಹಿತನ ರೀತಿ ಕಣ್ಣು ಸನ್ನೆ ಮಾಡಿ ಕೈ ಹಿಡಿದುಕೊಂಡ. "ಜೀವನ್, ನೀನು ಈಗ ಮೊದಲು ಸ್ನಾನ ಮಾಡಬೇಕು ಬಾ" ಎಂದು ಬಾತ್ ರೂಮಿಗೆ ಎಳೆದುಕೊಂಡು ಹೋದ. ಹಲ್ಲು ಉಜ್ಜುವುದು ಮರೆತೇ ಹೋಗಿದ್ದ ಜೀವನ್, ಮಿಂಚು ಸಹಾಯದಿಂದ ಮತ್ತೆ ಹಲ್ಲು ಉಜ್ಜುವುದು ಕಲಿತುಕೊಂಡು, ಮುಖವನ್ನು ಆಟೋಮ್ಯಾಟಿಕ್ ಶೇವರ್ ಮಷೀನ್ ಗೆ ಅಂಟಿ ನಿಂತಾಗೆ ಅವನ ಮುಖದಲ್ಲಿದ್ದ ಎಲ್ಲ ಕೂದಲು ಮಾಯವಾಗಿ ಕ್ಲೀನ್ ಶೇವ್ ಆದ ಮುಖ ಕಂಗೊಳಿಸಿತು. ನಂತರ ಶವರ್ ಕೆಳಗೆ ನಿಂತ. ಮಿಂಚು ಅಲ್ಲಿದ್ದ ಮಾನಿಟರ್ ಮೇಲೆ ಕಮಾಂಡ್ ಕೊಟ್ಟ ಮೇಲೆ ಜೀವನ್ ಗೆ ಬೇಕಾದ ಬಿಸಿಗೆ ನೀರು ಮೈಗೆ ತಾಕಿದಾಗ ಜೀವನ್ ಯಾವುದೊ ಬೇರೆ ಲೋಕಕ್ಕೆ ಹೋದ ಅನುಭವವಾಯಿತು. ಸೋಪ್ ಮತ್ತು ಶಾಂಪೂವಿನಿಂದ ಮೈ ತೊಳೆದು ನಿಂತಾಗ, ಮಿಂಚು ಅವನಿಗೆ ಶುಭ್ರ ಟವೆಲ್ ನೀಡಿ ಒರೆಸುಕೊಳ್ಳುವಂತೆ ಹೇಳಿದ. ಅಲ್ಲೇ ಇದ್ದ ಒಳ ವಸ್ತ್ರ, ಟಿ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿ ಬಾತ್ ರೂಮಿನಿಂದ ಹೊರ ಬಂದ. 

ಮಿಂಚು, ಜೀವನ್ನನ್ನು ಎಳೆದುಕೊಂಡು ಅಡುಗೆಮನೆಯಲ್ಲಿದ್ದ ಟೇಬಲ್ ಬಳಿ ಕುಳಿತು ಕೊಳ್ಳಲು ಹೇಳಿ, ಮೊದಲು ಅಲ್ಲಿದ್ದ ನೀರನ್ನು ಕುಡಿಯಲು ಹೇಳಿ, ನಂತರ ತುಂಡು ಮಾಡಿದ್ದ ಹಣ್ಣುಗಳನ್ನು ತಿನ್ನಲು ಹೇಳಿದ. "ಜೀವನ್, ಹೊಟ್ಟೆ ತುಂಬಿತಾ ಇಲ್ಲ ಇನ್ನೂ ಏನಾದರು ತಿನ್ನುತೀಯ?" ಎಂದು ಕೇಳಿದಾಗ, ಜೀವನ್ ತಾನು ಹತ್ತು ವರ್ಷ ತನಗೆ ತಾನೇ ತಿನ್ನುವುದನ್ನು ಮರೆತಿದ್ದರೂ ಸಹ ಹೊಟ್ಟೆ ಹಸಿವಿನಿಂದ ನೀರು ಕುಡಿದು, ಹಣ್ಣುಗಳನ್ನು ತಿಂದಿದ್ದು ಅವನಿಗೇ ಆಶ್ಚರ್ಯವಾಯಿತು. "ಮಿಂಚು ಈಗ ಇಷ್ಟು ಸಾಕು, ಆಮೇಲೆ ಒಂದು ನನ್ನ ಮೆಚ್ಚಿನ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ಕೊಡ್ತೀಯಾ" ಅಂದ. ಮಿಂಚು, ಜೋರಾಗಿ ನಕ್ಕು, "ನನಗೆ ನಿನ್ನ ಎಲ್ಲ ಮೆಚ್ಚಿನ ಪದಾರ್ಥಗಳೆಲ್ಲ ಗೊತ್ತು, ಡೋಂಟ್ ವರಿ ಎಲ್ಲ ವ್ಯವಸ್ಥೆ ಆಗಿದೆ, ಈಗ ಮತ್ತೆ ನಿನ್ನಪ್ಪನ ಜೊತೆ ಮಾತು ಮುಂದುವರಿಸು. ನಾನು ಅಷ್ಟರಲ್ಲಿ ಈ ರೂಮಿನಲ್ಲಿ ನಿನ್ನ ವ್ಯವಸ್ಥೆಗೆ ಎಲ್ಲಾ ಸಿದ್ಧ ಪಡಿಸಿ ಮತ್ತೆ ಕಾಣುತ್ತೇನೆ, ಹೋಗು ನಿನ್ನಪ್ಪ ಮಾನಿಟರ್ ಅಲ್ಲಿ ಕಾಯುತ್ತಿರಬೇಕು" ಎಂದು ಕಳಿಸಿದ.

ಅಪ್ಪನ ವಿಡಿಯೋ ಮಾನಿಟರ್ ಮೇಲೆ ಜೀವನ್ ತನ್ನ ಮೊದಲ ಸ್ಥಳಕ್ಕೆ ಹಿಂತಿರುಗಿದಾಗ ತಕ್ಷಣ ಮೂಡಿತು. " ವಾವ್ ಏನ್ ಚಂದ ಕಾಣಿಸುತ್ತಿದ್ದಿಯೋ ಕಂದ, ಬಾ ಕುಳಿತಿಕೊ ಮಾತು ಮುಂದುವರಿಸುತ್ತೇನೆ. ನಿನಗೆ ಗೊತ್ತಿರುವ ಹಾಗೆ ನನ್ನ ಹೆಸರು ಅಭಿಮನ್ಯು. ನಾನು ನಮ್ಮ ಸರಕಾರದ ಒಂದು ಬಹಳ ರಹಸ್ಯವಾದ ಒಂದು ಅಣುಶಕ್ತಿ ಕೇಂದ್ರದಲ್ಲಿ ಉನ್ನತ ಹುದ್ದೆಯ ವಿಜ್ಞಾನಿಯಾಗಿದ್ದೆ. ನನ್ನ ಜೊತೆಯಲ್ಲಿ ಅತಿ ಬುದ್ಧಿವಂತರಾದ ಇತರ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದರು. ನಿನ್ನಮ್ಮ ಅನಾಮಿಕ ಮತ್ತು ನಾವೆಲ್ಲಾ ನಮ್ಮ ಕೇಂದ್ರದ ಪಕ್ಕದಲ್ಲೇ ಇದ್ದ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತೆದ್ದೆವು. ನಿನ್ನಮ್ಮ ಬಹಳ ಒಳ್ಳೆಯ ಗಾಯಕಿ, ಪೈಂಟರ್ ಮತ್ತು ಅತ್ಯುತ್ತಮ ಅಡುಗೆ ಮಾಡುತ್ತಿದ್ದಳು. ನೀನು ಮಾತನಾಡುವುದನ್ನು ಬಹಳ ಬೇಗ ಕಲಿತೆ. ನಿನಗೆ ಎರಡೂವರೆ ವರ್ಷವಾದಾಗ ನಮ್ಮ ಕ್ವಾರ್ಟರ್ಸ್ ನಲ್ಲೆ ಇದ್ದ ಕೇಂದ್ರೀಯ ವಿದ್ಯಾಲಯ ಸ್ಕೂಲ್ಗೆ ಸೇರಿಸಿದೆವು. ನಿನಗೆ ಸ್ಕೂಲ್ ಹೋಗುವುದು, ನಿನ್ನ ಫ್ರೆಂಡ್ಸ್ ಜೊತೆ ಆಟವಾದುವು ಬಹಳ ಇಷ್ಟವಾಗುತ್ತಿತ್ತು. ನಿನಗೆ ಅದರ ನೆನಪಿದೆಯೇ?" ಜೀವನ್ ತಲೆಯನ್ನು ಹೌದು ಅಂತ ಅಲ್ಲಾಡಿಸಿದ, ಕಣ್ಣಿನ ತುಂಬಾ ನೀರು ತುಂಬಿತ್ತು. 

"ನಿನಗೆ ಸುಮಾರು ನಾಲ್ಕು ವರ್ಷವಾದಾಗ, ನನ್ನ ಸಂಶೋಧನೆಯ ಮೂಲಕ ಭವಿಷ್ಯದಲ್ಲಿ ಏನಾಗುತ್ತೆ ಅಂತ ತಿಳಿಯತೊಡಗಿತು. ಆ ದಿನದಿಂದ ಎಂಟು ತಿಂಗಳಿನ ನಂತರ ಅಂದರೆ 2040 ಇಸವಿ ಡಿಸೆಂಬರಿನಲ್ಲಿ ಬಾಹ್ಯಾಕಾಶದಿಂದ ಬರುವ ಪ್ರಬಲ ರೇಡಿಯೋ ತರಂಗಗಳು ಜಗತ್ತಿನ ಎಲ್ಲಾ ಅಣು ಬಾಂಬ್ ಗಳು ಮತ್ತು ಪರಮಾಣು ವಿದ್ಯುತ್ ಕೇಂದ್ರದಲ್ಲಿರುವ ಯುರೇನಿಯಂ, ಥೋರಿಯಂ, ಪ್ಲುಟೋನಿಯಂ ಮತ್ತಿತರ ಎಲ್ಲಾ ಪರಮಾಣುಗಳು ತಮ್ಮಷ್ಟಕ್ಕೆ ತಾವೇ ಆಕ್ಟಿವೇಟ್ ಆಗುವಂತೆ ಮಾಡಿ ಎಲ್ಲಾ ಜೀವಿಗಳನ್ನು ಸಾಯುವಂತೆ ಮಾಡಿ, ಪ್ರತಿ ದೇಶಗಳು ಸರ್ವನಾಶವಾಗುತ್ತವೆ. ಹೇಗೆ ಹಿರೋಷಿಮಾ ಮತ್ತು ನಾಗಸಾಕಿ ಯುದ್ಧದಲ್ಲಿ ಹೇಗೆ ನಾಶವಾಯಿತೋ, ಅದಕ್ಕಿಂತ ಹತ್ತುಪಟ್ಟು ಜಗತ್ತಿನ ಮೂಲೆ ಮೂಲೆ ಯಲ್ಲೂ ಅಣು ಬಾಂಬ್ ಹಾಕಿದ ರೀತಿ ಆಗುತ್ತದೆ. ಏಕೆಂದರೆ ಜಗತ್ತಿನ ಎಲ್ಲಾ ಪ್ರಾಂತ್ಯದಲ್ಲೂ ಪರಮಾಣುಗಳನ್ನು ಮನುಷ್ಯ ಭೂಮಿಯಿಂದ ಬಗೆದು ಮೇಲೆ ತಂದಿಟ್ಟಿದ್ದಾನೆ. ಭೂಮಿಯ ಒಳಗಡೆ ಇರುವ ಲೋಹ, ಪರಮಾಣು, ತೈಲ ಮತ್ತಿತರ ವಸ್ತುಗಳನ್ನು ಮನುಷ್ಯ ತಡೆ ಇಲ್ಲದಂತೆ ತೆಗೆದಿರುವುದು ಅವನ ವಿನಾಶಕ್ಕೆ ಕಾರಣವಾಗುತ್ತದೆ ಎಂದು ತಿಳಿಯಿತು. ಇದರ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿ ನಾನು ನನ್ನ ರಿಸರ್ಚ್ ಪೇಪರ್ ಸಿದ್ಧಪಡಿಸಿ ನಮ್ಮ ಉನ್ನತ ಅಧಿಕಾರಿಗಳು ಮತ್ತು ಮಿನಿಸ್ಟರ್ ಗಳ ಗಮನಕ್ಕೆ ತಂದಾಗ ನನಗೆ ಅವರು ಹೇಳಿದ್ದು, ಸುಮ್ಮನಿರಿ ಅಭಿ, ಈ ಪೇಪರ್ ಅನ್ನು ಎಲ್ಲೂ ಪಬ್ಲಿಶ್ ಮಾಡಬೇಡಿ ಅದರಿಂದ ನಮ್ಮ ಜನ ಭಯಭೀತರಾಗಿ ಏನೇನೋ ಮಾಡ್ತಾರೆ ನಮಗೆ ಅದನ್ನು ಎದುರಿಸಲು ಆಗಲ್ಲ ಅಂತ ಹೇಳಿ ಬಾಯಿ ಮುಚ್ಚಿಸಿದರು. ಏನಾದರು ನಾನು ಆ ಪೇಪರ್ ಪಬ್ಲಿಶ್ ಮಾಡಿದರೆ ಉಳಿಗಾಲವಿಲ್ಲ ಎಂದು ಸಹ ಹೆದರಿಸಿದರು"

"ಮತ್ತಷ್ಟು ಸಂಶೋಧನೆ ಮಾಡಿದಾಗ ನನಗೆ ತಿಳಿದಿದ್ದು, ಭೂಮಿಯ ಮೇಲಿನ ಮತ್ತು ಸಮುದ್ರದಾಳದ ಯಾವ ಜೀವಿಯನ್ನು ಈ ಘಟನೆ ಆದರೆ ಉಳಿಸಲು ಸಾಧ್ಯವಿಲ್ಲ, ಆದರೆ ನಾವು ಯಾವುದಾದರು ಅಣುವಿಕಿರಣದ ಪರಿಮಾಣವನ್ನು ಎದುರಿಸುವ ಒಂದು ಲೋಹವನ್ನು ಕಂಡು ಹಿಡಿದು, ಅದರ ಒಳಪದರ ದಿಂದ ಹಳೆಯ ಕಾಲದಲ್ಲಿ ಬೆಳೆದ ಬತ್ತ-ರಾಗಿಯನ್ನು ನಮ್ಮ ರೈತರು ಸಂಗ್ರಹಿಸುತ್ತಿದ್ದ ಖಣಜದ ಮಾದರಿ ರೂಮ್ ಗಳನ್ನು ತಯಾರು ಮಾಡಿ ಭೂಮಿಯ ಒಳಗಡೆ ಸುಮಾರು ಐವತ್ತು ಅಡಿ ಒಳಗೆ ಹತ್ತು ವರ್ಷ ಬಚ್ಚಿಟ್ಟುಕೊಂಡರೆ ನಾವು ಬಚಾವ್ ಆಗಬಹುದೆಂದು. ಆದರೆ ಆ ಹತ್ತು ವರ್ಷ ಎಲ್ಲಾರಿಗೂ ಬೇಕಾದ ಆಹಾರ, ಆಕ್ಸಿಜನ್, ಮತ್ತಿತರ ಪದಾರ್ಥಗಳನ್ನು ಕೂಡಿಡುವುದು ಅಸಾಧ್ಯದ ಸಂಗತಿ ಎನ್ನಿಸಿತು. "

"ನಿನಗೆ ತಿಳಿದಂತೆ ಜೀವವಿಕಾಸ ಈ ಜಗತ್ತಿನಲ್ಲಾಗಲು ಬಹಳ ಮಿಲಿಯನ್ ವರ್ಷಗಳೇ ತೆಗೆದುಕೊಂಡವು. ಪ್ರಬಲ ರೇಡಿಯೋ ತರಂಗಗಳು ಜಗತ್ತಿನ ಎಲ್ಲಾ ಅಣು ಬಾಂಬ್ ಗಳು ಮತ್ತು ಪರಮಾಣುಗಳನ್ನು ಆಕ್ಟಿವೇಟ್ ಮಾಡಿ ಜಗತ್ತಿನ ಎಲ್ಲ ಜೀವಿಗಳನ್ನು 2040  ಇಸವಿಯಲ್ಲಿ ನಾಶಮಾಡಿದರೆ, ಮತ್ತೆ ಜೀವವಿಕಾಸವಾಗುವುದಕ್ಕೆ ಇನ್ನೆಷ್ಟು ಮಿಲಿಯನ್ ವರ್ಷಗಳು ಬೇಕಾಗಬಹುದು? ಜೀವಿಗಳು ನಾಶವಾಗುವುದು ತಡೆಯಲು ಯಾರ ಸಹಾಯ ಸಿಗದಿದ್ದರೂ ನಾನು ಏನಾದರೂ ಮಾಡಲೇಬೇಕು ಎಂದು ತೀರ್ಮಾನಿಸಿದೆ.  ನಿನ್ನ ಅಮ್ಮನಿಗೆ ಈ ವಿಷಯವನ್ನು ತಿಳಿಸಿ, ಯಾರಿಗೂ ಯಾವ ಕಾರಣಕ್ಕೂ ಈ ವಿಷಯವನ್ನು ತಿಳಿಸಬಾರದು ಮತ್ತು ಇದನ್ನು ನಮ್ಮ ರಕ್ಷಣೆಗೋಸ್ಕರ ರಹಸ್ಯವಾಗಿ ಇಡಬೇಕೆಂದು ಆಣೆ ಮಡಿಸಿಕೊಂಡೆ. ನಿನ್ನಮ್ಮ ಮೊದಲು ಭಯ ಪಟ್ಟಳು, ನಂತರ ನನಗೆ ಧೈರ್ಯ ತುಂಬಿ ನನ್ನ ಕೆಲಸಕ್ಕೆ ಸಹಾಯಮಾಡುವುದಾಗಿ ಹೇಳಿದಾಗ ನನಗೆ ಆನೆಯ ಬಲ ಬಂದಂತಾಗಿತ್ತು. "

"ನನ್ನ ಸಂಶೋಧನೆಯ ಪ್ರಕಾರ 13 ಡಿಸೆಂಬರ್ 2040 ದಿನದಂದು ರೇಡಿಯೋ ತರಂಗಗಳು ಭೂಮಿಯನ್ನು ಪ್ರವೇಶಿಸಿ ಜಗತ್ತಿನ ಎಲ್ಲಾ ಅಣು ಬಾಂಬ್ ಗಳು ಮತ್ತು ಪರಮಾಣುಗಳನ್ನು ಆಕ್ಟಿವೇಟ್ ಮಾಡುತ್ತವೆ ಎಂದು ಖಚಿತ  ಪಡಿಸಿಕೊಂಡೆ. ಆ ರೇಡಿಯೋ ತರಂಗಗಳು ಭೂಮಿಯನ್ನು ಪ್ರವೇಶಿಸಲು ತಡೆಯುವುದಕ್ಕೆ ಯಾವ ಉಪಾಯವು ಇಲ್ಲ ಎಂದು ನನಗೆ ತಿಳಿಯಿತು. ಇರುವ ಒಂದೇ ಉಪಾಯ ಖಣಜದ ಮಾದರಿ ರೂಮ್ ಗಳನ್ನು ಯಾವುದಾದರು ಅಣುವಿಕಿರಣವನ್ನು ತಡೆಯುವ ಲೋಹದಿಂದ ಮಾಡಿ ಅಲ್ಲಿ ಜಗತ್ತಿನ ಕೆಲವು ಜೀವಿಗಳನ್ನು ಸಂರಕ್ಷಿಸಿ, ಆ ರೂಮನ್ನು ಸುಮಾರು ಐವತ್ತು ಅಡಿ ಭೂಮಿಯ ಒಳಗೆ ಭದ್ರವಾಗಿಟ್ಟು, ಅಣುವಿಕಿರಣ ಭೂಮಿಯ ಮೇಲೆ 10 ವರ್ಷದ ನಂತರ ಕಡಿಮೆಯಾದಾಗ ಮತ್ತೆ ಆ ಜೀವಿಗಳನ್ನು ಭೂಮಿಗೆ ಬಂದು ಜೀವಿಗಳು ಬದುಕಲು ಅವಕಾಶ ಮಾಡಿಕೊಡ ಬೇಕು.  ಅದು ಕಷ್ಟದ ಕೆಲಸ ಆದರೆ ಅಸಾಧ್ಯವಲ್ಲ."

"ನನ್ನ ಸರ್ಕಾರದ ಕೆಲಸದಲ್ಲಿ ಬಿಡುವು ಮಾಡಿಕೊಂಡು ನನ್ನ ರಿಸರ್ಚ್ ಮುಂದುವರಿಸಿ ಯಾವ ಲೋಹದಿಂದ ಖಣಜವನ್ನು ತಯಾರಿಸಬೇಕೆಂದು ಕಂಡು ಹಿಡಿಯತೊಡಗಿದೆ. ನಮ್ಮ ಹೆಮ್ಮೆಯ ವಿಜ್ಞಾನಿಗಳು ಒಂದು ವಿಚಿತ್ರ ಲೋಹದ ಮಹತ್ವನನ್ನು ಒಂದು ರಿಸರ್ಚ್ ಪೇಪರ್ ನಲ್ಲಿ ವಿಸ್ತಾರವಾಗಿ ತಿಳಿಸಿದ್ದರು. ಅದಕ್ಕೆ ಏನೂ ಹೆಸರಿಡದೆ ಆ ಲೋಹ ಎಂತಹ ಅಣುವಿಕಿರಣಗಳನ್ನುತಡೆಯುವ ಸಾಮರ್ಥ್ಯವಿದೆ ಎಂದು ಖಚಿತ ಪಡಿಸಿಕೊಂಡೆ. ಆ ಲೋಹದ ಕಾಂಬಿನೇಶನ್ ಬಗ್ಗೆ ಮತ್ತೆ ಸಂಶೋಧನೆ ಮಾಡಿ, ಸ್ಯಾಂಪಲ್ ಆಗಿ ಒಂದು ಡಬ್ಬಿಯನ್ನು ಆ ಲೋಹದಿಂದ ತಯಾರಿಸಲು ಹದಿನೈದು ದಿನ ಹಿಡಿಯಿತು. ನಾನು ಇನ್ನು ಕೇವಲ ಐದೂವರೆ ತಿಂಗಳಿನಲ್ಲಿ ನನ್ನ ಎಲ್ಲ ಸಿದ್ಧತೆ ಮುಗಿಸಬೇಕು ಎಂದು ಪ್ರತಿದಿನ ಯಾವ ಕೆಲಸಗಳನ್ನು ಮುಗಿಸಬೇಕೆಂದು ಡೀಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್ ತಯಾರಿಸಿದೆ. ಆ ಲೋಹದ ಡಬ್ಬಿಯ ಒಳಗೆ ಕೆಲವು ಸಾಮಗ್ರಿಗಳನ್ನು ಇತ್ತು ಡಬ್ಬಿಯನ್ನು ಪೂರ್ತಿಯಾಗಿ ಮುಚ್ಚಿದೆ. ಭೂಮಿಯ ಒಳಗೆ ಐವತ್ತು ಅಡಿ ಆಳದಲ್ಲಿ ಆ ಡಬ್ಬಿಯನ್ನು ಹಾಕಿ ಮುಚ್ಚಿದೆ. ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಂಡು, ಕೃತಕವಾಗಿ ಅಣುವಿಕಿರಣಗಳು ಆ ಡಬ್ಬಿಯ ಮೇಲೆ  ಬೀಳುವಂತೆ ಮಾಡಿದಾಗ ನನಗೆ ಖಚಿತವಾಯಿತು ಆ ಡಬ್ಬಿಯ ಒಳಗಿನ ಯಾವ ಪದಾರ್ಥಕ್ಕೂ ಏನೂ ಧಕ್ಕೆ ಯಾಗದಿದ್ದದ್ದು. ಸಂತೋಷದಿಂದ ಕುಣಿದೆ ಕುಪ್ಪಳಿಸಿದೆ, ಸಧ್ಯ ನನ್ನ ಸುತ್ತ ಮುತ್ತ ಯಾರು ಇರಲಿಲ್ಲ. ಮನೆಗೆ ಓಡಿ ಹೋಗಿ ನಿನ್ನ ಅಮ್ಮ ಅನಾಮಿಕಾಗೆ ಎಲ್ಲ ವಿಷಯ ತಿಳಿಸಿದಾಗ ಅವಳು ಸಂತೋಷ ಪಟ್ಟು ನನ್ನ ಸಹಾಯಕ್ಕೆ ನಿಂತಳು"

"ಆ ಲೋಹವನ್ನು ನಮಗೆ ಸುಲಭವಾಗಿ ಸಿಗುವ ಸ್ಕ್ರಾಪ್ ಗಳಿಂದ ತಯಾರಿಸುವ ಸೂತ್ರ ಕಂಡು ಹಿಡಿದೆ -  ಆ ಲೋಹಕ್ಕೆ ನನ್ನ ಮೆಚ್ಚಿನ ಹೆಸರಿಟ್ಟೆ 'ಅನಾಮಿಕೆ' ಅಂತ. ನನ್ನ ಎಲ್ಲ ಕ್ಯಾಲ್ಕ್ಯುಲೇಷನ್ ಪ್ರಕಾರ ನನ್ನ ಬಳಿ ಇದ್ದ ಪದಾರ್ಥಗಳಿಂದ ಅನಾಮಿಕೆ ಲೋಹದಿಂದ ಒಂದು ರೂಮ್, ಅಡುಗೆಮನೆ ಮತ್ತು ಹೊಂದಿಕೊಂಡಂತೆ ಬಾತ್ ರೂಮ್, ಹಾಗೆ ಮತ್ತೊಂದು ರೂಮ್ನಲ್ಲಿ ಎಲ್ಲ ತರಕಾರಿ ಸೊಪ್ಪು ಮರಗಳ ಬೀಜಗಳನ್ನು, ಪ್ರಾಣಿಗಳ ಡಿಎನ್ಎ ಸಾಂಪಲ್ಸ್ ಗಳು, ಮುಖ್ಯವಾದ ಪಶು ಪಕ್ಷಿಗಳ ಮೊಟ್ಟೆಗಳು, ಕಂಪ್ಯೂಟರ್, ನನಗೆ ಬೇಕಾದ ಎಲ್ಲ ಸಂಶೋಧನೆಯ ಇನ್ಸ್ಟ್ರುಮೆಂಟ್ಸ್ ಗಳನ್ನು ಸಂಗ್ರಹಿಸ ಬಹುದೆಂದು. ಈ ಜೀವಿಗಳ ಸಾಂಪಲ್ಸ್ ಮತ್ತು ಬೀಜಗಳಿಂದ ಕೃತಕವಾಗಿ ಕಾಡು ಸೃಷ್ಟಿಸುವುದು ನನ್ನ ಉದ್ದೇಶವಾಗಿತ್ತು. "

"ಆದರೆ ಯಾರಿಗೂ ತಿಳಿಯದಂತೆ ಅನಾಮಿಕೆ ರೂಮನ್ನು ಹೇಗೆ ತಯಾರಿಸುವುದು ಮತ್ತು ಎಲ್ಲಿ ಆಳದ ಹೊಂಡದಲ್ಲಿ ಇಡುವುದು ಎಂದು ಯೋಚಿಸಿದಾಗ, ನಮ್ಮ ಮನೆಯ ಸಮೀಪವಿದ್ದ ಅಲೆಮಾರಿಗಳು ನೆನಪಾದರು. ಅವರು ತಮ್ಮ ಕೈಚಳಕದಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಸ್ಟ್ಯಾಚುಗಳನ್ನು ತಯಾರಿಸುವುದು ನೋಡಿದ್ದೆ. ಹಾಗೆ ಅವರಿಗೆ ನನ್ನ ಸಂಶೋಧನೆಗೆ ಬೇಕಾದಾಗೆಲ್ಲ ಅವರ ಸಹಾಯ ಪಡಿಯುತ್ತಿದ್ದೆ. ಅವರ ಯಜಮಾನ ಸುಬೇದಾರನನ್ನು ಭೇಟಿ ಮಾಡಿ ನಾನು ಒಂದು ಸಂಶೋಧನೆ ಮಾಡುತ್ತಿದ್ದೇನೆ ಅದಕ್ಕೆ ಅವನ ಗುಂಪಿನವರ ಸಹಾಯ ಬೇಕೆಂದಾಗ ಹಣ ಕೊಡಿ ಕೆಲಸ ತಗೊಳ್ಳಿ ಎಂದ. ಅವನಿಗೆ ಎರಡು ದಿನದ ನಂತರ ಸಿಗುತ್ತೇನೆ ಎಂದು ಹೇಳಿ ಹೊರಟೆ"

"ಇನ್ನು ಆಳವಾದ ಜಾಗದ ಬಗ್ಗೆ ಯೋಚಿಸುತ್ತಿರುವಾಗ, ನಿನ್ನಮ್ಮ ನಮ್ಮ ಚಂದದೂರಿನ ಉಪಯೋಗಿಸದೆ ಹಾಳು ಬಿದ್ದಿರುವ ಆಳವಾದ ಕ್ವಾರಿ ಸೈಟ್ ಬಗ್ಗೆ ಜ್ಞಾಪಕ ಮಾಡಿದಳು. ಅದಕ್ಕೆ ಇರಬೇಕು ಹೇಳುವುದು ನಾವು ಯಾವುದಾದರು ಒಳ್ಳೆಯ ಕಾರ್ಯಕ್ಕೆ ಕೈ ಹಾಕಿದರೆ ಮೊದಲು ನಮ್ಮನ್ನು ಪರೀಕ್ಷಿಸಲು ದೇವರು ಕೆಲವು ಅಡೆ-ತಡೆ ಮಾಡ್ತಾನೆ, ನಾವು ಮುನ್ನುಗ್ಗಿ ಜಯಿಸಿದರೆ ಮುಂದಿನ ದಾರಿ ಸುಗಮ ಮಾಡ್ತಾನೆ ಅಂತ."

"ನಾನು ಮತ್ತು ನಿನ್ನಮ್ಮ ಯಾರಿಗೂ ತಿಳಿಯದಂತೆ ಚಂದದೂರಿನ ಕ್ವಾರಿಯ ಪಕ್ಕ ಒಂದು ಬಂಗಲೆ ಯನ್ನು ಬಾಡಿಗೆಗೆ ಪಡೆದುಕೊಂಡು, ಅಲೆಮಾರಿ ಸುಬೇದಾರನ ತಂಡದವರಿಂದ ಅನಾಮಿಕೆ ರೂಮ್ಗಳನ್ನು ತಯಾರಿಸಲು ಯಾವುದೇ ತೊಂದರೆ ಇಲ್ಲದಂತೆ ಶುರು ಮಾಡಿದೆವು. ನಮ್ಮ ಜಾಗಕ್ಕೆ ಕೇವಲ ಕಾಡು ರಸ್ತೆ ಮಾತ್ರ ಇತ್ತು ಮತ್ತು ಅದು ಊರಿನಿಂದ ಬಹಳ ದೂರವು ಇತ್ತು. ಆ ಕ್ವಾರಿಯಲ್ಲಿ ದೆವ್ವವಿದೆ ಎಂದು ಯಾರೋ ಹಬ್ಬಿಸಿದ್ದರಿಂದ ಅಲ್ಲಿಗೆ ಬರಲು ಯಾರು ಧೈರ್ಯ ಮಾಡುತ್ತಿರಲಿಲ್ಲ. "

"ನಮ್ಮ ಅದೃಷ್ಟಕ್ಕೆ, ಆ ಕ್ವಾರಿಯ ಪಕ್ಕ ಯಾವುದೊ ಫ್ಯಾಕ್ಟರಿ ಯವರು ಬೆಟ್ಟದೆತ್ತರದಷ್ಟು ನಮಗೆ ಬೇಕಾದ ಸ್ಕ್ರಾಪ್ ಮೆಟೀರಿಯಲ್ ಗಳನ್ನು ಸುರಿದಿದ್ದರು. ಸರಿ, ನಮ್ಮ ತಂಡಕ್ಕೆ ಎಲ್ಲ ಸೂಚನೆಗಳನ್ನು ಕೊಟ್ಟೆ. ಅಲೆಮಾರಿ ಸುಬೇದಾರ ಮತ್ತು ಅವನ ತಂಡದವರಿಗೆ ನಾವು ಒಂದು ಸಂಶೋಧನೆ ಮಾಡುತ್ತಿದ್ದೇವೆ. ಅವರ ಕೆಲಸಕ್ಕೆ ನಮ್ಮ ಬಳಿ ಇದ್ದ ನಮ್ಮ ತಾತನ ಕಾಲದ ಚಿನ್ನದ ಒಡವೆಗಳು, ಬೆಳ್ಳಿ ಅವರಿಗೆ ಕೊಡುತ್ತೇನೆ ಎಂದು ಮತ್ತು ಐದೂವರೆ ತಿಂಗಳ ನಂತರ ನನ್ನ ಮನೆಯನ್ನು ಅವನ ಹೆಸರಿಗೆ ವರ್ಗಾಯಿಸಲು ಎಲ್ಲ ಕಾಗದಗಳನ್ನು ಸಿದ್ಧಪಡಿಸಿ ಅವನಿಗೆ ತೋರಿಸಿ ನಮ್ಮ ಮನೆಯ ಹಾಲಿನಲ್ಲಿ ಇಟ್ಟೆ. ನಮ್ಮನ್ನು ನಂಬಿದ ಅಲೆಮಾರಿ ಸುಬೇದಾರ ತನ್ನ ತಂಡದವರಿಗೆ ಹುರಿದುಂಬಿಸಿ ಮೂರು ತಿಂಗಳಿನಲ್ಲಿ ನನ್ನ ಕನಸಿನ ಅನಾಮಿಕೆಯನ್ನು ತಯಾರಿಸಿದ. 11 ಅಡಿ x 11 ಅಡಿಯ ರೂಮ್, ಅದಕ್ಕೆ ಅಂಟಿಕೊಂಡಂತೆ 20 ಅಡಿ x 20 ಅಡಿಯ ನನ್ನ ಪ್ರಯೋಗಾಲಯ ಸೃಷ್ಟಿಯಾಗಿತ್ತು. ತಂಡದವರಿಗೆಲ್ಲ ಅವತ್ತು ಅವರಿಷ್ಟದ ಮಾಂಸದ ಊಟ ಹಾಕಿಸಿದೆವು, ಹೌದು ಜೊತೆಗೆ ಹೆಂಡವೂ ಇತ್ತು. ಆ ರಾತ್ರಿ ನಾನು ಮತ್ತು ನಿನ್ನಮ್ಮ ನಿಶ್ಚಿಂತೆ ಯಾಗಿ ನಿನ್ನ ಜೊತೆ ಮಲಗಿದೆವು."

"ಮುಂದಿನ ದಿನಗಳಲ್ಲಿ ನಮಗೆ 11 ವರ್ಷಕ್ಕೆ ಬೇಕಾದ ಆಹಾರ ಪದಾರ್ಥಗಳು ಕೆಡದಂತೆ ಸಂಗ್ರಹಿಸಲು ಕೆಲಸ ಶುರು ಮಾಡಿದೆವು. ನನ್ನ ಸಂಶೋಧನೆಗೆ ಬೇಕಾದ ಎಲ್ಲ ಸಾಮಗ್ರಿಗಳು ಅನಾಮಿಕೆಯ ರೂಮಿನಲ್ಲಿ ಸೇರಲು ಪ್ರಾರಂಭವಾಯಿತು. ನಮಗೆ ಬೇಕಾದ ನೀರಿನ ವ್ಯವಸ್ಥೆ, ಆಕ್ಸಿಜೆನ್ ವ್ಯವಸ್ಥೆ ಅನಾಮಿಕೆ ರೂಮಿನ ಕೆಳಗೆ ಸಂಗ್ರಹಿಸಲು ವ್ಯವಸ್ಥೆ ಆಯಿತು. ಈ ಎಲ್ಲ ಕೆಲಸ ಮುಗಿಸಲು ಮತ್ತೊಂದು ತಿಂಗಳಾಯಿತು. ಇನ್ನು ಕೇವಲ ಒಂದೂವರೆ ತಿಂಗಳ ಸಮಯ ಮಾತ್ರ ಇತ್ತು."

"ನನ್ನ ಪ್ಲಾನ್ ಪ್ರಕಾರ ಇನ್ನು ಒಂದು ತಿಂಗಳಿನಲ್ಲಿ ನಾವು ಮೂರು ಜನ ಅನಾಮಿಕೆಯನ್ನು ಹೊಕ್ಕು, ಕ್ವಾರಿಯ ಒಳಗೆ ಸೇರಬೇಕೆಂದು. ನೀನು ಇನ್ನು ಚಿಕ್ಕವನಾಗಿದ್ದರಿಂದ ನಿನಗೆ ಇದು ಯಾವುದೂ ತಿಳಿಯದಂತೆ ನಿನ್ನನ್ನು ಸ್ವಲ್ಪ ದಿನ ಸ್ಕೂಲಿನ ಹಾಸ್ಟೆಲ್ನಲ್ಲಿ ಇರಲು ವ್ಯವಸ್ಥೆ ಮಾಡಿದ್ದೆವು. ಹಾಗೆ ನಾವು ಅನಾಮಿಕೆಯನ್ನು ಹೊಕ್ಕಮೇಲೆ ನೀನು ಇಂಡ್ಯೂಸ್ಡ್ ಕೋಮದಲ್ಲಿ ಇರುವ ವ್ಯವಸ್ಥೆಗೆ ಬೇಕಾದ ಇನ್ಸ್ಟ್ರುಮೆಂಟ್ಸ್ ಎಲ್ಲ ಸಂಗ್ರಹಿಸಿ, ಮೆಡಿಕಲ್ ಇಕ್ವಿಪ್ಮೆಂಟ್ ಗಳನ್ನು ಎಲ್ಲ ರೂಮಿನ ಒಳಗಡೆ ಇಟ್ಟೆವು. ನಮ್ಮ ಎಲ್ಲ ಕೆಲಸ ಅಂದುಕೊಂಡಂತೆ 20 ದಿನಗಳಲ್ಲಿ ಮುಗಿಯಿತು. ಇನ್ನು ಕೇವಲ 25 ದಿನಗಳು ಮಾತ್ರ ಉಳಿದಿದ್ದವು. "

"ನಾನು, ನಿನ್ನಮ್ಮ ಅನಾಮಿಕೆ ರೂಮಿನ ಎಲ್ಲ ಇನ್ಸ್ಟ್ರುಮೆಂಟ್ಸ್ ಗಳನ್ನು ಮೂರು ಬಾರಿ ಪರೀಕ್ಷಿಸಿದೆವು. ಎಲ್ಲವು ಸರಿ ಇರುವುದು ಖಚಿತ ಪಡಿಸಿಕೊಂಡ ನಂತರ, ನಿನ್ನನ್ನು ಹಾಸ್ಟೆಲ್ ನಿಂದ ಕರೆತಂದೆವು. ನೀನು ನಮ್ಮನ್ನು ನೋಡಿ ಖುಷಿ ಪಟ್ಟೆ."

ಜೀವನ್ ಗೆ ಆ ಸಂಧರ್ಭ ಮಸುಕು ಮಸುಕಾಗಿ ಜ್ಞಾಪಕ ಬಂದಂತಾಯಿತು. ಕಣ್ಣಲ್ಲಿ ನೀರು ತುಂಬಿತು. ಅದನ್ನು ನೋಡಿದ ಮಿಂಚು ಸ್ವಲ್ಪ ಟಿಶ್ಯೂ ಪೇಪರ್ ಕೊಟ್ಟು ಸಂತೈಸಿದ. 

"ನಮಗೆ ಇದ್ದ ಒಂದೇ ಮಾರ್ಗ ಎಂದರೆ ನಾವು ಮೂರು ಜನ ಇಂಡ್ಯೂಸ್ಡ್ ಕೋಮ ಸ್ಥಿತಿಯಲ್ಲಿ 10  ವರ್ಷ ಆರೋಗ್ಯವಾಗಿದ್ದು, ಭೂಮಿಯ ಮೇಲಿನ ಅಣುವಿಕಿರಣ ಕಡಿಮೆ ಆದದನ್ನು ಖಚಿತ ಪಡಿಸಿಕೊಂಡು ಆಚೆ ಬರುವುದೆಂದು. ನಾನು ಮತ್ತು ನಿನ್ನಮ್ಮ ಅನು (ಅನಾಮಿಕ) ಪ್ರತಿ ದಿನ ಕಷ್ಟಪಟ್ಟು ಎಲ್ಲ ಸಿದ್ಧತೆಗಳನ್ನು ಮಾಡಿದೆವು.  ಎಲ್ಲ ಯಂತ್ರಗಳನ್ನು ಸಿದ್ಧಪಡಿಸಿ ಅನಾಮಿಕೆ ರೂಮಿನಲ್ಲಿ ಅಳವಡಿಸಿ, ಎಲ್ಲವು ಸರಿಯಾಗಿ ಕೆಲಸ ಮಾಡುವುದನ್ನು ಪರೀಕ್ಷಿಸಿದೆ. ನಾನು ಸ್ವಾರ್ಥಿಯಾಗಿ ಕೇವಲ ನನ್ನ ಕುಟುಂಬವನ್ನು ಮಾತ್ರ ರಕ್ಷಿಸುವುದನ್ನು ಬಿಟ್ಟು ನನಗೆ ಯಾವ ಮಾರ್ಗವೂ ಸಹ ಕಂಡಿರಲಿಲ್ಲ, ಯಾಕೆಂದರೆ ನನಗೆ ಸಹಾಯ ಮಾಡಲು ನನ್ನ ಆಫೀಸಿನ ಸಹಚರರು, ಅಧಿಕಾರಿಗಳು ಮತ್ತು ಸರ್ಕಾರದವರು ನನ್ನ ಅಧ್ಯಯನವನ್ನು ನಂಬಲೇ ಇಲ್ಲ ನನ್ನನ್ನು ಹುಚ್ಚನ ರೀತಿ ನಡೆಸಿಕೊಂಡರು."

"ದಿನಾಂಕ 10 ಡಿಸೆಂಬರ್ 2040:   ನಾವು ಅನಾಮಿಕೆ ರೂಮಿನಲ್ಲಿ ಹೋಗುವ ದಿನ ಬಂದೇ ಬಿಟ್ಟಿತು. ನನ್ನ ನನಗೀಗ ಗೆಳೆಯನಾಗಿದ್ದ ಬಹಾದ್ದೂರ್ ಗೆ ನಾನು ಒಪ್ಪಿಕೊಂಡಿದ್ದ ಹಣ ಕೊಟ್ಟೆ ಮತ್ತು ನನ್ನ ಮನೆ ಅವನದೇ ಎಂದು ಎಲ್ಲ ಪ್ರಾಪರ್ಟಿ ಪೇಪರ್ಸ್ ಕೊಟ್ಟಿಬಿಟ್ಟೆ. ಅವನು ಬಹಳ ದಿನದಿಂದ ನಾನು ಮಾಡುತ್ತಿರುವ ಕೆಲಸದ ಬಗ್ಗೆ ಕೇಳುತ್ತಲೇ ಇದ್ದ. ಅದಕ್ಕೆ ನಾನು ಕೊಡುತ್ತಿದ್ದ ಒಂದೇ ಉತ್ತರ - ನಾವು ಸಂಶೋಧನೆ ಮಾಡುತ್ತಿದ್ದೇವೆ ಮನುಷ್ಯ ಹೇಗೆ ಆರೋಗ್ಯವಾಗಿ 100 ವರ್ಷ ಬಾಳಬಹುದೆಂದು. ಅದು ಸಫಲವಾದರೆ ಆ ರಹಸ್ಯವನ್ನು ಅವನು ಮತ್ತು ಅವನ ಸಂಗಡಿಗರಿಗೆ ತಿಳಿಸಿ ಅವರನ್ನು 100 ವರ್ಷಗಳ ಕಾಲ ಬದುಕುವಂತೆ ಮಾಡುತ್ತೇನೆ. ನಮ್ಮ ಅನಾಮಿಕೆ ರೂಮನ್ನು ಕ್ವಾರಿಯ ಸುಮಾರು 80 ಅಡಿ ಒಳಗಿನ ಹಳ್ಳಕ್ಕೆ ಹಾಕಿ ಕಲ್ಲು, ಇದ್ದಲು, ಸ್ಕ್ರಾಪ್ ಮೆಟೀರಿಯಲ್ಸ್ ಗಳನ್ನು ಹೇಗೆ ತುಂಬಬೇಕೆಂದು ಬಹಾದ್ದೂರ್ ಗೆ ತಯಾರಿಮಾಡಿ, ನಮ್ಮನ್ನು ಒಂದು ತಿಂಗಳ ನಂತರ ಹಳ್ಳ ದಿಂದ ತೆಗೆಯಬೇಕೆಂದು ಸುಮ್ಮನೆ ಹೇಳಿದ್ದೆ. ನನಗೆ ಖಾತ್ರಿಯಾಗಿತ್ತು ಒಂದು ತಿಂಗಳ ನಂತರ ಯಾವ ಜೀವಿಗಳು ಭೂಮಿಯ ಮೇಲೆ ಇರಲು ಸಾಧ್ಯವೇ ಇಲ್ಲ ಎಂದು. ಅವನ ಜೊತೆ ಅವನು ಬದುಕಿರುವವರೆಗೂ ಮಾತನಾಡಲು ವಾಕಿ- ಟಾಕಿ ಕೊಟ್ಟೆ. ಅವನನ್ನು ಗಟ್ಟಿಯಾಗಿ ಅಪ್ಪಿ, ಅವನು ಮತ್ತು ಅವನ ಸಂಗಡಿಗರಿಗೆಲ್ಲ ಧೀರ್ಘದಂಡ ನಮಸ್ಕಾರ ಮಾಡಿದಾಗ ಅವರು ಭಾವೋದ್ವೇಗದಿಂದ ಅವರೂ ಸಹ ನನಗೆ ಧೀರ್ಘದಂಡ ನಮಸ್ಕಾರ ಮಾಡಿದರು"

"ಭೂಮಿಯ ಮೇಲೆ ಗಣೇಶನ ವಿಗ್ರಹವನ್ನು ಇಟ್ಟು ಭಕ್ತಿ ಇಂದ ಪೂಜೆ ಮಾಡಿ  ನಮಸ್ಕರಿಸಿ, ನಮ್ಮ ಅನಾಮಿಕೆ ರೂಮಿನಲ್ಲಿ ಒಳ ಹೊಕ್ಕು ಅಲ್ಲಿದ್ದವರಿಗೆ ಮತ್ತೆ ನಮಸ್ಕರಿಸಿದೆವು. ಭೂಮಿಯನ್ನು ಕೊನೆಯ ಬಾರಿ ನೋಡಿ, ತಂದಿದ್ದ ಮಣ್ಣನ್ನು ಹಣೆಗೆ ಬಳಿದುಕೊಂಡೆವು. ನಮ್ಮ ರೂಮಿನ ದಪ್ಪನಾದ ಬಾಗಿಲನ್ನು ಭದ್ರವಾಗಿ ಮುಚ್ಚಿ, ಎಲ್ಲವು ಸರಿಯಿದೆಯೇ ಎಂದು ಪರೀಕ್ಷಿಸಿದ ನಂತರ ನಿನ್ನನ್ನು ಮತ್ತು ನಿನ್ನಮ್ಮನನ್ನು ಗಟ್ಟಿಯಾಗಿ ಅಪ್ಪಿದೆ."

"ಬೋರ್ ಆಗುತ್ತೀಯ ಮಗನೆ? ನಿನಗೆ ಈಗ ಹಸಿವಾಗಿರ ಬಹುದು. ಮಿಂಚು ಹೋಗು ಜೀವನ್ ಗೆ ಇಷ್ಟದ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ತೆಗೆದುಕೊಂಡು ಬಾ" ಎಂದ ತಕ್ಷಣ, ಮಿಂಚು ಕುಣಿಯುತ್ತ ಅಡುಗೆ ಕಾರ್ನರ್ ಗೆ ಹೋದ. ಏನೇನೋ ಬಟನ್ ಪ್ರೆಸ್ ಮಾಡಿ ಸ್ವಲ್ಪ ಸಮಯದ ನಂತರ ಎರಡು ದೋಸೆಗಳನ್ನು ತಂದು "ತಿನ್ನೋ ಬೇಗ, ಹೇಳು ನನಗೆ ರುಚಿ ಹೇಗಿದೆ ಎಂದು. ಇನ್ನೂ ದೋಸೆ ಬೇಕಾದರೆ ತಿಳಿಸು ಕ್ವಿಕ್ ಆಗಿ ಮಾಡಿ ತರುವೆ" ಅಂದ.

ಆ ದೋಸೆ ನನಗೆ ಸ್ವರ್ಗದಲ್ಲಿ ಅಮೃತ ಕುಡಿದಷ್ಟು ಸಂತೋಷವಾಯಿತು "ಮಿಂಚು, ಇದು ನನ್ನಮ್ಮ ಅನು ಮಾಡುತ್ತಿದ್ದ ದೋಸೆಯ ಹಾಗೆಯೆ ಇದೇ ಥ್ಯಾಂಕ್ಸ್ ಕಣೋ" ಅಂದಾಗ ಮಿಂಚು, "ಹೇ ಅದು ನಿನ್ನ ಅಮ್ಮ ಮಾಡಿದ ದೋಸೆನೇ ಕಣೋ ಅದನ್ನು ಮತ್ತೆ ಬಿಸಿ ಮಾಡಿದ್ದು ಮಾತ್ರ ನಾನು. ಅದರಲ್ಲಿ ನಿನ್ನ ಅಮ್ಮನ ಪ್ರೀತಿ ತುಂಬಿದೆ ಅದಕ್ಕೆ ನಿನಗೆ ಅಷ್ಟು ಇಷ್ಟವಾಗಿದೆ. ಇದನ್ನು ಕೇಳಿ ಅಳಬೇಡ" ಎಂದು ನಕ್ಕ, ಆದರೆ ಜೀವನ್ ನಗಲಿಲ್ಲ. ದೋಸೆಯನ್ನು ಪೂರ್ತಿ ತಿಂದು, "ಮಿಂಚು ನನಗೆ ಇಷ್ಟು ದೋಸೆ ಸಾಕು, ಇನ್ನು ಸೌತ್ ಇಂಡಿಯನ್ ಫಿಲ್ಟರ್ ಕಾಫಿ ತಾ" ಎಂದು ಆಜ್ಞೆ ಮಾಡಿದ. ಮಿಂಚು ಘಮ ಘಮ ಎನ್ನುತಿದ್ದ ಕಾಫಿ ತಂದು ಕೊಟ್ಟಾಗ, ಜೀವನ್ ನಿಧಾನವಾಗಿ ಆಹ್ವಾದಿಸಿ ಕುಡಿದು ಜೋರಾಗಿ ತೇಗಿದ ನಂತರ ಮಿಂಚುವನ್ನು ಜೋರಾಗಿ ಅಪ್ಪಿದ. 

ಮತ್ತೆ ಅಪ್ಪನ ಮಾತು ಮಾನಿಟರ್ ಮೇಲೆ ಮುಂದುವರಿಯಿತು ...

"ನಮ್ಮ ರೂಮು ಈಗ ಕ್ವಾರಿಯ ಹಳ್ಳದೊಳಗೆ ಇಳಿಯಿತು, ನಾನು ಬಹಾದ್ದೂರ್ ಜೊತೆ ಮಾತನಾಡಿ ನಮ್ಮ ರೂಮನ್ನು ಹೇಳಿದ ರೀತಿ ಮುಚ್ಚಲು ಹೇಳಿದೆ. ಅವನು ನಾನು ಹೇಳಿದ ರೀತಿ ಚಾಚೂ ತಪ್ಪದೆ ಕೆಲಸ ಮಾಡಿ ಮುಗಿಸಿದ. ಪ್ರತಿಯೊಂದನ್ನು ಸರಿಯಿದೆ ಎಂದು ಪರೀಕ್ಷಿಸಿ - ಸಾರ್ ನೀವು ವಾಪಾಸ್ ಬಂದಾಗ ನಿಮಗೆ ನಿಮ್ಮ ಮನೆ ವಾಪಾಸ್ ತಗೊಳ್ಳಿ, ನೀವು ನಾನು ಕೇಳಿದಕ್ಕಿಂತ ಮೂರು ಪಟ್ಟು ಕೊಟ್ಟಿದ್ದೀರಾ ಅಂದ. ಅದಕ್ಕೆ ನಾನು ಇನ್ನು ಮೂರು ದಿನ ಆ ಹಣದಲ್ಲಿ ಎಷ್ಟು ಸುಖ ಅನುಭವಿಸ ಬಹುದೋ ಹೋಗಿ ಅನುಭವಿಸಿ ಎಂದು ತಿಳಿಸಿದಾಗ ಅವನು ನಕ್ಕ. ಮತ್ತೆ ಮೂರು ದಿನ ಯಾವಾಗಲು ಮಾತನಾಡೋಣ ಎಂದು ಹೇಳಿ ವಾಕಿ-ಟಾಕಿ ಬದಿಗಿಟ್ಟೆ."

"12 ಡಿಸೆಂಬರ್ 2040: ನನ್ನ ಊಹೆ ಪ್ರಕಾರ ಇನ್ನೊಂದು ದಿನ ಮಾತ್ರ ಬಾಕಿ ಇತ್ತು . ಆ ದಿನ ನಾವು ಕೋಮಾಗೆ ಹೋಗಲೇ ಬೇಕಿತ್ತು. ನಾವು ಮೂರುಜನ ಬಹುಷಃ ಕೊನೆಯ ಬಾರಿಗೆ ಒಟ್ಟಿಗೆ ಕೂತು ಊಟ ಮಾಡಿದೆವು. ನೀನು ಅವತ್ತು ಬಹಳ ಪ್ರಶ್ನೆಗಳನ್ನು ಕೇಳಿದೆ ಅದಾವುದಕ್ಕೂ ನನ್ನ ಬಳಿ ಉತ್ತರವಿರಲಿಲ್ಲ, ಕಂದ ನಿನಗೆ ನಾಳೆ ಉತ್ತರ ಹೇಳುತ್ತೇನೆ ಎಂದು ಸುಳ್ಳು ಹೇಳಿದೆ ಕ್ಷಮಿಸು. ಈಗ ಬಹುಷಃ ನಿನಗೆ ಎಲ್ಲ ಉತ್ತರಗಳು ಸಿಗುತ್ತಿರಬೇಕು." ಎಂದ ಅಭಿ, ತನ್ನ ಹೆಂಡತಿಯನ್ನು ಕರೆದರು "ಬಾ ಅನು, ಸಾಕು ಕೆಲಸ ನಿಲ್ಲಿಸಿ ನೀನು ಕಂದನ ಜೊತೆ ಮಾತನಾಡು". ಮಾನಿಟರ್ ಮೇಲೆ ಜೀವನ್ ಗೆ ಅವನ ಅಪ್ಪ ಅಮ್ಮ ಒಟ್ಟಾಗಿ ಕಂಡಾಗ ಚೇರಿನಿಂದ ಎದ್ದು ನಮಸ್ಕರಿಸಿ ಮಾನಿಟರ್ ಅಪ್ಪಿ ಕೊಂಡ. ಅಮ್ಮನ ಕಣ್ಣಿನಂಚಿನಿಂದ ಹೊರಬರಲು ಕಣ್ಣೀರು ಕಾತರದಿಂದ ಕಾಯುತ್ತಿದ್ದಂತಿತ್ತು. ಅನು ಮಗನಿಗೆ "ಕಂದ, ನಾವು ಉಳಿಯುತ್ತೇವೋ ಇಲ್ಲವೋ ಗೊತ್ತಿಲ್ಲ ಕಣೋ. ಆದರೆ ನೀನು ಗಾಢನಿದ್ರೆಯಲ್ಲಿ ಇದ್ದಾಗ ನಿನಗೆ ನೀನು ಸ್ಕೂಲಿನಲ್ಲಿ 12ನೆ ಕ್ಲಾಸ್ ತನಕ ಕಲಿಯ ಬೇಕಾದ ಎಲ್ಲ ಸಬ್ಜೆಕ್ಟ್ಸ್ ಅನ್ನು ತಿಳಿಯುವಂತೆ ಆಡಿಯೋ ಮೂಲಕ ನಿನಗೆ ಕಲಿಯುವಂತೆ ನಾನು ವ್ಯವಸ್ಥೆ ಮಾಡಿದ್ದೇನೆ. ಅದರ ಸದುಪಯೋಗ ಮಾಡಿಕೋ. ಅಕಸ್ಮಾತ್ ನೀನು ಎದ್ದಾಗ ನಾವಿಲ್ಲದಿದ್ದರೆ, ನಿನಗೆ ಮುಂದಿನ ಮನುಷ್ಯ ಕುಲಕ್ಕೆ ಯಾವುದೂ ಸರಿ ಅನ್ನಿಸುವುದೋ ಅದನ್ನು ಮಾಡು. ಪಾಪ ಪುಣ್ಯಗಳ ಯೋಚನೆ ಮಾಡದೇ ನಿನ್ನ ನಿರ್ಧಾರ ತೆಗೆದುಕೋ. ನನಗೆ ಮಾತನಾಡಲು ಶಬ್ದಗಳೇ ಹೊಳೆಯುತ್ತಿಲ್ಲ. ಇನ್ನಪ್ಪ ಮಾತನಾಡುತ್ತಾರೆ ನಾನು ಅವರ ಜೊತೆ ಸುಮ್ಮನೆ ಕೂತಿರುತ್ತೇನೆ" ಎಂದ ಅನು, ಅಭಿಯ ಎದೆಯ ಮೇಲೆ ಒರಗಿದಳು. 

ಜೀವನ್ ಕಣ್ಣೊರಿಸಿಕೊಂಡು ಸ್ತಬ್ಧನಾಗಿ ಕೂತ.

ಅಭಿ ತಮ್ಮ ಮಾತನ್ನು ಮುಂದುವರಿಸಿದರು 

" ನನಗೆ ಆಗ ಬಹಳ ಕಾಡಿದ ಒಂದು ಶ್ಲೋಕ ಶ್ರೀ ಆದಿ ಶಂಕರರ ಭಜಗೋವಿಂದಂ ನಲ್ಲಿ ಬರುವ

ಪುನರಪಿ ಜನನಂ ಪುನರಪಿ ಮರಣಂ

ಪುನರಪಿ ಜನನೀಜಠರೇ ಶಯನಮ್|

ಅದರ ಅರ್ಥ ಮತ್ತೆ ಹುಟ್ಟುವುದು, ಮತ್ತೆ ಸಾಯುವುದು, ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಅದೇ ರೀತಿ ನಾವೆಲ್ಲ ಭೂಮಿ ತಾಯಿಯ ಗರ್ಭದಲ್ಲಿ ಸೇರಿ ಮಲಗುವ ಕಾಲ ಬಂದಿದೆ. ಮತ್ತೆ ಹುಟ್ಟುವ ಯೋಚನೆ ಸಧ್ಯಕ್ಕೆ ನನಗಿರಲಿಲ್ಲ. "

"ಇಂಡ್ಯೂಸ್ಡ್ ಕೋಮಾಗೆ ನಿನ್ನನ್ನು ಮತ್ತು ನಿನ್ನಮ್ಮನನ್ನು ಕಳುಹಿಸಿದ ನಂತರ ನಾನು ಕೋಮಾಗೆ ಹೋಗುವುದೆಂದು ತೀರ್ಮಾನಿಸಿದೆ. ಅನುಗೆ ಈ ವಿಷಯ ತಿಳಿಸಿದೆ. ಅದಕ್ಕೆ ಅವಳು, ನೀನು ಕಷ್ಟಪಟ್ಟು ಈ ಕೆಲಸ ಮಾಡಿದ್ದಿಯ ಆದರೆ ಮತ್ತೆ ನಾವು ಬದುಕುಳಿದು ಸೇರಿತ್ತೇವೋ ಇಲ್ಲವೋ ನನಗೆ ಸಂದೇಹವಿದೆ. ನಾವಿಬ್ಬರು ಮದುವೆ ಆದಾಗಿನಿಂದ ನೀನು ನನ್ನನ್ನು ರಾಣಿಯ ಹಾಗೆ ನೋಡಿಕೊಂಡಿದ್ದೀಯ, ಅದಕ್ಕೆ ನಾನು ಚಿರಋಣಿ. ನನ್ನಿಂದ ಏನಾದರು ತಪ್ಪಾಗಿದ್ದಲ್ಲಿ ಕ್ಷಮಿಸು ಅಭಿ ಅಂದಳು. ನನ್ನ ಬಳಿ ಉತ್ತರಿಸಲು ಏನೂ ಪದಗಳಿಲ್ಲದೆ ಅವಳನ್ನು ಅಪ್ಪಿ ಹಿಡಿದೆ. ಇಬ್ಬರು ಒಬ್ಬರನೊಬ್ಬರು ಬೀಳ್ಕೊಡುವ ಸಂದರ್ಭ ಬಂದಾಗ, ಮಲಗಿದ್ದ ನಿನಗೆ ಮುತ್ತಿಟ್ಟವು. ಅನು ನಾನ್ ರೆಡಿ ಅಂದಾಗ, ನಿನ್ನನ್ನು ಮಲಗಿಸಿ, ಅನುಗೆ ಅಳವಡಿಸ ಬೇಕಾದ ಎಲ್ಲ ಟ್ಯೂಬ್ಸ್ ಮತ್ತು ಪ್ರೋಬ್ ಗಳನ್ನು ಫಿಕ್ಸ್ ಮಾಡಿ ಅವಳಿಗೆ ಇಂಡ್ಯೂಸ್ಡ್ ಕೋಮಾಗೆ ಹೋಗಲು ಇಂಜೆಕ್ಷನ್ ಕೊಟ್ಟೆ. ಅವಳು ನಿಧಾನ ವಾಗಿ ನಿದ್ರೆಗೆ ಜಾರುತ್ತ, ಮತ್ತೆ ಸೇರೋಣ ಓಂ ನಮಃ ಶಿವಾಯ ಅಂದು ಕಣ್ಣುಮುಚ್ಚಿದಳು. ಅವಳ ಮೆಡಿಕಲ್ ಮಾನಿಟರ್ ಚೆಕ್ ಮಾಡಿದೆ, ಎಲ್ಲ ಪ್ಯಾರಾಮೀಟರ್ಸ್ ಸರಿಯಾಗಿ ತೋರಿಸಿದ ಮೇಲೆ, ನಿನಗೂ ಎಲ್ಲ ಟ್ಯೂಬ್ಸ್ ಮತ್ತು ಪ್ರೋಬ್ಸ್ ಗಳನ್ನು ಫಿಕ್ಸ್ ಮಾಡಿ, ಇಂಜೆಕ್ಷನ್ ಕೊಟ್ಟೆ. ಆಗಲೇ ನಿದ್ದೆಯಲ್ಲಿದ್ದ ನಿನಗೆ ಇದರ ಅರಿವಾಗಲಿಲ್ಲ. ನಿನ್ನ ಮೆಡಿಕಲ್ ಪ್ಯಾರಾಮೀಟರ್ಸ್ ಕೂಡ ಮಾನಿಟರ್ ನಲ್ಲಿ ತೋರಿಸಲು ಆರಂಭಿಸಿತು. ಒಂದು ಘಂಟೆಯ ನಂತರ ನಾನು ಸಹ ಎಲ್ಲ ಟ್ಯೂಬ್ಸ್ ಮತ್ತು ಪ್ರೋಬ್ಸ್ ಗಳನ್ನು ಫಿಕ್ಸ್ ಮಾಡಿಕೊಂಡು ಇಂಜೆಕ್ಷನ್ ಹತ್ತಿರ ಇಟ್ಟು ಕೊಂಡೆ. "

"ಭೂಮಿಯ ಆಚೆ ನಾನು ಸಿದ್ಧ ಪಡಿಸಿದ್ದ ಸೆನ್ಸರ್ಸ್ ಮತ್ತು ವಿಡಿಯೋ ಕ್ಯಾಮೆರಾ ಗಳಿದ ಅಲ್ಲಿನ ಆಗು ಹೋಗುಗಳು ಟಿವಿ ಮೇಲೆ ಗೋಚರಿಸುತ್ತಿತ್ತು. ಇನ್ನೊಂದು ವಿಷಯ, ನಮ್ಮ ಮೂರು ಜನಕ್ಕೆ ಲಿಕ್ವಿಡ್ ಆಹಾರ, ನೀರು, ಆಕ್ಸಿಜೆನ್ ವ್ಯವಸ್ಥೆ ಆಗುವಂತೆ ಬಾಯಿ ಮತ್ತು ಮೂಗಿಗೆ ಫಿಕ್ಸ್ ಮಾಡಿದ್ದ ಟ್ಯೂಬ್ಸ್ ಗಳಿಂದ ಸರಿಯಾದ ವ್ಯವಸ್ಥೆ ಆಗಿತ್ತು. ಕಿವಿಗೆ ಯಾವುದೇ ಅಪಾಯವಾಗದಂತೆ ಇಯರ್ ಪ್ಲಗ್ಸ್ ಮುಚ್ಚುವಂತೆ ಮಾಡಿದ್ದೆ. ಇನ್ನು ಪ್ರತಿದಿನ ಸಾಕಷ್ಟು ವ್ಯಾಯಾಮ ದೇಹಕ್ಕೆ ಆಗಲು ನಾವು ಮಲಗಿದ್ದಾಗಲೂ ಸುಮಾರು 2 ಕಿಲೋ ಮೀಟರ್ಸ್ ಅಷ್ಟು ವಾಕಿಂಗ್, ಸ್ವಲ್ಪ ಯೋಗ ಮತ್ತು ಕೆಲವು ಬೇಕಾದ ಸ್ಟ್ರೆಚಿಂಗ್ ವ್ಯಾಯಾಮ ನಮಗೆ ಅವುಗಳೇ ಮಾಡಿಸುವ ಉಪಕರಣಗಳನ್ನು ನಮ್ಮ ದೇಹಕ್ಕೆ ಮತ್ತು ಮಂಚಕ್ಕೆ ಫಿಕ್ಸ್ ಮಾಡಲಾಗಿತ್ತು. ಇನ್ನು ಮಲ ಮೂತ್ರಗಳು ಟ್ಯೂಬ್ಸ್ ಮುಖಾಂತರ ನಮ್ಮಿಂದ ಹೊರತೆಗೆದು ಅವನ್ನು ಸಂಸ್ಕರಿಸಿ ಭೂಮಿಯ ಒಳ ಭಾಗಕ್ಕೆ ಕಳಿಸುವ ಹಾಗೆ ನಮ್ಮ ರೂಮನ್ನು ಕಟ್ಟಿದ್ದೆವು."

"ನೀನು ಮತ್ತು ನಿನ್ನಮ್ಮ ಆಗಲೇ ಕೋಮಾಗೆ ಹೋಗಿ ಒಂದು ಘಂಟೆ ಆಯಿತು ನೋಡು" ಎಂದು ನಾವಿಬ್ಬರಿದ್ದ ಬೇರೆ ಬೇರೆ ಮಂಚವನ್ನು ಟಿವಿಯಲ್ಲಿ ತೋರಿಸಿದರು. 

"13 ಡಿಸೆಂಬರ್ 2040: ಆ ದಿನ ಬಂದೇ ಬಿಟ್ಟಿತು, ನಾನು ಭೂಮಿಯಮೇಲೆ ಆಗುತ್ತಿದ್ದ ಎಲ್ಲ ವಿಷಯಗಳನ್ನು ಸೆನ್ಸರ್ ಗಳು, ವಿಡಿಯೋ ಕ್ಯಾಮೆರಾದ ಮೂಲಕ ಹಾಗೂ ಸ್ಯಾಟಲೈಟ್ ಇಮೇಜ್ ಗಳ ಮೂಲಕ ನೋಡುತ್ತಿದ್ದೆ. ಆ ಪ್ರಭಲವಾದ ರೇಡಿಯೋ ತರಂಗಗಳು ಭೂಮಿಯ ವಾಯುಮಂಡಲವನ್ನು ಪ್ರವೇಶಿಸಿದವು. ಬಲವಾದ ಭೂಕಂಪನವಾಯಿತು, ನಮ್ಮ ರೂಮಿಗೆ ಯಾವುದೇ ಅಪಾಯವಾಗಲಿಲ್ಲ. ಸ್ಯಾಟಲೈಟ್ ಇಮೇಜ್ ಗಳು ಭೂಮಿ ಕೆಂಪು ಬಣ್ಣಕ್ಕೆ ತಿರುಗಿ ಎಲ್ಲಡೆ ಬೆಂಕಿ ಹಚ್ಚಿದ ಹಾಗೆ ಗೋಚರಿಸಿತು. ನನಗೆ ಬಹಳ ಭಯವಾಯಿತು, ಹೇಳಿಕೊಳ್ಳಲು ಯಾರು ಇರಲಿಲ್ಲ. ಭೂಮಿಯ ಮೇಲಿನ ಇಂಟರ್ನೆಟ್ ಕನೆಕ್ಷನ್ ಕಟ್ ಆಯಿತು. ಆದರೆ ಸ್ಯಾಟೆಲೈಟ್ ಕನೆಕ್ಷನ್ ಮುಂದುವರಿಯಿತು. ಸ್ಯಾಟೆಲೈಟ್ ಮೂಲಕ ನನಗೆ ತಿಳಿದದ್ದು, ಭೂಮಿಯ ಮೇಲೆ ಅಣುವಿಕಿರಣ ಆಕ್ರಮಿಸಿ ಭೂಮಿಯ ಮೇಲಿನ ಎಲ್ಲ ಜೀವರಾಶಿಗಳು ನಾಶವಾಗಿರುವುದು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಭೂಮಿಯ ಒಳಗಿನ ಅಮೂಲ್ಯ ಖನಿಜ, ತೈಲ, ಯುರೇನಿಯಂ,ಥೋರಿಯಂ, ಪ್ಲುಟೋನಿಯಂ, ಮೊದಲಾದ ಅಣುವಿಕಿರಣ ಪದಾರ್ಥಗಳನ್ನು ಹೊರತೆಗೆದು ಭೂಮಿಯ ಮೇಲೆ ಇಟ್ಟದ್ದೇ ಈ ಎಲ್ಲ ಅನಾಹುತಕ್ಕೆ ಕಾರಣವಾಗಿದ್ದು. ಭೂಮಿಯನ್ನು ಹಾಗೂ ಪ್ರಕೃತಿಯನ್ನು ತನ್ನ ಪಾಡಿಗೆ ಬಿಟ್ಟಿದ್ದಾರೆ ಈಗ ಬಂದ ರೇಡಿಯೋ ತರಂಗಗಳು ಕೇವಲ ಸ್ವಲ್ಪ ಭೂಮಿಯನ್ನು ಕಂಪಿಸಿ ಸಣ್ಣ ಪ್ರಮಾಣದ ಸಾವು ನೋವು ಸಂಭವಿಸುತ್ತಿತ್ತು. ಆದರೆ ದೈವೇಚ್ಛೆ ಇದು ನಡೆಯ ಬೇಕಿತ್ತೇನೋ ನಡೆದಿದೆ."

"ನೀನು ಇನ್ನು ಮುಂದೆ ಏನೂ ಮಾಡಬೇಕೆಂದು ಆಗೋ ಆ ಮಿಂಚು ಹೇಳುತ್ತಾನೆ. ಅವನು ಹೇಳಿದ ಹಾಗೆ ಮಾಡು ಅಥವಾ ನಿನಗೆ ಯಾವುದು ಸರಿ ಎನ್ನಿಸುತ್ತೋ ಹಾಗೆ ಮಾಡು ಮಗನೆ. ಏಕೆಂದರೆ ನಾನು ನನ್ನ ಸಿದ್ಧಾಂತವನ್ನು ಯಾರ ಮೇಲೂ ಇದುವರೆಗೂ ಹೇರಿಲ್ಲ ಮತ್ತು ಮುಂದೆಯೂ ಹೇರುವುದಿಲ್ಲ. "

"ಮುಂಚೆಯೇ ಹೇಳಿದ ಹಾಗೆ ನಿನ್ನ ಮಂಚದ ಪಕ್ಕ ನಾನು ಮತ್ತು ಅನು ಮಲಗಿರುತ್ತೇವೆ. ನಾವು ಅಕಸ್ಮಾತ್ ಸತ್ತರೆ, ನಮ್ಮ ದೇಹಕ್ಕೆ ಅಳವಡಿಸಿರುವ ಸೆನ್ಸರ್ ಗಳು ಗುರುತಿಸಿ ನಮ್ಮ ದೇಹವನ್ನು ಟ್ಯೂಬ್ಸ್ ಮತ್ತು ಪ್ರೋಬ್ಸ್ ಗಳಿಂದ ಬೇರ್ಪಡಿಸಿ, ದೇಹವನ್ನು ಬಾತ್ರೂಮ್ ಸಮೀಪದ ಮತ್ತೊಂದು ಪುಟ್ಟ ಕೋಣೆಗೆ ತೆಗೆದುಕೊಂಡು ಹೋಗಿ, ದೇಹವನ್ನು ಸುಟ್ಟು, ಬೂದಿಯನ್ನು ಭೂಮಿಯ ಒಳಗೆ ಹುಗಿದಿಡುವಂತೆ ಮಾಡಿದ್ದೇನೆ. ನಮ್ಮಿಬ್ಬಿರ ವಯಸ್ಸು 10 ವರ್ಷದ ನಂತರ 70 ದಾಟಿರುತ್ತೆ ಅದಕ್ಕೆ ನಾವು ಬದುಕುವ ಸಾಧ್ಯತೆ ಬಹಳ ಕಡಿಮೆ. ಚಿಂತಿಸದಿರು, ನೀನು ನಮಗೆ ಹಾಗೂ ಪ್ರಕೃತಿಮಾತೆಗೆ ಭರವಸೆಯ ಕೂಸು. ಒಂದು ಜ್ಞಾಪಕ ಇಟ್ಟಿಕೊ ಭಯ ಸಾವನ್ನು ನಿಲ್ಲಿಸುವುದಿಲ್ಲ ಆದರೆ ಬದುಕನ್ನು ನಿಲ್ಲಿಸುತ್ತೆ, ಯಾವುದಕ್ಕೂ ಭಯ ಪಡಬೇಡ - ಧೈರ್ಯ ವಾಗಿ ಮುನ್ನುಗ್ಗು."

"ಇನ್ನು ಮುಂದೆ ಮಿಂಚುನೇ ನಿನಗೆ ತಾಯಿ, ತಂದೆ, ಗೆಳೆಯ ಮತ್ತು ಗೈಡ್." ಮಿಂಚು ಅದನ್ನು ಕೇಳಿ "ನಾನ್ ಹೇಳಲಿಲ್ವ ನಿಂಗೆ" ಅಂದು ಅಪ್ಪಿಕೊಂಡ. 

"ನಾನು ಇನ್ನು ಇಂಜೆಕ್ಷನ್ ತೆಗೆದುಕೊಳ್ಳಲೇ ಬೇಕು. ನಿನಗೆ ಮತ್ತು ಪ್ರಕೃತಿಮಾತೆಗೆ ವಿದಾಯ ಹೇಳುವ ಸಮಯ ಬಂತು. ನಿನಗೆ ಒಳ್ಳೆಯದಾಗಲಿ, ನೀನು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ನನ್ನ ಸಂಪೂರ್ಣ ಸಮ್ಮತಿಯಿದೆ. ಈಗ ರೂಮಿನಲ್ಲಿರುವ ಸೆನ್ಸರ್ ಗಳ ಸಹಾಯದಿಂದ ಎಲ್ಲವು ಆಟೋಮ್ಯಾಟಿಕ್ ಆಗಿ ಕೆಲಸ ಮಾಡುತ್ತೆ. ಮಿಂಚು ಹೇಳಿದ ರೀತಿ ನೀನು ಕೆಲಸ ಮಾಡು. ಥ್ಯಾಂಕ್ಸ್ ಮಿಂಚು ನಿನ್ನ ಸಹಾಯಕ್ಕೆ. ಎಲ್ಲಾರಿಗೂ ಒಳ್ಳೆಯದಾಗಲಿ, ನಮಸ್ಕಾರ" ಅಂದು ಅಭಿ ನಿಧಾನವಾಗಿ ಮಾಯವಾದರು.

ಸ್ವಲ್ಪ ಸಮಯ ಜೀವನ್ ಬಿಕ್ಕಿ ಬಿಕ್ಕಿ ಅತ್ತ. ಮಿಂಚು ಅವನನ್ನು ಅವನ ಪಾಡಿಗೆ ಅವನಿರುವಂತೆ ಬಿಟ್ಟಿದ್ದ. 

ಆಮೇಲೆ ಎದ್ದ ಜೀವನ್ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಂಡ. ಪರವಾಗಿಲ್ಲ ಚೆನ್ನಾಗೆ ಇದ್ದೀನಿ ಎಂದುಕೊಂಡ. 

ಮಿಂಚು ಅವನ ಬಳಿ ಬಂದು "ಜೀವ್, ನೀನು ಈಗ  ಯೋಗ ಮಾಡು ನಾನು ತೋರಿಸಿದ ರೀತಿ ಆಮೇಲೆ ಶವಾಸನ ಮಾಡಿ ಸ್ವಲ್ಪ ಹೊತ್ತು ಮಲಗಿ ಏಳು ಬಾ" ಎಂದು ಜೀವನ್ ಗೆ ಯೋಗ ಮಾಡಿಸಿ ಮಲಗಿಸಿದ.

ಜೀವನ್ ಎದ್ದಾಗ, ಮಿಂಚು ಅವನಿಗೆ ರೂಮಿನ ಎಲ್ಲ ಜಾಗಗಳನ್ನು ತೋರಿಸಿದ. ಅಲ್ಲಿರುವ ಎಲ್ಲ ಮಷೀನ್ ಗಳನ್ನು ಹೇಗೆ ಆಪರೇಟ್ ಮಾಡ ಬೇಕು, ಅವುಗಳು ಯಾವ ಕೆಲಸಕ್ಕೆ ಉಪಯೋಗಿಸ ಬೇಕು ಎಂದು ಹೇಳಿಕೊಟ್ಟ. 

ಜೀವನ್ ರೂಮಿನಲ್ಲಿದ್ದ ಕೆಲವು ಪುಸ್ತಕಗಳು ಮತ್ತು ಕಂಪ್ಯೂಟರ್ ನಲ್ಲಿದ್ದ ಬಹಳ ರಿಸರ್ಚ್ ಪೇಪರ್ ಗಳನ್ನು ನಿಧಾನವಾಗಿ ಓದ ತೊಡಗಿದ. 10 ವರ್ಷ ಅವನು ನಿದ್ದೆಯಲ್ಲೇ ಪ್ಯೂರ್ ಸೈನ್ಸ್ ಗ್ರ್ಯಾಜುಯೆಟ್ ಮಟ್ಟದ ವಿಷಯಗಳ ಅಧ್ಯಯನದ ಉಪಯೋಗ ಅವನಿಗೆ ಗೊತ್ತಾಯಿತು. ಕಂಪ್ಯೂಟರ್ ನಲ್ಲಿ ಅವನ ತಂದೆ ಒಂದು ಫೋಲ್ಡರ್ ಹೆಸರಿಟ್ಟಿದ್ದರು, "Must  watch videos" ಅಂತ. ಆ ವಿಡಿಯೋ ಗಳನ್ನು ಮುಂದಿನ ಮೂರು ದಿನ ನೋಡಿದ. ಪ್ರತಿ ದಿನದ ಬೇರೆ ಕೆಲಸ ಹಾಗೂ ಮಿಂಚು ಜೊತೆ ಆಟವಾಡುವುದನ್ನು ಮರೆಯಲಿಲ್ಲ. ಈ ಎಲ್ಲವನ್ನು ಅಧ್ಯಯನ ಮಾಡಿದ ಮೇಲೆ ಜೀವನ್ ಗೆ ಅನ್ನಿಸಿದ್ದು ಮನುಷ್ಯನೇ ಈ ಜಗತ್ತಿನ ಅವನತಿಗೆ ಕಾರಣ. ಅವನ ಸ್ವಾರ್ಥದಿಂದ ಬೇರೆಯ ಮುಗ್ಧ ಜೀವಿಗಳೆಲ್ಲ ಬಲಿಪಶುಗಳಾದವು ಎಂದು. ಸುಂದರ ಪ್ರಕೃತಿಯನ್ನು ಪೂರ್ತಿ ನಾಶ ಮಾಡಿ ಮನುಷ್ಯ ತಾನು ನಾಶವಾದ. ಅಪ್ಪ ಅವನು ಚಿಕ್ಕವನಾಗಿದ್ದಾಗ ಹೇಳಿದ್ದ ಭಸ್ಮಾಸುರನ ಕಥೆ ಅವನಿಗೆ ಜ್ಞಾಪಕಕ್ಕೆ ಬಂತು. 

ಕುತೂಹಲ ದಿಂದ ಮಾನಿಟರ್ ಬಳಿ ಹೋಗಿ ಭೂಮಿಯ ಮೇಲಿನ ಪರಿಸ್ಥಿತಿ ಹೇಗಿದೆ ಎಂದು ನೋಡಲು ಕುಳಿತ. ಸ್ಯಾಟಲೈಟ್ ಇಮೇಜ್ ಗಳು ಮತ್ತು ಸೆನ್ಸರ್ ಗಳ ಮುಖಾಂತರ ಬಂದ ಎಲ್ಲ ವಿಷಯಗಳನ್ನು ನೋಡಿದ ಮೇಲೆ ತಿಳಿಯಿತು, ಭೂಮಿಯ ಮೇಲೆ ಯಾವುದೇ ಮರ ಗಿಡಗಳು ಸಹ ಇಲ್ಲ, ಯಾವುದೇ ಜೀವಿಗಳು ಇಲ್ಲ ಎಂದು. ಬಹಳ ಬೇಸರ ಮತ್ತು ಕೋಪ ಎರಡು ಜೊತೆ ಜೊತೆ ಯಾಗಿ ಬಂತು. 

ಮಿಂಚು, ಜೀವನ್ ಗೆ ಕೇಳಿದ "ನಿನಗೆ ಆಚೆ ಭೂಮಿಯ ಮೇಲೆ ಹೋಗಲು ಆಸೆ ಇದೆಯಾ? ಈಗ ಅಣುವಿಕಿರಣ ಕಡಿಮೆ ಯಾಗಿದೆ. ಆದರೆ ನೀನು ಸೇಫ್ಟಿ ಉಡುಪು ಧರಿಸಿ ಹೊರಗೆ ಹೋಗ ಬಹುದು. ನಿನಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ನಾನು ತೆಗೆದುಕೊಂಡು ಬರುತ್ತೇನೆ. ನಾವಿಬ್ಬರು ಜೊತೆಗೆ ಕೆಲಸ ಮಾಡಿ ಮತ್ತೆ ಭೂಮಿಯ ಮೇಲೆ ಗಿಡ ಮರ ಬೆಳೆಯುವ ರೀತಿ ಮಾಡಿ ಮತ್ತೆ ಜೀವಿಗಳನ್ನು ಭೂಮಿಗೆ ತರಬಹುದು. ನಿನ್ನ ಅಪ್ಪ ಅದಕ್ಕೆ ಬೇಕಾದ ಎಲ್ಲ ಬೀಜಗಳು, ಜೀವಿಗಳ ಮೊಟ್ಟೆಗಳನ್ನು ಫ್ರೀಜ್ ಮಾಡಿ ಇಟ್ಟಿದ್ದಾರೆ. ನಾವು ಜೀವಿಗಳನ್ನು ಮತ್ತೆ ಹುಟ್ಟಿಸ ಬೇಕಾದರೆ ಈ ಕೆಲಸ ವನ್ನು ಇನ್ನು ಎರಡು ದಿನದಲ್ಲಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಫ್ರೀಜ್ ಮಾಡಿರುವ ಎಲ್ಲ ಸಾಮಗ್ರಿಗಳು ಅವುಗಳ ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಬಾ ಹೋಗಿ ಪ್ರಕೃತಿಯನ್ನು ಸೃಷ್ಟಿಸೋಣ". ಅದನ್ನು ಕೇಳಿ ಜೀವನ್ ಗೆ ಭೂಮಿಯ ಮೇಲೆ ಹೋಗಲು ಆಸೆ ಆಯಿತು.

ಜೀವನ್ ಸೇಫ್ಟಿ ಉಡುಪು ಧರಿಸಿ ಹೋಗಲು ರೆಡಿ ಆದ. ಮಿಂಚು ಭೂಮಿಯ ಮೇಲೆ ತೆಗೆದು ಕೊಂಡು ಹೋಗಲು ಒಂದು ದೊಡ್ಡ ಬಾಕ್ಸ್ ಅನ್ನು ರೆಡಿ ಮಾಡಿದ್ದ. 

ಭೂಮಿಯ ಮೇಲೆ ಹೋಗಲು ಒಂದು ಲಿಫ್ಟ್ ರೀತಿಯ ಕ್ಯಾಪ್ಸುಲ್ ಇತ್ತು ರೂಮಿನ ಕೊನೆಯಲ್ಲಿ. ಮಿಂಚು ಮತ್ತು ಜೀವನ್ ಆ ಲಿಫ್ಟ್ ಒಳ ಹೊಕ್ಕರು. ಭೂಮಿಯ ಮೇಲೆ ತೆಗೆದುಕೊಂಡು ಹೋಗುವ ಬಾಕ್ಸ್ ಲಿಫ್ಟ್ ಕೆಳಗೆ ಫಿಕ್ಸ್ ಮಾಡಿದರು. ಮಿಂಚು ಲಿಫ್ಟ್ ನ ಮಾನಿಟರ್ ಮೇಲೆ ಒಂದು ಕೋಡ್ ಹಾಕಿದಾಗ ನಿಧಾನವಾಗಿ ಲಿಫ್ಟ್ ಮೇಲೆ ಹೋಗಲು ಶುರುವಾಯಿತು. ಲಿಫ್ಟ್ ನಿಂತ ಶಬ್ದವಾಯಿತು, ನಂತರ ಭೂಮಿಯನ್ನು ಕೊರೆಯುವ ಶಬ್ದ ಶುರುವಾಗಿ ನಿಂತು, ವಾಕ್ಯೂಮ್ ಕ್ಲೀನರ್ ಶಬ್ದ ಶುರುವಾಯಿತು. ಲಿಫ್ಟ್ ಮಾನಿಟರ್ ಮೇಲೆ ನಾವು ಭೂಮಿಗೆ ಬಂದಿರುವುದು ತೋರಿಸಿತು. ಲಿಫ್ಟ್ ಮೇಲಿನ ಭಾಗದ ಬಾಗಿಲು ನಿಧಾನವಾಗಿ ಆಟೋಮ್ಯಾಟಿಕ್ ಆಗಿ ತೆಗೆದುಕೊಂಡಿತು. ಲಿಫ್ಟ್ ನಲ್ಲಿದ್ದ ಏಣಿಯ ಮೂಲಕ ಜೀವನ್ ಮತ್ತು ಮಿಂಚು ಹೊರಬಂದು ಭೂಮಿಯ ಮೇಲೆ ಕಾಲಿಟ್ಟರು. ಸೂರ್ಯ ನೆತ್ತಿಯಮೇಲೆ ಇದ್ದ. ಮೊದಲ ಬಾರಿ ಜೀವನ್ ಅಷ್ಟು ಬೆಳಕನ್ನು ನೋಡಿದ್ದು. ಕಣ್ಣಿಗೆ ಧರಿಸಿದ್ದ ಕಪ್ಪು ಕನ್ನಡಕ ಉಪಯೋಗಕ್ಕೆ ಬಂತು. ಸುತ್ತಲೂ ನೋಡಿದ ಜೀವನ್, ಭೂಮಿಯ ಮೇಲೆ ಯಾವ ಜೀವಿಯು ಇರಲಿಲ್ಲ. ಅಪ್ಪ ಮಾನಿಟರ್ ನಲ್ಲಿ ಮೊದಲು ಕ್ವಾರಿ ಇದ್ದದ್ದು, ಭೂಮಿಯ ಮೇಲಿನ ಪರಿಸರವನ್ನು ತೋರಿಸಿದ್ದರು. ಅದು ಈಗ ಬರೀ ಕನಸು ಮಾತ್ರ. ಅವನಿಗೆ ಭೂಮಿಯ ಮೇಲೆ ಯಾಕಾದರೂ ಬಂದೆ ಅನ್ನಿಸತೊಡಗಿತ್ತು. ಅಪ್ಪ ಕೊಟ್ಟಿರುವ ಸಲಕರಣೆಗಳಿಂದ ಖಂಡಿತ ಜೀವಿಗಳನ್ನು ಮರು ಸೃಷ್ಟಿಸಬಹುದು. ಆದರೆ ಮನುಷ್ಯ ಮತ್ತೆ ಸೃಷ್ಟಿಯಾದರೆ ಈ ಪ್ರಕೃತಿಯನ್ನು ಮತ್ತೆ ನಾಶ ಮಾಡುವುದಿಲ್ಲ ಎಂದು ಯಾರು ಗ್ಯಾರಂಟಿ ಕೊಡ್ತಾರೆ? 

ಜೀವನ್ ಜೋರಾಗಿ ಕೂಗತೊಡಗಿದ, ಮಿಂಚು ಗಾಭರಿ ಪಟ್ಟು ದೂರ ಸರಿದ.

" ಹೇ ಮಾನವ ನೀನೆಷ್ಟು ಸ್ವಾರ್ಥಿ ಏನನ್ನೂ ಉಳಿಸಲಿಲ್ಲವಲ್ಲೋ. ಸ್ವರ್ಗದಂತೆ ಇದ್ದ ನಮ್ಮ ಭೂಮಿಯನ್ನು ಸಂಪೂರ್ಣ ನಾಶ ಮಾಡಿದ ನೀನು ಉಳಿದಿಲ್ಲವಲ್ಲೋ? ನಿನ್ನಷ್ಟು ಕ್ರೂರಿ ಯಾರೂ ಇಲ್ಲ. ನಿನ್ನ ರಾಜಕೀಯ, ಆಸ್ತಿ ಕಬಳಿಕೆ, ಸ್ವಾರ್ಥ, ಜಾತಿಗಳ ಗುದ್ದಾಟ, ಹೊಡೆದಾಟ ಇವುಗಳಿಂದ ನಿನಗೆ ಏನು ಸಿಕ್ಕಿತು? ಸಿಕ್ಕಿದ್ದು ನಿನಗೆ ಸಾವು ಮಾತ್ರ! ನಾನು ಮತ್ತೆ ಜೀವಿಗಳನ್ನು ಸೃಷ್ಟಿಸಿ ಭೂಮಿಗೆ ಮತ್ತೆ ಮನುಷ್ಯನನ್ನು ತಂದು ಪ್ರಕೃತಿ ಮಾತೆಗೆ ಅಪಮಾನ ಮಾಡಲ್ಲ." ಅವನು ತಂದಿದ್ದ ಜೀವಿಗಳ ಬಾಕ್ಸ್ ನಿಂದ "Bring  human  back  to  Earth "  ಎನ್ನುವ ಬಾಕ್ಸ್ ಅನ್ನು ತೆಗೆದು ನಾಶ ಮಾಡಿ ಪುಡಿ ಪುಡಿ ಮಾಡಿದ. ಮತ್ತಿತರ ಬಾಕ್ಸ್ ಗಳನ್ನು ತೆಗೆದು ಅದರಲ್ಲಿ ಬರೆದಿದ್ದ ಸೂಚನೆ ಪ್ರಕಾರ ಅವುಗಳನ್ನು ಭೂಮಿಯ ಮೇಲೆ ಇಟ್ಟ. 

ಮಿಂಚು ಕೇಳಿದ "ಜೀವ್, ನೀನು ಭೂಮಿಯ ಮೇಲೆ ಈಗ ಹೇಗೆ ಇರುತ್ತೀಯ? ಮನುಷ್ಯ ಬದುಕಲು ಬೇಕಾದ ಎಲ್ಲ ಸಾಮಗ್ರಿಯನ್ನು ನಾಶ ಮಾಡಿದ್ದಿಯ?"

ಅದಕ್ಕೆ ಜೀವನ್ ಹೇಳಿದ "ನನಗೆ ಅಪ್ಪ ಹೇಳಿದ ಮಾತು ಜ್ಞಾಪಕಕ್ಕೆ ಬಂತು - 'ನಿನಗೆ ಮುಂದಿನ ಮನುಷ್ಯ ಕುಲಕ್ಕೆ ಯಾವುದೂ ಸರಿ ಅನ್ನಿಸುವುದೋ ಅದನ್ನು ಮಾಡು. ಪಾಪ ಪುಣ್ಯಗಳ ಯೋಚನೆ ಮಾಡದೇ ನಿನ್ನ ನಿರ್ಧಾರ ತೆಗೆದುಕೋ.' ನಾನು ಆ ನಿರ್ಧಾರ ತಗೊಂಡಾಯ್ತು - ನಾನು ಸಹ ಇತರ ಮಾನವ ರೀತಿ ನಾಶವಾಗಬೇಕು. ನಾನು ಭೂಮಿಯ ಮೇಲೆ ನನ್ನ ಪೂರ್ವಜರು ಮಾಡಿರುವ ಕೃತ್ಯಗಳಿಗೆ ಜವಾಬ್ದಾರನಾಗಲು ನಾನು ತಯಾರಿಲ್ಲ. ನಾನು ಅನಾಮಿಕೆ ರೂಮಿಗೆ ಹಿಂದಿರುಗುತ್ತೇನೆ. ಮತ್ತೆ ಇಂಡ್ಯೂಸ್ಡ್ ಕೋಮ ಗೆ ಹೋಗಿ, ನನ್ನ ಅಪ್ಪ ಮತ್ತು ಅಮ್ಮನ ರೀತಿ ಸಾವನ್ನು ಬಯಸುತ್ತೇನೆ." ಎಂದಾಗ ಚಿಂಟು "ಮತ್ತೆ ಯೋಚಿಸು ಕಂದ" ಎಂದು ಅಭಿ ಹೇಳಿದ ರೀತಿ ಹೇಳಿದ. 

"ಯೋಚಿಸುವುದಕ್ಕೆ ಏನೂ ಉಳಿದಿಲ್ಲ. ನಾನು ತೆಗೆದುಕೊಂಡಿರುವ ನಿರ್ಧಾರ ನನ್ನ ಪ್ರಕಾರ ಸರಿ" ಎಂದು ಜೀವನ್ ಖಡಾಖಂಡಿತವಾಗಿ ಹೇಳಿದ. 

"ಬಾ, ಆದಿ ಶಂಕರರು ಹೇಳಿದ ರೀತಿ - ಪುನರಪಿ ಜನನಿ ಜಠರೇ ಶಯನಂ ಅಂದಂತೆ ಮತ್ತೆ ಭೂಮಿಯ ಜಠರಕ್ಕೆ ಹೋಗಿ ಅನಾಮಿಕೆ ರೂಮಿನಲ್ಲಿ ಮಲಗೋಣ ಎಂದ. ಪ್ರಕೃತಿ ಮತ್ತೆ ತನ್ನ ನಿಯಮದ ಪ್ರಕಾರ ಜೀವಿಗಳನ್ನು ಸೃಷ್ಟಿಸಲಿ. ಬಹುಷಃ ಪ್ರಕೃತಿ ಮಾತೆ ಮತ್ತೊಂದು ಬಾರಿ ಮನುಷ್ಯನಂಥ ಕ್ರೂರ ಪ್ರಾಣಿಯನ್ನು ಹುಟ್ಟಿಸುವುದಿಲ್ಲ. ಬಾ, ಭೂಮಿ ತಾಯಿಯ ಗರ್ಭದಲ್ಲಿ ಸೇರಿ ಮಲಗುವ ಕಾಲ ಬಂದಿದೆ. ಮತ್ತೆ ಹುಟ್ಟುವ ಯೋಚನೆ ಸಧ್ಯಕ್ಕೆ ನನಗಿರಲಿಲ್ಲ" ಎಂದು ಕೈ ಹಿಡಿದು ಮಿಂಚುವನ್ನು ಲಿಫ್ಟ್ ಗೆ ಎಳೆದುಕೊಂಡು ಹೋದ. 

ಲಿಫ್ಟ್ ನಲ್ಲಿ ಜೀವನ್ ಕೇಳತೊಡಗಿದ ಶ್ಲೋಕ:

"ಪುನರಪಿ ಜನನಂ ಪುನರಪಿ ಮರಣಂ

ಪುನರಪಿ ಜನನೀ ಜಠರೇ ಶಯನಮ್|"


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Type your comments here

ಬಸವನಗುಡಿಯ ಎಂದೂ ಮರೆಯಲಾಗದ ಮೂರು ವೈದ್ಯೋತ್ತಮರು

- ವಾಸುದೇವ ಕೆ  1970 ರಿಂದ 2010ರವರೆಗೆ ನನ್ನ ಆರೋಗ್ಯವನ್ನು ಕಾಪಾಡಿದ ಕೆಲವು ಬಸವನಗುಡಿಯ ವೈದ್ಯೋತ್ತಮರ ಸ್ಮರಣೆಗೆ ಈ ನನ್ನ ಪುಟ್ಟ ಕಾಣಿಕೆ. ಈ ಡಾಕ್ಟರ್ ಗಳ ಕೈಗುಣದಿಂದ...