ಬಸವನಗುಡಿಯ ಎಂದೂ ಮರೆಯಲಾಗದ ಮೂರು ವೈದ್ಯೋತ್ತಮರು

- ವಾಸುದೇವ ಕೆ 

1970 ರಿಂದ 2010ರವರೆಗೆ ನನ್ನ ಆರೋಗ್ಯವನ್ನು ಕಾಪಾಡಿದ ಕೆಲವು ಬಸವನಗುಡಿಯ ವೈದ್ಯೋತ್ತಮರ ಸ್ಮರಣೆಗೆ ಈ ನನ್ನ ಪುಟ್ಟ ಕಾಣಿಕೆ. ಈ ಡಾಕ್ಟರ್ ಗಳ ಕೈಗುಣದಿಂದ ಬಹಳ ಜನ  ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವರ್ಷಾನುಗಟ್ಟಲೆ ಸಾಧ್ಯವಾಗಿತ್ತು. 

"ವೈದ್ಯೋ ನಾರಾಯಣೋ ಹರಿ" ಅಂದರೆ, ವೈದ್ಯನು ಸಾಕ್ಷಾತ್ ನಾರಾಯಣವೆಂದೂ, ರಕ್ಷಕನೆಂದೂ, ದೇವರ ಸಮಾನನೆಂದೂ ಅರ್ಥ. ಈ ಮಾತನ್ನು ಸತ್ಯಮಾಡಿದವರು ನಾನು ನೋಡಿದ  ಈ ಮೂರು ವೈದ್ಯೋತ್ತಮರು. ಇವರ ರೀತಿ ನಿಸ್ವಾರ್ಥದಿಂದ ಹಣಕ್ಕೆ ಆಸೆ ಪಡದೆ ಕಡಿಮೆ ಫೀಸ್ ಪಡೆದು ರೋಗಗಳನ್ನು ಗುಣಮಾಡುವ ಬಹಳ ಡಾಕ್ಟರ್ ಗಳು ಆಗ ಇದ್ದರು.  ಈ ಮೂರು ಮಹನೀಯರ ಬಗ್ಗೆ ಇಲ್ಲಿ ತಿಳಿಯಪಡಿಸುತ್ತಿದ್ದೇನೆ.  

ಡಾ||ನರಸಿಂಹಾಚಾರ್:

ಸುಮಾರು 1980ರ ತನಕ ನಮ್ಮ ಕುಟುಂಬದ ಎಲ್ಲ ಸದಸ್ಯರಿಗೆ ಫ್ಯಾಮಿಲಿ ಡಾಕ್ಟರ್ ಆಗಿದ್ದವರು         ಡಾ||ನರಸಿಂಹಾಚಾರ್ ಅವರು. ಅವರ ವಿಶಾಲವಾದ ಕ್ಲಿನಿಕ್ ನ್ಯಾಷನಲ್ ಕಾಲೇಜು ಸರ್ಕಲ್ ಬಳಿ ಅ.ನಾ.ಕೃಷ್ಣರಾವ್ ರಸ್ತೆಯಲ್ಲಿ ಸಿಟಿ ಸೆಂಟ್ರಲ್ ಲೈಬ್ರರಿ ಎದುರುಗಡೆ ಇತ್ತು. ಈಗ ಆ ಜಾಗದಲ್ಲಿ ಫಾಸ್ಟ್ ಫುಡ್ ಅಂಗಡಿಗಳು ತಲೆಯೆತ್ತಿವೆ. ಆದರೆ ಆಗ, ಆ ರಸ್ತೆಯಲ್ಲಿ ಬಹಳ ಕಡಿಮೆ ಟ್ರಾಫಿಕ್ ಇತ್ತು. ಸುತ್ತಮುತ್ತಲಿನ ಸ್ಕೂಲ್ ಗೆ, ಕಾಲೇಜ್ ಗೆ ಹೋಗುವ ಮಕ್ಕಳು ಬಸ್ ಹತ್ತುತ್ತಿದ್ದ ಮತ್ತು ಇಳಿಯುತ್ತಿದ್ದ ಒಂದು ಜಂಕ್ಷನ್ ಆಗಿತ್ತು. 

ಡಾ||ನರಸಿಂಹಾಚಾರ್ ಅವರು ಅಜಾನುಬಾಹು ಮತ್ತು ನೋಡಲು ಯುರೋಪಿಯನ್ ತರ ಇದ್ದರು. ಅವರು ಉದ್ದನಾದ ಬಿಳಿಯ ಕೋಟು ಹಾಕಿಕೊಂಡು ಯಾವಾಗಲು ನಗುಮುಖದಿಂದ ಇರುತಿದ್ದ ಅದ್ಭುತ ವ್ಯಕ್ತಿ. ಡಾ||ನರಸಿಂಹಾಚಾರ್ ಆಗಿನ ಕಾಲದ ಸುಪ್ರಸಿದ್ಧ LMP ಡಾಕ್ಟರ್ ಅಂದರೆ  Licensed Medical Practitioner ಅಂತ. ಬ್ರಿಟಿಷ್ ಆಡಳಿತದಲ್ಲಿ ಆಗ ಕೆಲವು ಯೂನಿವರ್ಸಿಟಿ ಗಳು ಈ ಪದವಿಯನ್ನು ನೀಡುತ್ತಿದ್ದವಂತೆ. LMP ಬಗ್ಗೆ ಹೆಚ್ಚಿನ ಮಾಹಿತಿಗೆ ನಿಮಗೆ ಗೊತ್ತಿರುವ ಹಿರಿಯರ ಬಳಿ ಕೇಳಿ, ತಿಳಿದುಕೊಳ್ಳಿ. ಅವರು ಯಾವಾಗಲು ಆಗಿನ ಕಾಲದಲ್ಲಿಯೇ ಜೆನೆರಿಕ್ ಮೆಡಿಸಿನ್ ಮಾತ್ರ ಕೊಡುತ್ತಿದ್ದರು. ಅವರು ಪ್ರತಿ ರೋಗಿಯನ್ನು ನೋಡಿದ ಬಳಿಕ ಪಡೆಯುತ್ತಿದ್ದ ಫೀಸ್ ಕೇವಲ ಐದು ರೂಪಾಯಿ, ನಂತರ ಅದನ್ನು ಹತ್ತು ರೂಪಾಯಿ ಮಾಡಿದ್ದರು.

ಅವರ ಕ್ಲಿನಿಕ್ ನೆಲ ಅಂತಸ್ತಿನಲ್ಲಿದ್ದ ಒಂದು ದೊಡ್ಡ ರೂಮು, ಮುಂದೆ ದೊಡ್ಡ ಬಾಗಿಲು. ಬಾಗಿಲಿನ ಬದಿಯಲ್ಲಿ ಡಾಕ್ಟರ್ ಹೆಸರು ಮತ್ತು ಅವರು ನೋಡುವ ಸಮಯವಿರುವ ಬೋರ್ಡ್ ಇತ್ತು. ದೊಡ್ಡ ರೂಮಿನಲ್ಲಿ ಮರದ ಪಾರ್ಟಿಷನ್ ಮಾಡಿ ಎಡಗಡೆಯಲ್ಲಿ ಎರಡು ಮತ್ತು ಬಲಗಡೆಯಲ್ಲಿ ಎರಡು ಕೋಣೆಗಳನ್ನು ಮಾಡಿದ್ದರು. ಬಲಗಡೆಯ ಮೊದಲನೆಯ ಕೋಣೆ ಕಂಪೌಂಡರ್ ರೂಮಾಗಿತ್ತು, ಅದಕ್ಕೆ ಒಂದು ಕಿಟಕಿ ರೋಡಿನ ಕಡೆ ರೋಗಿಗಳು ಬಂದು ಔಷದಿ ಪಡೆಯುವುದಕ್ಕೆ ಮಾಡಿದ್ದರು. ಬಲಗಡೆಯ ಮತ್ತೊಂದು ಕೋಣೆ ಡಾಕ್ಟರ್ ದಾಗಿತ್ತು. ಆ ಕೋಣೆಯ ಒಳಗೆ ಬಾಗಿಲಿಗೆ ಅಂಟಿದ ಹಾಗೆ ಡಾಕ್ಟರ್ ಒಳಗಡೆ ಕುಳಿತುಕೊಳ್ಳುತ್ತಿದ್ದರು, ಯಾಕೆಂದರೆ ಬಾಗಿಲು ತೆಗೆದು ಹಾಕಲಿಕ್ಕೆ ಅವರಿಗೆ ಸುಲಭ ಆಗಲಿ ಅಂತ. ಎಡಗಡೆಯಲ್ಲಿ ಒಂದು ರೂಮ್ ಓಷಧಿಗಳು ಇಡಲು ವ್ಯವಸ್ಥೆ ಮಾಡಿಕೊಂಡಿದ್ದರು. ಮತ್ತೊಂದು ರೂಮ್ ರೋಗಿಗಳಿಗೆ ಇನ್ನಷ್ಟು ಪರೀಕ್ಷೆ ಮಾಡಲು ಉಪಯೋಗಿಸುತ್ತಿದ್ದರು. ಆ ಕ್ಲಿನಿಕ್ ಇರುವ ಜಾಗ ಹಿಂದಿನ ಮನೆಯಲ್ಲಿದ್ದ ಡಾ||ನರಸಿಂಹಾಚಾರ್ ಅವರ ಅಕ್ಕನಿಗೆ ಸೇರಿದ್ದು ಎಂದು ಯಾರೋ ಹೇಳಿದ ನೆನಪು. ಹಿಂದಿನ ಮನೆಯ ಗಾರ್ಡನ್ ಏರಿಯಾಗೆ ಹೋಗಲು ರೂಮಿನ ಮಧ್ಯದಲ್ಲಿ ಯಾವಾಗಲು ಮುಚ್ಚಿದ್ದ ಬಾಗಿಲಿತ್ತು. 

ರೂಮಿನ ಮಧ್ಯದ ಜಾಗ ವಿಶಾಲವಾದ ವೈಟಿಂಗ್ ರೂಮ್, ಎರಡು ಚಿಕ್ಕ ಮೆಟ್ಟಿಲು ಹತ್ತಿ ಒಳಗೆ ಹೋದರೆ ಕ್ಲಿನಿಕ್ಕಿನ ನೆಲ ರೆಡ್ ಆಕ್ಸೈಡ್ ನಿಂದ ಕಂಗೊಳಿಸುತ್ತಿತ್ತು, ವೈಟಿಂಗ್  ತೇಗದ ಮರದ ಫಳ ಫಳ ಎಂದು ಹೊಳೆಯುವ ಪಾಲಿಶ್ ಮಾಡಿದ್ದ ಉದ್ದವಾದ ಬೆಂಚ್ ಗಳು ಗೋಡೆಬದಿಯಲ್ಲಿ ಸುತ್ತಲೂ ಹಾಕಿದ್ದರು. ಮಧ್ಯದಲ್ಲಿ ಒಂದು ಫ್ಯಾನ್, ಬೇಕಾದಷ್ಟು ಬೆಳಕು ಕೊಡಲು ಟ್ಯೂಬ್ ಲೈಟ್ ಗಳು. ಅವರ ಕ್ಲಿನಿಕ್ ಗೆ ಬಂದ ರೋಗಿಗಳು ಮತ್ತು ಅವರ ಜೊತೆ ಬಂದವರು ಕ್ಯೂ ಸಿಸ್ಟಮ್ ಮಾದರಿಯಲ್ಲಿ ಗೋಡೆಗೆ ಬದಿಗಿದ್ದ ಬೆಂಚ್ ಗಳ ಮೇಲೆ ಕುಳಿತುಕೊಳ್ಳಬೇಕಿತ್ತು. ಒಂದು ತುದಿಯಲ್ಲಿ ನೀರು ಕುಡಿಯಲು ವ್ಯವಸ್ಥೆ ಮಾಡಿದ್ದರು. ವೈಟಿಂಗ್ ಟೈಂನಲ್ಲಿ ಕಾಲ ಕಳೆಯಲು ಸಾಕಷ್ಟು ನ್ಯೂಸ್ ಪೇಪರ್ ಗಳು ಮತ್ತು ಮ್ಯಾಗಜಿನ್ ಗಳನ್ನೂ ಇಟ್ಟಿದ್ದರು. ಆ ವೈಟಿಂಗ್ ರೂಮಿನಲ್ಲಿ ಕೂತವರು ಏನಾದರೂ ಒಂದನ್ನು ಹಿಡಿದು ಓದುತ್ತಿದ್ದರು. ಯಾಕೆಂದರೆ ಆಗಿನ್ನೂ ಮೊಬೈಲಾಸುರನ ಆಕ್ರಮಣ ಆಗಿರಲಿಲ್ಲ. ರೋಗಿಗಳು ತಾವೇ ಯಾರು ಮೊದಲು ಬಂದಿದ್ದು, ಯಾರು ನಂತರ ಬಂದಿದ್ದು ಅಂತ ಅವರು ಕುಳಿತ ಜಾಗದಿಂದಲೇ ಅರಿಯುತಿದ್ದರು. ಕ್ಯೂ ಸಿಸ್ಟಮ್ ನೋಡಿಕೊಳ್ಳಲು ಜನ ಇಲ್ಲದಿದ್ದರೂ ಸಹ, ಯಾವುದೇ ಮನಸ್ತಾಪ - ಜಗಳ ರೋಗಿಗಳ ನಡುವೆ ಆಗುತ್ತಿರಲಿಲ್ಲ. ಯಾಕೆಂದರೆ ಆಗ ಕೇವಲ ಬೆಂಗಳೂರಿನಲ್ಲಿ ಮೂಲ ವಾಸಿಗಳು ಮಾತ್ರ ಇದ್ದರು ಮತ್ತು ರೂಲ್ಸ್ ಬ್ರೇಕ್ ಮಾಡೋದಿಕ್ಕೆ ಅಂಜುತ್ತಿದ್ದ ಕಾಲ. ಈಗ ಜನ ಕ್ಯೂನಲ್ಲಿ ನಿಂತು ಕೊಳ್ಳೋದು ಅವಮಾನದ ಸಂಗತಿ ಅಂತ ಕ್ಯೂ ಜಂಪ್ ಮಾಡಿ, ಇಲ್ಲಾಂದ್ರೆ ಯಾರೋ VIP  ಇನ್ಫ್ಲುಯೆನ್ಸ್ ತಂದು ಮುಂದೆ ಹೋಗೋವವರೇ ಜಾಸ್ತಿ. ಆಗ ಬೇರೆ ಜಾಗದಿಂದ ಬಂದು ಬೆಂಗಳೂರಿನಲ್ಲಿ ನೆಲಸಿದರೂ ಸಹ ಅವರೂ ಮೂಲ ಬೆಂಗಳೂರಿಗರ ರೀತಿಯೇ  ರೂಪಾಂತರಗೊಳ್ಳುತ್ತಿದ್ದರು, ಕನ್ನಡ ಬೇಗ ಕಲಿಯುತ್ತಿದ್ದರು. 

ಒಂದು ರೋಗಿಯನ್ನು ನೋಡಿದ ನಂತರ ಮತ್ತೊಂದು ರೋಗಿಯನ್ನು ಕರೆಯಲು ಒಂದು ಗಂಟೆ ಡಾಕ್ಟರ್ ಅವರ ಬಾಗಿಲಿಗೆ ನೇತುಹಾಕಿದ್ದರು. ಒಳಗಿದ್ದ ರೋಗಿ ಹೋದ ನಂತರ ಗಂಟೆ ಬಾರಿಸಿದರೆ ಮುಂದಿನ ರೋಗಿ ಮತ್ತು ಅವರ ಜೊತೆಯ ಒಬ್ಬರು ಡಾಕ್ಟರ್ ರೂಮಿಗೆ ಹೋಗಬೇಕೆಂದು ಸಂದೇಶ. ರೂಮಿನ ಬಾಗಿಲು ಸ್ವಲ್ಪ ತೆಗೆದು ಡಾಕ್ಟರ್ ಬಗ್ಗಿ ನೋಡಿ, "ಬನ್ನಿ ಒಳಗಡೆ" ಎಂದು ನಗು ಮುಖದಿಂದ ಕರೆಯುತ್ತಿದ್ದರು. ಡಾಕ್ಟರ್ ಒಂದು ರೀತಿಯ ಸ್ಲೈಡಿಂಗ್ ಚೇರ್ ಮೇಲೆ ಕುಳಿತುಕೊಳ್ಳುತ್ತಿದ್ದರು. ಅವರ ಎಡಬದಿಗೆ ರೋಗಿ ಕುಳಿತುಕೊಳ್ಳಲು ಮರದ ಚೇರ್ ಇತ್ತು. ಡಾಕ್ಟರ್ ಎದುರುಗಡೆ ಯಾವಾಗಲು ನೀರು ಕುದಿಯುತ್ತಿದ್ದ ಎಲೆಕ್ಟ್ರಿಕ್ ಸ್ಟೆರಲೈಝರ್ ಸ್ವಲ್ಪ ಎತ್ತರದ ಟೇಬಲ್ ಮೇಲೆ ಇರುತ್ತಿತ್ತು. ಅದರಲ್ಲಿ ಇಂಜೆಕ್ಷನ್ ಸಿರಿಂಜ್ ಹಾಕಿ ಇಡುತ್ತಿದ್ದರು. ಡಾಕ್ಟರ್ ಬರೆಯಲು, ನಾವು ಸ್ಕೂಲ್ ನಲ್ಲಿ ಬಳಸುತ್ತಿದ್ದ ಎಕ್ಸಾಮಿನೇಷನ್ ಪ್ಯಾಡ್ ಒಂದು ಇತ್ತು. ಹಾಗೆ ಒಂದು ಸಣ್ಣ ಟೇಬಲ್ ಅವರಮುಂದೆ. ಅವರ ಬಲಗಡೆ ರೋಗಿಗಳನ್ನು ಮಲಗಿದ ಸ್ಥಿತಿಯಲ್ಲಿ ಆರೋಗ್ಯ ತಪಾಸಣೆ ಮಾಡಲು ಒಂದು ಎತ್ತರವಾದ ಮಂಚ, ಅದರ ಮೇಲೆ ಮೆತ್ತಗಿನ ಹಾಸಿಗೆ, ದಿಂಬು. ಮಂಚ ಏರಲು ತುದಿಯಲ್ಲೊಂದು ಮಂಚಕ್ಕೆ ಅಂಟಿದ್ದ ಮೆಟ್ಟಿಲು. 

ಡಾಕ್ಟರ್ ನಗುತ್ತ ರೋಗಿಯ ಕೈ ಹಿಡಿದು ನಾಡಿ ಪರೀಕ್ಷೆ ಮಾಡುತ್ತಾ, "ಏನಾಗಿದೆ ನಿಮಗೆ" ಅಂತ ಕೇಳುತ್ತಿದ್ದರು. ಯಾರನ್ನು ಅವರು ಏಕವಚನದಲ್ಲಿ ಮಾತನಾಡಿಸುತ್ತಿರಲಿಲ್ಲ. ಸಣ್ಣ ಮಗು ಬಂದರು ಸಹ ಬಹುವಚನದಲ್ಲೇ ಮಾತನಾಡಿಸುತ್ತಿದ್ದರು. ಆಗ ಎಲ್ಲರಿಗೂ ಬರುತ್ತಿದ್ದ ಕಾಮನ್ ರೋಗ ಜ್ವರ, ನೆಗಡಿ, ಗಂಟಲು ನೋವು, ಹೊಟ್ಟೆ ನೋವು ಮತ್ತು ಆಕಸ್ಮಿಕವಾಗಿ ಆಗುತ್ತಿದ್ದ ಗಾಯಗಳು. ರೋಗದ ಬಗ್ಗೆ ವಿಷಯ ತಿಳಿದುಕೊಂಡು, ತಮ್ಮ ಸ್ಟೆಥಾಸ್ಕೊಪನ್ನು ತಮ್ಮ ಕುತ್ತಿಗೆ ಮೇಲಿಂದ ತೆಗೆದು ರೋಗಿಯ ಎದೆ ಭಾಗ ಮತ್ತು ಬೆನ್ನಿನ ಭಾಗವನ್ನು ಪರೀಕ್ಷಿಸಿದ ನಂತರ, ಕನ್ನಡಿ ಇದ್ದ ಕಿರೀಟವನ್ನು ಧರಿಸಿ, ರೋಗಿಯ ಚೇರ್ ಮೇಲಿದ್ದ ಬಲ್ಬ್ ಆನ್ ಮಾಡಿ, "ಗಂಟಲು ತೋರಿಸಿ, ನಾಲಿಗೆ ಹೊರ ಹಾಕಿ,  ಹಾ... ಅಂತ ಜೋರಾಗಿ ಅನ್ನಿ" ಎಂದು ಗಂಟಲು ಪರೀಕ್ಷಿಸುತ್ತಿದ್ದರು. ಎಲ್ಲ ಪರೀಕ್ಷೆಗಳನ್ನು ಮಾಡಿದ ಮೇಲೆ ರೋಗದ ಬಗ್ಗೆ ಬಂದವರಿಗೆ ತಿಳಿಸಿ, ಯಾವ ರೀತಿಯ ಆಹಾರ ಸೇವಿಸ ಬೇಕು ಮತ್ತು ಅವರು ಬರೆದು ಕೊಡುತ್ತಿದ್ದ ಮಾತ್ರೆ ಹಾಗು ಔಷಧೀಯ ಪುಡಿಗಳನ್ನು ಯಾವಾಗ ಸೇವಿಸಬೇಕೆಂದು ವಿವರವಾಗಿ ತಿಳಿಸಿಕೊಡುತ್ತಿದ್ದರು. ಏನಾದರೂ ಗಂಟಲು ಸಮಸ್ಯೆ ಇದ್ದಾರೆ ಒಂದು ಬಾಟಲಿ ನಲ್ಲಿ ಅವರು ಇಟ್ಟಿದ್ದ ಕೆಂಪು ಬಣ್ಣದ Mandl's Paint ಅನ್ನು ಕಡ್ಡಿಗೆ ಸಿಗಿಸಿದ್ದ ಹತ್ತಿಗೆ ಅದ್ದಿದ ನಂತರ ಗಂಟಲಿಗೆ ಸವರುತ್ತಿದ್ದರು. ಆ ಔಷಧಿ ಗಂಟಲಿನ ಸಮಸ್ಯೆಯ ಪರಿಹಾರ ಕೊಡುತ್ತಿತ್ತು. ಏನಾದರು ಹೊಟ್ಟೆಯ ಭಾಗ ಪರೀಕ್ಷೆ ಮಾಡ ಬೇಕಿದ್ದರೆ ಅಥವಾ ಇಂಜೆಕ್ಷನ್ ಕೊಡ ಬೇಕಿದ್ದರೆ ಮಾತ್ರ ಅವರ ಬಲಭಾಗದಲ್ಲಿದ್ದ ಮಂಚದಲ್ಲಿ ರೋಗಿ ಮಲಗಲು ಹೇಳುತ್ತಿದ್ದರು. 

ಕೆಲವು ರೋಗಿಗಳು "ಡಾಕ್ಟರ್, ಜ್ವರ ಬೇಗ ಹೋಗಲು ಇಂಜೆಕ್ಷನ್ ಕೊಡಿ" ಎಂದು ರಿಕ್ವೆಸ್ಟ್ ಮಾಡಿಕೊಂಡರೆ, "ನೋಡಿ ಜ್ವರ ಹೋಗಲು ಒಂದು ನಾಲ್ಕು ದಿನವಾಗಬಹುದು. ನಾನು ಕೊಟ್ಟಿರುವ ಗುಳಿಗೆಗಳು ನಿಧಾನವಾಗಿ ಕೆಲಸ ಮಾಡುತ್ತವೆ. ನಿಮ್ಮ ದೇಹ ಕೂಡ ಸ್ಪಂದಿಸಿ ಜ್ವರ ಹೋಗಲಾಡಿಸುತ್ತದೆ. ಸುಮ್ಮನೆ ಹೈ ಡೋಸೇಜ್ ಇರುವ ಇಂಜೆಕ್ಷನ್ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ರೋಗ ಕೈ ಮೀರಿ ಹೋಗುತ್ತಿದ್ದಾರೆ ಮಾತ್ರ ನೀವು ಹೇಳದಿದ್ದರೂ ನಾನು ಇಂಜೆಕ್ಷನ್ ಕೊಡುತ್ತೇನೆ" ಎಂದು ಹೇಳುತ್ತಿದ್ದರು. ಗುಳಿಗೆಗಳು ಯಾವಾಗ ತೆಗೆದುಕೊಳ್ಳಬೇಕು ಎಂದು ಚೀಟಿಯಲ್ಲಿ ಬರೆದು ಕಂಪೌಂಡರ್ ಇದ್ದ ಕಾಲದಲ್ಲಿ ಕಂಪೌಂಡರ್ ಕಿಟಕಿಯಲ್ಲಿ ಔಷಧಿ ತೆಗೆದುಕೊಳ್ಳಲು ಹೇಳುತ್ತಿದ್ದರು. ನಂತರದ ದಿನಗಳಲ್ಲಿ ಕಂಪೌಂಡರ್ ಇರಲಿಲ್ಲ, ಆಗ ಡಾಕ್ಟರ್ ತಾವೇ ಔಷಧಿಗಳ ಬಾಟಲಿ ಇಂದ ಗುಳಿಗೆಗಳನ್ನು ರೋಗಿಗೆ ತೋರಿಸಿ ಕಾಗದದ ಕವರ್ ನಲ್ಲಿ ಹಾಕಿ ಕೊಟ್ಟ ನಂತರ ರೋಗಿಯ ಬಳಿ ಹಣ ಪಡೆಯುತ್ತಿದ್ದರು. 

ಮಧ್ಯಾಹ್ನದ ಹೊತ್ತು ರೋಗಿಗಳು ಇರದಿದ್ದರೆ ಟೈಮ್ ವೇಸ್ಟ್ ಮಾಡದೆ ಡಾ||ನರಸಿಂಹಾಚಾರ್ ಖುದ್ದಾಗಿ ಅವರೇ ಪೇಪರ್ ನಿಂದ ಔಷಧಿ ಹಾಕುವುದಕ್ಕೆ ಕವರ್ ಗಳನ್ನು ಮಾಡುತ್ತ ಕುಳಿತಿರುತ್ತಿದ್ದರು. ರೀಡರ್ಸ್ ಡೈಜೆಸ್ಟ್ ಮ್ಯಾಗಜಿನ್ ನಲ್ಲಿ  ಅಡ್ವರ್ಟಿಸೆಮೆಂಟ್ ಗಳು ಹಿಂದೆ-ಮುಂದಿನ  ಕೆಲವು ಪೇಜ್ ಗಳಲ್ಲಿ ಇರುತಿತ್ತು. ಅಂತಹ ಪೇಜ್ ಗಳನ್ನು ನಿಧಾನವಾಗಿ ತೆಗೆದು ಪೇಪರ್ ಕವರ್ ಮಾಡುತ್ತಿದ್ದದ್ದು ಬಹಳ ಸಾರಿ ನೋಡಿದ್ದೆ. ಅವರು ಕನ್ನಡದಲ್ಲಿ ರೋಗಿಯ ಹೆಸರನ್ನು ಔಷಧಿಯ ಕವರ್ ಮೇಲೆ ಬರೆದು ಕೊಡುತ್ತಿದ್ದರು. ಅವರ ಕನ್ನಡದ ಕೈಬರಹ ತುಂಬಾ ಚೆನ್ನಾಗಿರುತ್ತಿತ್ತು 

ಮುಂಚೆಯೇ ಹೇಳಿದ ಹಾಗೆ ಡಾ||ನರಸಿಂಹಾಚಾರ್ ನೋಡುವುದಕ್ಕೆ ಹಾಲಿವುಡ್ ಸ್ಟಾರ್ ಇದ್ಧ ಹಾಗೇ ಇದ್ದರು. ಅವರು ಶುದ್ಧ ಕನ್ನಡದಲ್ಲಿ ಮಾತನಾಡುವುದು ಕೇಳುವುದಕ್ಕೆ ಖುಷಿ ಆಗ್ತಿತ್ತು. ಬಡವರ ಬಳಿ ಹಣ ತೆಗೆದುಕೊಳ್ಳದೆ ಅವರಿಗೆ ಉಚಿತವಾಗಿ ಔಷಧಿಗಳನ್ನು ಸಹ ಕೊಡುತ್ತಿದ್ದರು. ಡಾಕ್ಟರ್ ವೃತ್ತಿಯಲ್ಲದೆ ಅವರು RSS - ರಾಷ್ಟೀಯ ಸ್ವಯಂ ಸೇವಕ ಸಂಘ ದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆದರೆ ಅವರು ತಮ್ಮ ಕ್ಲಿನಿಕ್ನಲ್ಲಿ ಇದರ ಬಗ್ಗೆ ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ. ನಾನು ಇನ್ನು ಚಿಕ್ಕವನಾಗಿದ್ದರಿಂದ ಎಲ್ಲೊ ಕೇಳಿದ ನೆನಪು, ಡಾಕ್ಟರ್ RSS  ನಲ್ಲಿ ಯಾವುದೊ ವಿಭಾಗಕ್ಕೆ ಸೆಕ್ರೆಟರಿ ಆಗಿದ್ದರು ಅಂತ. ಆಗ ಪ್ರತಿ ಸಂಕ್ರಾಂತಿ ಹಬ್ಬದ ದಿನ ನ್ಯಾಷನಲ್ ಹೈ ಸ್ಕೂಲ್ ಮೈದಾನದಲ್ಲಿ RSSನ ವಾರ್ಷಿಕ ಸಮಾರಂಭಕ್ಕೆ ಎಲ್ಲರಿಗೂ ಆಹ್ವಾನ ಇರುತ್ತಿತ್ತು. ಆ ಕಾರ್ಯಕ್ರಮದಲ್ಲಿ ನಮ್ಮ ಡಾಕ್ಟರ್ RSS ಚಡ್ಡಿ ಹಾಕಿಕೊಂಡು ಯುನಿಫಾರ್ಮ್ ನಲ್ಲಿ ಮಿಂಚುತ್ತಿದ್ದರು ಮತ್ತು ಅಲ್ಲಿ ಬಂದವರಿಗೆ ಸ್ವತಃ ಅವರೇ ಎಲ್ಲರಿಗೂ ಎಳ್ಳು-ಬೆಲ್ಲ ಕೊಡುತ್ತಿದ್ದರು. ನಾವು ಅವರಿಗೆ ಗೊತ್ತಿದ್ದರಿಂದ ನಮಗೆ ಸ್ವಲ್ಪ ಜಾಸ್ತಿನೇ ಕೊಡುತ್ತಿದ್ದರು.  

1975-77 ನಲ್ಲಿ ನಾನು ನ್ಯಾಷನಲ್ ಮಿಡ್ಲ್ ಸ್ಕೂಲ್ ನಲ್ಲಿ ಓದುತ್ತಿದಾಗ ಸರಕಾರ ಎಮರ್ಜೆನ್ಸಿ ಘೋಷಿಸಿದ್ದ ಪರಿಣಾಮ ಡಾ||ನರಸಿಂಹಾಚಾರ್ ಕಣ್ಮರೆಯಾಗಿದ್ದರು. ಸ್ವಲ್ಪ ದಿನಗಳ ನಂತರ ತಿಳಿಯಿತು ಅವರು ಪೊಲೀಸ್ ಗೆ ಸಿಕ್ಕು, ಅರೆಸ್ಟ್ ಆದರೆಂದು. ನಮಗೆ ಒಂದು ಕಡೆ ನಮ್ಮ ಡಾಕ್ಟರ್ ಬಗ್ಗೆ ಕಾಳಜಿ ಉಂಟಾಯಿತು, ಹೇಗಿದ್ದಾರೋ ಏನೋ ಅಂತ. ನಮ್ಮ ಸ್ಕೂಲ್ ನಲ್ಲಿ ನಮಗೆ ಟೀಚರ್ ಗಳು ಸರಕಾರದ ವಿರುದ್ಧ ಎಲ್ಲೂ ಮಾತನಾಡಬಾರದು ಮತ್ತು ಪೊಲೀಸ್ ರ ಹತ್ತಿರ ಹುಷಾರಾಗಿ ಇರಬೇಕು ಎಂದು ಮೆಲ್ಲದನಿ ಯಲ್ಲಿ ಆಜ್ಞೆ ಮಾಡಿದ್ದರು. ಒಂದು ರೀತಿಯ ಭಯದ ವಾತಾವರಣ ಎಲ್ಲಡೆ ಮೂಡಿತ್ತು. ಇನ್ನು ನಮ್ಮ ಆರೋಗ್ಯದ ರಕ್ಷಣೆ ಯಾರು ಮಾಡುತ್ತಾರೆ ಅಂತ ನಮ್ಮ ಕುಟುಂಬದವರಿಗೆ ಆತಂಕವಾಗಿತ್ತು. 

ಆಗ ನಮ್ಮ ಡಾಕ್ಟರ್ ವಾಪಾಸ್ ಬರುವವರೆಗೂ ತಾತ್ಕಾಲಿಕವಾಗಿ ಮತ್ತೊಬ್ಬ ವಯಸ್ಸಾದ ಡಾಕ್ಟರ್ - ಅವರ ಹೆಸರು ನೆನಪಿಲ್ಲ ಅವರು ಡಾ||ನರಸಿಂಹಾಚಾರ್ ಕ್ಲಿನಿಕ್ ನಡೆಸಲು   ಶುರು ಮಾಡಿದರು. ಆ ಡಾಕ್ಟರ್ ಗೆ ವಯಸ್ಸಾದರಿಂದ ಸ್ವಲ್ಪ ಕಿವಿ ಕೇಳಿಸುತ್ತಿರಲಿಲ್ಲ. ಆದರೆ ಅವರು ಸಹ ಒಬ್ಬ ಒಳ್ಳೆಯ ಡಾಕ್ಟರ್ ಆಗಿದ್ದರು. ತಮಾಷೆ ಅಂದರೆ ಅವರಿಗೆ ವಯಸ್ಸಾದರಿಂದ ಕೇಳಿದ ಪ್ರಶ್ನೆಯನ್ನೇ ಪದೇ ಪದೇ ಕೇಳುತ್ತಿದ್ದರು. "ಕೆಮ್ಮಿದೆಯೇ? ಗಂಟಲು ನೋವಿದೆಯೇ?" ಅಂತ ಕೇಳಿ ನಾಡಿ ಪರೀಕ್ಷೆ ಮಾಡಿ ಮತ್ತೆ, "ಕೆಮ್ಮಿದೆಯೇ? ಗಂಟಲು ನೋವಿದೆಯೇ?" ಅಂತ ಕೇಳುತ್ತಿದ್ದರು. ಅಲ್ಲಿ ನಾವು ಅವರಿಗೆ ಉತ್ತರವನ್ನು ಪುನಃ ಹೇಳುತ್ತಿದ್ದೆವು. ಮನೆಗೆ ಬಂದ ಮೇಲೆ ನಾವು ಅವರನ್ನು ಅನುಕರಿಸಿ, ಮನೆಯಲ್ಲಿದ್ದ ಹಿರಿಯರ ನಾಡಿ ಪರೀಕ್ಷೆ ಮಾಡುವಂತೆ ಅವರಿಗೆ ಹೊಸ ಡಾಕ್ಟರ್ ರೀತಿಯಲ್ಲಿ "ಕೆಮ್ಮಿದೆಯೇ? ಗಂಟಲು ನೋವಿದೆಯೇ?" ಎಂದು ಎರಡು ಮೂರು ಬಾರಿ ಕೇಳಿ ಒದೆ ತಿಂದಿದ್ದು ಉಂಟು. 

ಎಮರ್ಜೆನ್ಸಿ ತೆಗೆದರು ಅಂತ ಒಂದು ಶುಭದಿನ ರೇಡಿಯೋ ವಾರ್ತೆಗಳ ಮೂಲಕ ಗೊತ್ತಾದಾಗ ನಮಗೆ ಮೊದಲು ಅನ್ನಿಸತೊಡಗಿದ್ದು ಓಹ್ ನಮ್ಮ ಡಾ||ನರಸಿಂಹಾಚಾರ್ ವಾಪಾಸ್ ಈಗ ಬರಬಹುದು ಅಂತ. ಅವರು ವಾಪಾಸ್ ಬಂದದ್ದು ಗೊತ್ತಾದಾಗ ನಮಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಕೂಡ ಅವರನ್ನು ನೋಡಲು ಹೋದೆವು. ಅವರು ನಮ್ಮನ್ನು ನೋಡಿ ನಕ್ಕು ಮಾತನಾಡಿಸಿದರು. ಆದರೆ ಅವರು ಸುಮಾರು ಒಂದುವರೆ ಎರಡು ವರ್ಷಗಳಲ್ಲಿ ಬಹಳ ಸೊರಗಿ ಹೋಗಿದ್ದರು. ನಾವು ಅವರಿಗೆ ಹೇಗೆ ನೋಡಿಕೊಂಡರು ಎಂದು ಕೇಳಿದಾಗ ಅವರು ಹೇಳಿದ ಒಂದೇ ಉತ್ತರ "ದಯವಿಟ್ಟು ಅದರ ಬಗ್ಗೆ ಯಾರು ನನಗೆ ಕೇಳಬೇಡಿ. ನಾನು ಇನ್ನು ಮುಂದೆ ಕೇವಲ ಡಾಕ್ಟರ್ ಮಾತ್ರ" ಅಂದಿದ್ದರು. 

ಸುಮಾರು 1983 ತನಕ ಅವರು ವಯಸ್ಸಾಗಿದ್ದರೂ ಕೂಡ ಟೈಮ್ ಸರಿಯಾಗಿ ಕ್ಲಿನಿಕ್ ತೆಗೆದು ರೋಗಿಗಳನ್ನು ನೋಡುತ್ತಿದ್ದರು. ಯಾವಾಗ ಹೋದರೂ ವಿಶ್ವಾಸದಿಂದ ಮಾತನಾಡಿಸುತ್ತಿದ್ದರು ಮತ್ತು ನಮ್ಮ ಕುಟುಂಬದ ಇತರ ಸದಸ್ಯರ ಬಗ್ಗೆ ವಿಚಾರಿಸುತ್ತಿದ್ದರು. ಆಮೇಲೆ ಒಂದು ದಿನ ವಯಸ್ಸಾದ ಪರಿಣಾಮ ಕ್ಲಿನಿಕ್ ಮುಚ್ಚಿದರು. ಆ ದಿನ ನಮಗೆಲ್ಲ ಬಹಳ ದುಃಖವಾದ ದಿನ. ಅವರನ್ನು ಭೇಟಿ ಮಾಡಿದಾಗ ನಮಗೆ ಅವರು ಮತ್ತೊಬ್ಬ ಡಾಕ್ಟರ್ ಡಾ||ಧ್ರುವನಾರಾಯಣ್ ಬಳಿ ಇನ್ನುಮುಂದೆ ಹೋಗಿ ಎಂದು ತಿಳಿಸಿದರು. ಅವರ ಕಾಲಿಗೆ ಬಿದ್ದು ಬೀಳ್ಕೊಟ್ಟೆವು.  ನಂತರ ಅವರ ಬಗ್ಗೆ ಯಾವುದೇ ಮಾಹಿತಿ ತಿಳಿಯಲಿಲ್ಲ. ನಾವು ಎಂದೂ ಮರೆಯಲಾಗದ ಟ್ರೂ ಜಂಟಲ್ಮನ್ ನಮ್ಮ ವೈದ್ಯರತ್ನ ಡಾ||ನರಸಿಂಹಾಚಾರ್ - ಅಮರ. 

ಡಾ||ಧ್ರುವನಾರಾಯಣ್:

ಇವರೂ ಸಹ LMP ಡಾಕ್ಟರ್ ಮತ್ತು ಒಳ್ಳೆಯ ಕೈಗುಣ ಇದ್ದ ವೈದ್ಯೋತ್ತಮರು. ಇವರ ಕ್ಲಿನಿಕ್ ಗಾಂಧಿಬಜಾರ್ ಸರ್ಕಲ್ ಬಳಿಯ BASCO (Basavanagudi Co Operative Society) ಎದುರು ಇತ್ತು. ಈಗ ಒಂದು ಅಂಗಡಿ ಮತ್ತು ಫ್ಲೋರ್ ಮಿಲ್ ಆಗಿದೆ. ಅವರ ಕ್ಲಿನಿಕ್ ನಲ್ಲಿ ಮುಂದೆ ಸ್ವಲ್ಪ ಜನ ಕುಳಿತುಕೊಳ್ಳುವಷು ವೈಟಿಂಗ್ ರೂಮ್, ಒಳಗಡೆ ರೋಗ ತಪಾಸಣೆಗೆ ಚೇರ್, ಮಂಚ ಮತ್ತು ಕೆಲವು ಮಾತ್ರ ಔಷಧಿಗಳಿದ್ದ ಕಪಾಟುಗಳಿದ್ದವು. ಈ ಡಾಕ್ಟರ್ ಕೂಡ ಸ್ಮಾರ್ಟ್ ಆಗಿ ಯಾವಾಗಲು ಡ್ರೆಸ್ ಆಗಿರುತ್ತಿದ್ದರು. ರೋಗಿಗಳು ಇಲ್ಲದ್ದಿದ್ದರೆ ನ್ಯೂಸ್ ಪೇಪರ್ ಓದುತ್ತಾ ನೀಳವಾದ ಬೆತ್ತದ ಚೇರ್ ಮೇಲೆ ರೋಡ್ ಗೆ ಮುಖ ಮಾಡಿ ಕುಳಿತುಕೊಳ್ಳುತ್ತಿದ್ದರು. ಇವರೂ ಸಹ ಕಡಿಮೆ ಮಾತನಾಡುತ್ತಿದ್ದ ಟ್ರೂ ಜಂಟಲ್ಮನ್. ಅವರ ಬಳಿ Lambratta ಸ್ಕೂಟರ್ ಇಟ್ಟು. ಸರಿಯಾದ ಸಮಯಕ್ಕೆ ಕ್ಲಿನಿಕ್ ತೆರೆದು, ಕ್ಲೀನ್ ಮಾಡುವವರಿಗೆ ಕ್ಲಿನಿಕ್ ಅನ್ನು ಸರಿಯಾಗಿ ಸ್ವಚ್ಛ ಮಾಡಲು ತಾವೇ ನಿಂತು ನೋಡಿಕೊಳ್ಳುತ್ತಿದ್ದರು. 

ನಾವು ಹೋದಾಗ ಕ್ಯೂ ಪ್ರಕಾರ ಒಬ್ಬರಾದ ನಂತರ ಒಬ್ಬರನ್ನು ತಪಾಸಣೆಗೆ ಒಳ ಕೋಣೆಗೆ ಕರೆದು ನಾಡಿ ನೋಡಿ, ಸ್ಟೆಥಾಸ್ಕೋಪ್ ಇಟ್ಟು ಪರೀಕ್ಷಿಸಿ ಒಳ್ಳೆಯ ಔಷಧಿಗಳನ್ನು ಬರೆದುಕೊಟ್ಟು ಅಂಗಡಿಯಲ್ಲಿ ಖರೀದಿಸಲು ಹೇಳುತ್ತಿದ್ದರು. ಅವರು ಮುಂಚಿನ ದಿನಗಳಲ್ಲಿ ಪಡೆಯುತ್ತಿದ್ದ ಫೀಸ್ ಕೇವಲ ಹತ್ತು ರೂಪಾಯಿ ಮಾತ್ರ. ನಂತರ ಇಪ್ಪತ್ತು ರೂಪಾಯಿ ಫೀಸ್ ಮಾಡಿದ್ದರು. 

ಇವರೂ ಸಹ ಬಡವರು ಮತ್ತು ಗಾಂಧಿಬಜಾರಿನ ತರಕಾರಿ ಮಾರುವವರು ಬಂದರೆ ಹಣಪಡೆಯದೆ ನೋಡುತ್ತಿದ್ದ ಮಹನೀಯರು. 

ನಾನು ನ್ಯಾಷನಲ್ ಹೈ ಸ್ಕೂಲ್ ನಲ್ಲಿ 10ನೇ ತರಗತಿ ಓದುತ್ತಿದ್ದಾಗ ಜಾಂಡಿಸ್ ಬಂತು. ಯಾರೋ ಹೇಳಿದರು ಅಂತ ನನ್ನಪ್ಪ ಅಲ್ಲೇ ಗಾಂಧಿಬಜಾರಿನಲ್ಲಿ ಬೇವಿನ ಔಷಧಿ ಕೊಡುತ್ತಿದ್ದ ಒಂದು ಮನೆಯವರ ಬಳಿ ನನಗೆ ಉಪಚಾರ ಮಾಡಿಸಲು ಶುರು ಮಾಡಿದರು. ಆದರೆ ನನಗೆ ಬಂದಿದ್ದ ಜಾಂಡಿಸ್ ಉಲ್ಬಣ ಗೊಂಡು, ಜ್ವರ ಸಹ ಸ್ವಲ್ಪವೂ ಕಡಿಮೆಯಾಗದೇ, ವೀಕ್ ಆದ ಕಾರಣ ನನಗೆ ನಡೆಯಲಿಕ್ಕೂ ಆಗದಿದ್ದಾಗ ಅಪ್ಪ ಮತ್ತು ಅಮ್ಮ ಕಂಗಾಲಾಗಿ ಡಾ||ಧ್ರುವನಾರಾಯಣ್ ಬಳಿ ಕರೆದುಕೊಂಡು ಹೋದಾಗ, ಡಾಕ್ಟರ್ ಕೋಪದಿಂದ ನಸುನಕ್ಕು "ಅಲ್ಲ ನೀವು ಆರೋಗ್ಯ ಶಾಸ್ತ್ರವನ್ನು ಓದಿರದ ಆ ಮನೆಯಲ್ಲಿ ಯಾಕ್ರೀ ಈ ಹುಡುಗನನ್ನು ಕರೆದುಕೊಂಡು ಹೋದ್ರಿ? ನೋಡಿ ಕಡ್ಡಿಯಾಗಿದ್ದಾನೆ ತ್ರಾಣವೇ ಇಲ್ಲ. ಇನ್ನುಮುಂದೆ ಈ ರೀತಿ ಮಿಸ್ಟೇಕ್ ಮಾಡಬೇಡಿ. ಪ್ರತಿ ದಿನ ಇವನನ್ನು ಕರೆದುಕೊಂಡು ಬನ್ನಿ." ಆಜ್ಞೆ ಮಾಡಿದ್ದರು. ಎರಡು ವಾರದ ನಂತರ ಅವರು ಕೊಟ್ಟ ಔಷಧಿ ಮತ್ತು ಅವರ ಕೈಗುಣ ದಿಂದ ನನಗೆ ಶಕ್ತಿ ಬಂದಂತಾಗಿತ್ತು. ಆಗಲಿಂದ ನಾನು ಅವರನ್ನು ದೇವರ ರೀತಿ ನೋಡುತ್ತಿದ್ದೆ. 

ಸಂಪೂರ್ಣ ಗುಣವಾದ ಮೇಲೆ, ಅವರು ನನ್ನನ್ನು ಸ್ಟೆಥಾಸ್ಕೋಪಿನಿಂದ ಪರೀಕ್ಷಿಸಿ, "ನಿನ್ನ ಹೃದಯ ಸ್ವಲ್ಪ ದೊಡ್ಡದಾಗೇ ಇದೆ." ಎಂದು X RAY ಮಾಡಲು ತಿಳಿಸಿದರು. ಅದು ಹೇಗೆ ಹೇಳಿದಿರಿ ಅಂತ ನಾನು ಕೇಳಿದಾಗ, ನನಗೆ ಕೈ ಮುಷ್ಠಿ ಮಾಡಲು ಹೇಳಿದರು. ನನ್ನ ಮುಷ್ಟಿಯನ್ನು ಮುಟ್ಟಿ, "ನೋಡು ಪ್ರತಿ ಮನುಷ್ಯನ ಹೃದಯ ಅವನ ಮುಷ್ಟಿಯಷ್ಟು ದೊಡ್ಡದಿರುತ್ತದೆ. ನನಗೆ ನಿನ್ನ ಹೃದಯ ಈ ನಿನ್ನ ಮುಷ್ಟಿಗಿಂತ ಸ್ವಲ್ಪ ದೊಡ್ಡದಿರಬಹುದು ಎಂದು ಅನುಮಾನವಿದೆ" ಎಂದು ಚಿಕ್ಕ ಅನಾಟಮಿ ಪಾಠ ಮಾಡಿದ್ದರು. X RAY ಬಂದ ಮೇಲೆ, ಅವರು ತಾವು ಹೇಳಿದ್ದನ್ನು ಸಮರ್ಥಿಸಿಕೊಂಡು X RAY ತೋರಿಸುತ್ತಾ  "ನೋಡು, ನಿನ್ನ ಹೃದಯ ಸ್ವಲ್ಪ ಮಾತ್ರ ದೊಡ್ಡದಿದೆ, ಅದರಿಂದ ಯಾವುದೇ ತೊಂದರೆ ಇಲ್ಲ. ಹೋಗು ಆಟವಾಡು" ಎಂದು ಹುರಿದುಂಬಿಸ್ಸಿದ್ದರು. ಇದರಿಂದ ಖಾತ್ರಿಯಾಗಿತ್ತು ಅವರು ಯಾವುದೇ ಬೇರೆ ಯಂತ್ರಗಳ ಸಹಾಯವಿಲ್ಲದೆ ಕೇವಲ ನಾಡಿ ಪರೀಕ್ಷೆ ಮತ್ತು ಸ್ಟೆತಾಸ್ಕೋಪ್ ನಿಂದ ಎಷ್ಟು ಸರಿಯಾಗಿ ದೇಹದ ನ್ಯೂನ್ಯತೆಯನ್ನು ಕಂಡುಹಿಡಿಯುತ್ತಿದ್ದರು ಎಂದು. 

ನಂತರದ ದಿನಗಳಲ್ಲಿ, BASCO ಹೊಸ ಬಿಲ್ಡಿಂಗ್ ಕಟ್ಟಲು ಆ ಜಾಗದಲ್ಲಿದ್ದ ಫ್ಲೋರ್ ಮಿಲ್ಲಿಗೆ ಜಾಗ ಮಾಡಿ  ಕೊಡಲು ಡಾ||ಧ್ರುವನಾರಾಯಣ್ ತಮ್ಮ ಕ್ಲಿನಿಕ್ ಜಾಗವನ್ನು ಕಡಿಮೆ ಮಾಡಿಕೊಳ್ಳಬೇಕಾಯಿತು. ಆದರೂ ಅವರು ಮುಂಚಿನ ರೀತಿಯಲ್ಲೇ ತಮ್ಮ ಕ್ಲಿನಿಕ್ ಅನ್ನು ಮುಂದುವರಿಸಿದ್ದರು.

ಸುಮಾರು 2005ರವರೆಗೂ ಅವರು ನಿರಂತರ ಸೇವೆ ಮಾಡಿದ್ದರು. ನಂತರ ಅವರಿಗೆ ವಯಸ್ಸಾದ ಕಾರಣ ತಮ್ಮ ಕ್ಲಿನಿಕ್ ಅನ್ನು ಲಾಲ್ಬಾಗ್ ವೆಸ್ಟ್ ಗೇಟ್ ಬಳಿಯ ತಮ್ಮ ಮನೆಗೆ ಸ್ಥಳಾಂತರ ಮಾಡಿದರು. 

ಮತ್ತೊಂದು ವೈದ್ಯರತ್ನ ನಮ್ಮ ಜೊತೆಗೆ ಇಲ್ಲ ಎಂಬ ಸುದ್ದಿ ನ್ಯೂಸ್ ಪೇಪರ್ ನ ಮೂಲಕ ತಿಳಿದು ಸಂಕಟವಾಯಿತು. ಡಾ||ಧ್ರುವನಾರಾಯಣ್ ಅಮರ.

ಡಾ||ವಾಸುದೇವ್ :

ಇವರೂ ಸಹ ಮತ್ತೊಂದು ವೈದ್ಯ ರತ್ನ. ಮೊದಲು ಅವರ ಕ್ಲಿನಿಕ್ ಟಾಗೋರ್ ಸರ್ಕಲ್ ಬಳಿಯ ಈಗಿನ ಆಂಧ್ರ ರುಚಿಲು ಇರುವ ಜಾಗದ ಕಾರ್ನರ್ ನಲ್ಲಿ ಇತ್ತು. ಇವರ ಕ್ಲಿನಿಕ್ ಡಾ||ನರಸಿಂಹಾಚಾರ್ ಕ್ಲಿನಿಕ್ ಮಾದರಿಯ ವಿಶಾಲವಾದ ವೈಟಿಂಗ್ ರೂಮ್ ಇದ್ದಂತ ಕ್ಲಿನಿಕ್.

ಇವರ ಬಳಿ ನಾನು ಕೇವಲ ಸ್ವಲ್ಪ ವರುಷಗಳು ಮಾತ್ರ ಹೋಗಿದ್ದಿದ್ದು. ಅವರ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ ಅವರ ಕೈಗುಣ ಮುಂಚೆ ಹೇಳಿದ ಎರಡು ವೈದ್ಯೋತ್ತಮರ ರೀತಿಯಲ್ಲೇ ಇತ್ತು. ರೋಗವನ್ನು ಕಂಡುಹಿಡಿದು ಸರಿಯಾದ ಔಷಧಿಗಳನ್ನು ಕೊಡುತ್ತಿದ್ದರು. ಇವರೂ ಸಹ ಬಹಳ ಕಡಿಮೆ ಹಣವನ್ನು ಫೀಸ್ ಆಗಿ ಪಡೆಯುತ್ತಿದ್ದರು. 

ನಂತರದ ದಿನದಲ್ಲಿ ಗಾಂಧಿಬಜಾರಿನ ಗೋವಿಂದಪ್ಪ ರೋಡಿಗೆ ತಮ್ಮ ಕ್ಲಿನಿಕ್ ಅನ್ನು ಮನೆಯ ರೀತಿ ಇದ್ದ ಸ್ಥಳಕ್ಕೆ ಶಿಫ್ಟ್ ಮಾಡಿದರು. ಡಾ||ವಾಸುದೇವ್ ಕ್ಲಿನಿಕ್ ಅವರು ನೋಡುವ ಸಮಯದಲ್ಲಿ ರೋಗಿಗಳಿಂದ ತುಂಬಿರುತ್ತಿತ್ತು. ನನ್ನ ಹೆಸರನ್ನು ಕೇಳಿದಾಗ ನಾನು "ವಾಸುದೇವ್" ಅಂದರೆ "ನನ್ನ ಹೆಸರು ಹೇಳ್ಬೇಡ್ರಿ ನಿಮ್ಮ ಹೆಸರು ಹೇಳ್ರಿ" ಅಂತ ಹಾಸ್ಯ ಮಾಡಿದ್ದರು. ಆಗಿನಿಂದ ಅವರು ನನ್ನ ಹೆಸರು ಕೇಳಿದರೆ, "ಸರ್ ನನ್ನ ಹೆಸರು ಮತ್ತು ನಿಮ್ಮ ಹೆಸರು ಒಂದೇ ಸರ್" ಅಂತಿದ್ದೆ. ನಕ್ಕು, ತಮ್ಮ ಪ್ರಿಸ್ಕ್ರಿಪ್ಷನ್ ಬರೆದು ಕೊಡುತ್ತಿದ್ದರು. ನಂತರದ ದಿನಗಳಲ್ಲಿ ಅವರಿಗೂ ಸಹ ವಯಸ್ಸಾದ ರಿಂದ ಅವರ ಕ್ಲಿನಿಕ್ ಬಂದಾಗಿತ್ತು. ಅವರ ಬಗ್ಗೆ ಮಾಹಿತಿ ನನಗೆ ಆಮೇಲೆ ಅಷ್ಟು ತಿಳಿಯಲಿಲ್ಲ.

------------------------------- 

ಈಗ ಇಂತಹ ಡಾಕ್ಟರ್ ಸಿಗುವುದು ಅಪರೂಪದ ವಿಷಯ. ಇಂತಹ ಮೂರು ವೈದ್ಯೋತ್ತಮರಿಂದ ಆರೈಕೆ ಪಡೆದಿದ್ದರಿಂದ ಇಲ್ಲಿಯವರೆಗೆ ಆರೋಗ್ಯವನ್ನು ಕಾಪಾಡಿಕೊಂಡು ಬರಲು ನಮಗೆ ಸಹಾಯವಾಯಿತು. ಈ ಮಹನೀಯರು ಎಷ್ಟು ಜನರಿಗೆ ಹಣಕ್ಕೆ ಆಸೆಪಡದೆ, ನಿಸ್ವಾರ್ಥದಿಂದ ರೋಗಮುಕ್ತರನ್ನಾಗಿ ಮಾಡಿದ್ದರೋ ತಿಳಿಯದು. ಇವರ ಬಗ್ಗೆ ಯಾವುದೇ ವಿಷಯ ಡಿಜಿಟಲ್ ಮೀಡಿಯಾದಲ್ಲಿ ಇಲ್ಲದಿರುವುದು ಬಹಳ ಸಂಕಟದ ವಿಷಯ. ನಾನು ಗೂಗಲಮ್ಮನ ಬಳಿ ಈ ಮೂರು ಡಾಕ್ಟರ್ ಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಅವರ ಫೋಟೋಗಾಗಿ ಪ್ರಯತ್ನಿಸಿ ಸೋತೆ. ನಿಮಗೆ ಈ ಮೂವರ ಅಥವಾ ನಿಮಗೆ ಗೊತ್ತಿದ್ದ ಇಂತಹ ಡಾಕ್ಟರ್ ಗಳ ಬಗ್ಗೆ ತಿಳಿದಿದ್ದರೆ ದಯವಿಟ್ಟು ಅವರ ಬಗ್ಗೆ ಬರೆದು ಎಲ್ಲರಿಗೂ ತಿಳಿಸಿಕೊಡಿ. ಅದೊಂದೇ ನಾವು ಮಾಡಬಹುದಾದ ಕೃತಜ್ಞತೆ ಮಹನೀಯರಿಗೆ.


ಪುನರಪಿ ಜನನಿ ಜಠರೇ ಶಯನಂ

ಒಂದು ಕಾಲ್ಪನಿಕ ಕಥೆ  

- ವಾಸುದೇವ ಕೆ

ಒಂದು ಮಬ್ಬುಗತ್ತಲಿನ ರೂಮಿನ ಮೂಲೆಯಲ್ಲಿ ಮಂಚದ ಬಿಳಿ ಹಾಸಿಗೆಯ ಮೇಲೆ ಸುಮಾರು 18ರ ವಯಸ್ಸಿನ ಯುವಕ ಬತ್ತಲೆಯಾಗಿ ಮಲಗಿದ್ದ. ಅವನ ಬಾಯಿಗೆ ಮತ್ತು ಮೂಗಿಗೆ ಹಲವು ಟ್ಯೂಬುಗಳು ಅಳವಡಿಸಲಾಗಿತ್ತು. ಅವನ ದೇಹದ ಹಲವು ಬಾಗಗಳಿಂದ ಮೆಡಿಕಲ್ ಪ್ರೋಬ್ಗಳು ಪಕ್ಕದಲ್ಲಿದ್ದ ದೊಡ್ಡ ಮಷೀನ್ ಒಂದಕ್ಕೆ ಕನೆಕ್ಟ್ ಮಾಡಲಾಗಿ, ಆ ಮಷೀನ್ ಇಂದ ಮಂದಗತಿಯಲ್ಲಿ ಬೀಪ್ ಶಬ್ದ ಮತ್ತು ಬದಲಾಗುತ್ತಿದ್ದ ಕೆಲವು ಗ್ರಾಫ್ ಗಳು ಮತ್ತು ಸಂಖ್ಯೆಗಳು ಅಲ್ಲಿದ್ದ ಮಾನಿಟರ್ ಮೇಲೆ ಬರುತ್ತಿದ್ದವು. ಆ ಯುವಕ ಪ್ರಜ್ಞೆ ಇಲ್ಲದಿದ್ದರೂ ಸಹ ಶಾಂತ ರೀತಿಯಲ್ಲಿ ಉಸಿರಾಡುತ್ತಿದ್ದರಿಂದ ಅವನ ಹೊಟ್ಟೆಯ ಭಾಗ ಮೇಲೆ ಕೆಳಗೆ ಹೋಗುತ್ತಿತ್ತು. ಆ ಯುವಕನ ಮುಖದಲ್ಲಿ ಮೀಸೆ ಮತ್ತು ಗಡ್ಡ ಬೆಳೆದು, ಅವನು ಶೇವ್ ಮಾಡಿ ಬಹಳ ತಿಂಗಳುಗಳೇ ಆಗಿರಬೇಕು ಅನ್ನಿಸುತ್ತೆ. 

ಯುವಕನ ಮಂಚದ ಸಮೀಪ, ಅದೇ ರೀತಿಯ ಮತ್ತೊಂದು ಮಂಚದಲ್ಲಿ ಯಾರು ಇರದೇ ಖಾಲಿಯಾಗಿತ್ತು, ಆದರೆ ಹಲವು ಕೊಳವೆಗಳು ಮತ್ತು ಪ್ರೋಬ್ ಗಳು ಹಾಸಿಗೆ ಮೇಲೆ ಬಿದ್ದಿದ್ದು ಮತ್ತೊಂದು ಮಷೀನ್ ಗೆ ಕನೆಕ್ಟ್ ಆಗಿದ್ದವು. ಆದರೆ ಆ ಮಷೀನ್ ಮಾನಿಟರ್ ಮೇಲೆ ಯಾವುದೇ ಗ್ರಾಫ್ ಇರದೇ, ಒಂದು ತಾರೀಕು ಮತ್ತು ವೇಳೆಯನ್ನು ಕೆಂಪು ಬಣ್ಣದಲ್ಲಿ ತೋರಿಸುತ್ತಿತ್ತು "1 ಜನವರಿ 2051"

ಆ ರೂಮಿನಲ್ಲಿ ಕೇವಲ ಮಷೀನ್ ಬೀಪ್ ಮತ್ತು ಕೆಲವು ಫ್ಯಾನ್ ತಿರುಗುತ್ತಿದ್ದ ಶಬ್ದಗಳು ಮಾತ್ರ  ಇತ್ತು. ಬೆಳಕು ಬಹಳ ಕಡಿಮೆ ಇದ್ದು, ರೂಮಿನಲ್ಲಿ ಮಂಚಗಳ ಎದುರಿಗೆ ಬಹಳ ದೊಡ್ಡ ಟಿವಿ, ಮೂಲೆಯಲ್ಲಿ ದೊಡ್ಡ ರೆಫ್ರಿಜಿರೇಟರ್, ಕುಕಿಂಗ್ ಯೂನಿಟ್ ಮತ್ತು ಒಂದು ಮನೆಗೆ ಬೇಕಾದ ಎಲ್ಲ ಸಾಮಗ್ರಿಗಳು ಇತ್ತು. ಮತ್ತೊಂದು ಮೂಲೆಯಲ್ಲಿ ಒಂದು ಟೇಬಲ್ , ಪುಸ್ತಕಗಳು, ಮೂರು ದೊಡ್ಡ ಕಪಾಟುಗಳು ಕಾಣಿಸುತ್ತಿತ್ತು. ಆದರೆ ರೂಮಿನಲ್ಲಿ ಯಾವುದೇ ಕಿಟಕಿ, ಬಾಗಿಲು ಕಾಣಿಸಲಿಲ್ಲ!

ಇದ್ದಕ್ಕಿದ್ದಂತೆ, ಯುವಕನಿಗೆ ಕನೆಕ್ಟ್ ಆಗಿದ್ದ ಮಷೀನ್ ಇಂದ ಜೋರಾಗಿ ಬೀಪ್ ಶಬ್ದ ಬರಲು ತೊಡಗಿತು, ಯುವಕನ ದೇಹ ಅಲುಗಾಡಲು ಆರಂಭಿಸಿತು. ಯುವಕ ಮೆತ್ತಗೆ ಅವನ ಕಣ್ಣು ತೆರೆದು, ಸುತ್ತಲೂ ನೋಡಿದ. ಮೆತ್ತಗೆ ಅವನ ಬಾಯಿ ಮತ್ತು ಮೂಗಿಗೆ ಜೋಡಿಸಿದ್ದ ಟ್ಯೂಬ್ ಗಳನ್ನು ತೆಗೆದ. ಅವನ ಎದುರಿದ್ದ ಅದಾಗದೆ ಟಿವಿ ಹಾಗು ರೂಮಿನ ಎಲ್ಲ ಲೈಟ್ಗಳು ಆನ್ ಆದವು. ಯುವಕ ಆಶ್ಚರ್ಯದಿಂದ ಎಲ್ಲ ಕಡೆ ನೋಡಿದ, ತಕ್ಷಣ ಆ ಯುವಕನಿಗೆ ಅಳವಡಿಸಿದ್ದ ಎಲ್ಲ ಟ್ಯೂಬ್ ಗಳು, ಪ್ರೋಬ್ ಗಳು ಬಿಚ್ಚುಕೊಂಡು ಮಷೀನ್ ಕಡೆಗೆ ಹೋಗಿಬಿಟ್ಟವು. ಅವನು ಕುಳಿತು ತನ್ನಷ್ಟಕ್ಕೆ ತಾನೇ ಉಸಿರಾಡಿದ.

ಟಿವಿಯ ಮೇಲೆ 'ಹಾಯ್ ಜೀವನ್' ಎನ್ನುವ ಪದಗಳು ಮೂಡಿದವು. ಯುವಕ ತನ್ನ ಹೆಸರನ್ನು ನೋಡಿ ಸಂತಸದಿಂದ ಕೈಗಳನ್ನು ಮೇಲೆತ್ತಿ ಜೋರಾಗಿ 'ಹಾಯ್' ಎಂದ. 

ಒಬ್ಬ 60ರ ಹರೆಯದ ಸಂತಸದಿಂದ ಇರುವ ಮನುಷ್ಯನ ಮುಖ ಟಿವಿ ಯಲ್ಲಿ ಕಾಣಿಸಿತು. ಯುವಕ  'ಅಪ್ಪಾ ಅಪ್ಪಾ' ಎಂದು ಕಿರುಚತೊಡಗಿದ. ಟಿವಿ ಯಲ್ಲಿ ಬಂದವರು ಮಾತನಾಡಲು ಶುರು ಮಾಡಿದರು 'ಜೀವನ್, ಹೊಸ ಪ್ರಪಂಚಕ್ಕೆ ನಿನಗೆ ಸ್ವಾಗತ. ನಾನು ಈಗ ಹೇಳುವ ಮಾತುಗಳನ್ನು ಸರಿಯಾಗಿ ಕೇಳಿಸಿಕೋ. ಮನಸ್ಸನ್ನು ಗಟ್ಟಿ ಮಾಡಿಕೊಂಡು ನಾನು ಹೇಳಿದ ಹಾಗೆ ಮಾಡು.

ಮಾತು ನಿಲ್ಲಿಸಿ ಜೋರಾಗಿ ಉಸಿರುತೆಗೆದುಕೊಂಡು ಆ ವ್ಯಕ್ತಿ ಮತ್ತೆ ಮಾತನಾಡಿದರು "ಡಿಯರ್ ಜೀವನ್, ನಿನ್ನ ಪಕ್ಕದಲ್ಲಿರುವ ಮಂಚವನ್ನು ನೋಡು - ಅಲ್ಲಿ ಯಾರು ಇರದಿದ್ದರೆ, ನಾನು ಮತ್ತು ನಿಮ್ಮಮ್ಮ ಬದುಕಿಲ್ಲ ಎಂದರ್ಥ, ನಾವು ಸತ್ತ ದಿನ ಹಾಗು ಟೈಮ್ ಅನ್ನು ನಮ್ಮ ಮಂಚಕ್ಕೆ ಅಂತಿದ್ದ ಮಾನಿಟರ್ ತೋರಿಸುತ್ತಿದೆ ನೋಡು". ಜೀವನ್ ಅಳುಕಿನಿಂದ ಪಕ್ಕದ ಮಂಚವನ್ನು ನೋಡಿದ ಅಲ್ಲಿ ಯಾರು ಇರಲಿಲ್ಲ. ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದ "ಅಪ್ಪಾ ಅಮ್ಮ ನನ್ನನ್ನು ಒಬ್ಬನೇ ಬಿಟ್ಟು ಎಲ್ಲಿ ಹೋದಿರಿ " ಎಂದು ಕೂಗಿದ.

ಅಪ್ಪನ ಮಾತು ಮುಂದುವರಿಯಿತು "ಜೀವನ್, ಯೋಚಿಸಬೇಡ. ಈ ವಿಡಿಯೋವನ್ನು ನಿನಗಾಗಿ ನಾನು ಸಾಯುವ ಮುಂಚೆ ರೆಕಾರ್ಡ್ ಮಾಡಿ ಈಗ ತೋರಿಸುತ್ತಿದ್ದೇನೆ. ನೀನು ಈಗ ಈ ಜಾಗದಲ್ಲಿ ಬದುಕಿರುವ ಏಕೈಕ ಜೀವಿ. ಹೆದರಬೇಡ ಇದೇ ರೂಮಿನಲ್ಲಿ ನಿನಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಇನ್ನು ಐದು ವರ್ಷ ಸುಖಕರವಾಗಿ ಇರಲು ಅವಕಾಶ ಮಾಡಿದ್ದೇನೆ. ನೀನು ಒಂದು ದೊಡ್ಡ ಪರೀಕ್ಷೆಯನ್ನು ಗೆದ್ದು ಬಂದಿದ್ದೀಯ - ನನಗೆ ಬಹಳ ಸಂತೋಷವಾಗಿದೆ. ನಿನ್ನನ್ನು ಬದುಕಿ ಉಳಿಸಲು ಬಹಳ ಕಷ್ಟಪಟ್ಟು ಈ ರೂಮನ್ನು ಸಿದ್ಧಪಡಿಸಿದ್ದೇವೆ. ನಾನು ಮುಂದೆ ಹೇಳುವ ಮಾತುಗಳನ್ನು ಗಮನವಿಟ್ಟು ಕೇಳು"

"ನಿನಗಿದು ಗೊತ್ತೇ, ನೀನು ಅದೇ ಹಾಸಿಗೆ ಮೇಲೆ ಸುಮಾರು ಹತ್ತು ವರ್ಷ ನಿನ್ನ ಮೆದುಳಿಗೆ ಮತ್ತು ದೇಹಕ್ಕೆ ಯಾವುದೇ ತೊಂದರೆ ಆಗದಂತೆ ಮೆಡಿಕಲ್ ಇಂಡ್ಯೂಸ್ಡ್ ಕೋಮಾದಲ್ಲಿ ಮಲಗುವಂತೆ ಮಾಡಿದ್ದೆ. ನೀನು ಆರೋಗ್ಯವಾಗಿ ಬದುಕುಳಿದಿರುವುದರಿಂದ ನಿನಗೆ ಅಳವಡಿಸಿದ್ದ ಎಲ್ಲ ಟ್ಯೂಬ್ ಮತ್ತು ಪ್ರೋಬ್ ಗಳ ಸಂಪರ್ಕ ಕಡಿದುಕೊಂಡಿವೆ. ನೀನು ಬಹಳ ಲಕ್ಕಿ ... ಆದರೆ ನಿಮ್ಮಮ್ಮ ಮತ್ತು ನಾನು ಅಷ್ಟು ಲಕ್ಕಿ ಅಲ್ಲ!" ಈ ಮಾತು ಕೇಳಿದ ಜೀವನ್ ಕಣ್ಣಿನಲ್ಲಿ ಧಾರಾಕಾರವಾಗಿ ಕಣ್ಣೀರು ಬಂದಿತು. ಬಿಕ್ಕಿ ಬಿಕ್ಕಿ ಅಳತೊಡಗಿದ. 

"ಸಾಕು, ಸಮಾಧಾನ ಮಾಡಿಕೋ ಕಂದ ವಾಸ್ತವವನ್ನು ಒಪ್ಪಿಕೊ. ಮುಂದೆ ಏನು ಮಾಡಬೇಕೆಂದು ನಾನು ವಿವರವಾಗಿ ತಿಳಿಸುತ್ತೇನೆ ಮತ್ತು ನಾನು ನಿನ್ನ ಜೊತೆ ಇದ್ದೆ ಇರುತ್ತೇನೆ. ಈಗ ತಾನೇ ಧೀರ್ಘಕಾಲದ ನಿದ್ದೆ ಇಂದ ಎದ್ದಿದ್ದೀಯ. ನಿನ್ನ ಜೊತೆಗಿರಲಿ ಎಂದು ಒಬ್ಬ ರೋಬೋಟ್ ಅನ್ನು ಸೃಷ್ಟಿ ಮಾಡಿದ್ದೇನೆ. ಅವನ ಹೆಸರು ಮಿಂಚು, ಇಗೋ ಅಲ್ಲಿ ಬರುತ್ತಿದ್ದಾನೆ ನೋಡು. ಅವನು ಹೇಳಿದ ರೀತಿ ಈಗ ಮಾಡು, ಸ್ವಲ್ಪ ಸಮಯದ ನಂತರ ನಾನು ಮತ್ತೆ ಇದೇ ಪರದೆ ಮೇಲೆ ಬರುತ್ತೀನಿ. ಟೇಕ್ ಕೇರ್" ಎಂದು ಅಭಿ ಟಾಟಾ ಮಾಡಿದರು. 

ಒಂದು ಮೂರು ಅಡಿ ಎತ್ತರದ ಚಿಕ್ಕ ಹುಡುಗನ ರೂಪದ ರೋಬೋಟ್ ಮಿಂಚು ಓಡುತ್ತಾ ಬಂದ. "ಹಾಯ್ ಜೀವನ್ ಹೇಗಿದ್ದಿಯೋ, ನಾನು ಮಿಂಚು ಕಣೋ" ಎಂದು ಬಹಳ ವರ್ಷಗಳ ಸ್ನೇಹಿತನ ರೀತಿ ಕಣ್ಣು ಸನ್ನೆ ಮಾಡಿ ಕೈ ಹಿಡಿದುಕೊಂಡ. "ಜೀವನ್, ನೀನು ಈಗ ಮೊದಲು ಸ್ನಾನ ಮಾಡಬೇಕು ಬಾ" ಎಂದು ಬಾತ್ ರೂಮಿಗೆ ಎಳೆದುಕೊಂಡು ಹೋದ. ಹಲ್ಲು ಉಜ್ಜುವುದು ಮರೆತೇ ಹೋಗಿದ್ದ ಜೀವನ್, ಮಿಂಚು ಸಹಾಯದಿಂದ ಮತ್ತೆ ಹಲ್ಲು ಉಜ್ಜುವುದು ಕಲಿತುಕೊಂಡು, ಮುಖವನ್ನು ಆಟೋಮ್ಯಾಟಿಕ್ ಶೇವರ್ ಮಷೀನ್ ಗೆ ಅಂಟಿ ನಿಂತಾಗೆ ಅವನ ಮುಖದಲ್ಲಿದ್ದ ಎಲ್ಲ ಕೂದಲು ಮಾಯವಾಗಿ ಕ್ಲೀನ್ ಶೇವ್ ಆದ ಮುಖ ಕಂಗೊಳಿಸಿತು. ನಂತರ ಶವರ್ ಕೆಳಗೆ ನಿಂತ. ಮಿಂಚು ಅಲ್ಲಿದ್ದ ಮಾನಿಟರ್ ಮೇಲೆ ಕಮಾಂಡ್ ಕೊಟ್ಟ ಮೇಲೆ ಜೀವನ್ ಗೆ ಬೇಕಾದ ಬಿಸಿಗೆ ನೀರು ಮೈಗೆ ತಾಕಿದಾಗ ಜೀವನ್ ಯಾವುದೊ ಬೇರೆ ಲೋಕಕ್ಕೆ ಹೋದ ಅನುಭವವಾಯಿತು. ಸೋಪ್ ಮತ್ತು ಶಾಂಪೂವಿನಿಂದ ಮೈ ತೊಳೆದು ನಿಂತಾಗ, ಮಿಂಚು ಅವನಿಗೆ ಶುಭ್ರ ಟವೆಲ್ ನೀಡಿ ಒರೆಸುಕೊಳ್ಳುವಂತೆ ಹೇಳಿದ. ಅಲ್ಲೇ ಇದ್ದ ಒಳ ವಸ್ತ್ರ, ಟಿ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿ ಬಾತ್ ರೂಮಿನಿಂದ ಹೊರ ಬಂದ. 

ಮಿಂಚು, ಜೀವನ್ನನ್ನು ಎಳೆದುಕೊಂಡು ಅಡುಗೆಮನೆಯಲ್ಲಿದ್ದ ಟೇಬಲ್ ಬಳಿ ಕುಳಿತು ಕೊಳ್ಳಲು ಹೇಳಿ, ಮೊದಲು ಅಲ್ಲಿದ್ದ ನೀರನ್ನು ಕುಡಿಯಲು ಹೇಳಿ, ನಂತರ ತುಂಡು ಮಾಡಿದ್ದ ಹಣ್ಣುಗಳನ್ನು ತಿನ್ನಲು ಹೇಳಿದ. "ಜೀವನ್, ಹೊಟ್ಟೆ ತುಂಬಿತಾ ಇಲ್ಲ ಇನ್ನೂ ಏನಾದರು ತಿನ್ನುತೀಯ?" ಎಂದು ಕೇಳಿದಾಗ, ಜೀವನ್ ತಾನು ಹತ್ತು ವರ್ಷ ತನಗೆ ತಾನೇ ತಿನ್ನುವುದನ್ನು ಮರೆತಿದ್ದರೂ ಸಹ ಹೊಟ್ಟೆ ಹಸಿವಿನಿಂದ ನೀರು ಕುಡಿದು, ಹಣ್ಣುಗಳನ್ನು ತಿಂದಿದ್ದು ಅವನಿಗೇ ಆಶ್ಚರ್ಯವಾಯಿತು. "ಮಿಂಚು ಈಗ ಇಷ್ಟು ಸಾಕು, ಆಮೇಲೆ ಒಂದು ನನ್ನ ಮೆಚ್ಚಿನ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ಕೊಡ್ತೀಯಾ" ಅಂದ. ಮಿಂಚು, ಜೋರಾಗಿ ನಕ್ಕು, "ನನಗೆ ನಿನ್ನ ಎಲ್ಲ ಮೆಚ್ಚಿನ ಪದಾರ್ಥಗಳೆಲ್ಲ ಗೊತ್ತು, ಡೋಂಟ್ ವರಿ ಎಲ್ಲ ವ್ಯವಸ್ಥೆ ಆಗಿದೆ, ಈಗ ಮತ್ತೆ ನಿನ್ನಪ್ಪನ ಜೊತೆ ಮಾತು ಮುಂದುವರಿಸು. ನಾನು ಅಷ್ಟರಲ್ಲಿ ಈ ರೂಮಿನಲ್ಲಿ ನಿನ್ನ ವ್ಯವಸ್ಥೆಗೆ ಎಲ್ಲಾ ಸಿದ್ಧ ಪಡಿಸಿ ಮತ್ತೆ ಕಾಣುತ್ತೇನೆ, ಹೋಗು ನಿನ್ನಪ್ಪ ಮಾನಿಟರ್ ಅಲ್ಲಿ ಕಾಯುತ್ತಿರಬೇಕು" ಎಂದು ಕಳಿಸಿದ.

ಅಪ್ಪನ ವಿಡಿಯೋ ಮಾನಿಟರ್ ಮೇಲೆ ಜೀವನ್ ತನ್ನ ಮೊದಲ ಸ್ಥಳಕ್ಕೆ ಹಿಂತಿರುಗಿದಾಗ ತಕ್ಷಣ ಮೂಡಿತು. " ವಾವ್ ಏನ್ ಚಂದ ಕಾಣಿಸುತ್ತಿದ್ದಿಯೋ ಕಂದ, ಬಾ ಕುಳಿತಿಕೊ ಮಾತು ಮುಂದುವರಿಸುತ್ತೇನೆ. ನಿನಗೆ ಗೊತ್ತಿರುವ ಹಾಗೆ ನನ್ನ ಹೆಸರು ಅಭಿಮನ್ಯು. ನಾನು ನಮ್ಮ ಸರಕಾರದ ಒಂದು ಬಹಳ ರಹಸ್ಯವಾದ ಒಂದು ಅಣುಶಕ್ತಿ ಕೇಂದ್ರದಲ್ಲಿ ಉನ್ನತ ಹುದ್ದೆಯ ವಿಜ್ಞಾನಿಯಾಗಿದ್ದೆ. ನನ್ನ ಜೊತೆಯಲ್ಲಿ ಅತಿ ಬುದ್ಧಿವಂತರಾದ ಇತರ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದರು. ನಿನ್ನಮ್ಮ ಅನಾಮಿಕ ಮತ್ತು ನಾವೆಲ್ಲಾ ನಮ್ಮ ಕೇಂದ್ರದ ಪಕ್ಕದಲ್ಲೇ ಇದ್ದ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತೆದ್ದೆವು. ನಿನ್ನಮ್ಮ ಬಹಳ ಒಳ್ಳೆಯ ಗಾಯಕಿ, ಪೈಂಟರ್ ಮತ್ತು ಅತ್ಯುತ್ತಮ ಅಡುಗೆ ಮಾಡುತ್ತಿದ್ದಳು. ನೀನು ಮಾತನಾಡುವುದನ್ನು ಬಹಳ ಬೇಗ ಕಲಿತೆ. ನಿನಗೆ ಎರಡೂವರೆ ವರ್ಷವಾದಾಗ ನಮ್ಮ ಕ್ವಾರ್ಟರ್ಸ್ ನಲ್ಲೆ ಇದ್ದ ಕೇಂದ್ರೀಯ ವಿದ್ಯಾಲಯ ಸ್ಕೂಲ್ಗೆ ಸೇರಿಸಿದೆವು. ನಿನಗೆ ಸ್ಕೂಲ್ ಹೋಗುವುದು, ನಿನ್ನ ಫ್ರೆಂಡ್ಸ್ ಜೊತೆ ಆಟವಾದುವು ಬಹಳ ಇಷ್ಟವಾಗುತ್ತಿತ್ತು. ನಿನಗೆ ಅದರ ನೆನಪಿದೆಯೇ?" ಜೀವನ್ ತಲೆಯನ್ನು ಹೌದು ಅಂತ ಅಲ್ಲಾಡಿಸಿದ, ಕಣ್ಣಿನ ತುಂಬಾ ನೀರು ತುಂಬಿತ್ತು. 

"ನಿನಗೆ ಸುಮಾರು ನಾಲ್ಕು ವರ್ಷವಾದಾಗ, ನನ್ನ ಸಂಶೋಧನೆಯ ಮೂಲಕ ಭವಿಷ್ಯದಲ್ಲಿ ಏನಾಗುತ್ತೆ ಅಂತ ತಿಳಿಯತೊಡಗಿತು. ಆ ದಿನದಿಂದ ಎಂಟು ತಿಂಗಳಿನ ನಂತರ ಅಂದರೆ 2040 ಇಸವಿ ಡಿಸೆಂಬರಿನಲ್ಲಿ ಬಾಹ್ಯಾಕಾಶದಿಂದ ಬರುವ ಪ್ರಬಲ ರೇಡಿಯೋ ತರಂಗಗಳು ಜಗತ್ತಿನ ಎಲ್ಲಾ ಅಣು ಬಾಂಬ್ ಗಳು ಮತ್ತು ಪರಮಾಣು ವಿದ್ಯುತ್ ಕೇಂದ್ರದಲ್ಲಿರುವ ಯುರೇನಿಯಂ, ಥೋರಿಯಂ, ಪ್ಲುಟೋನಿಯಂ ಮತ್ತಿತರ ಎಲ್ಲಾ ಪರಮಾಣುಗಳು ತಮ್ಮಷ್ಟಕ್ಕೆ ತಾವೇ ಆಕ್ಟಿವೇಟ್ ಆಗುವಂತೆ ಮಾಡಿ ಎಲ್ಲಾ ಜೀವಿಗಳನ್ನು ಸಾಯುವಂತೆ ಮಾಡಿ, ಪ್ರತಿ ದೇಶಗಳು ಸರ್ವನಾಶವಾಗುತ್ತವೆ. ಹೇಗೆ ಹಿರೋಷಿಮಾ ಮತ್ತು ನಾಗಸಾಕಿ ಯುದ್ಧದಲ್ಲಿ ಹೇಗೆ ನಾಶವಾಯಿತೋ, ಅದಕ್ಕಿಂತ ಹತ್ತುಪಟ್ಟು ಜಗತ್ತಿನ ಮೂಲೆ ಮೂಲೆ ಯಲ್ಲೂ ಅಣು ಬಾಂಬ್ ಹಾಕಿದ ರೀತಿ ಆಗುತ್ತದೆ. ಏಕೆಂದರೆ ಜಗತ್ತಿನ ಎಲ್ಲಾ ಪ್ರಾಂತ್ಯದಲ್ಲೂ ಪರಮಾಣುಗಳನ್ನು ಮನುಷ್ಯ ಭೂಮಿಯಿಂದ ಬಗೆದು ಮೇಲೆ ತಂದಿಟ್ಟಿದ್ದಾನೆ. ಭೂಮಿಯ ಒಳಗಡೆ ಇರುವ ಲೋಹ, ಪರಮಾಣು, ತೈಲ ಮತ್ತಿತರ ವಸ್ತುಗಳನ್ನು ಮನುಷ್ಯ ತಡೆ ಇಲ್ಲದಂತೆ ತೆಗೆದಿರುವುದು ಅವನ ವಿನಾಶಕ್ಕೆ ಕಾರಣವಾಗುತ್ತದೆ ಎಂದು ತಿಳಿಯಿತು. ಇದರ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿ ನಾನು ನನ್ನ ರಿಸರ್ಚ್ ಪೇಪರ್ ಸಿದ್ಧಪಡಿಸಿ ನಮ್ಮ ಉನ್ನತ ಅಧಿಕಾರಿಗಳು ಮತ್ತು ಮಿನಿಸ್ಟರ್ ಗಳ ಗಮನಕ್ಕೆ ತಂದಾಗ ನನಗೆ ಅವರು ಹೇಳಿದ್ದು, ಸುಮ್ಮನಿರಿ ಅಭಿ, ಈ ಪೇಪರ್ ಅನ್ನು ಎಲ್ಲೂ ಪಬ್ಲಿಶ್ ಮಾಡಬೇಡಿ ಅದರಿಂದ ನಮ್ಮ ಜನ ಭಯಭೀತರಾಗಿ ಏನೇನೋ ಮಾಡ್ತಾರೆ ನಮಗೆ ಅದನ್ನು ಎದುರಿಸಲು ಆಗಲ್ಲ ಅಂತ ಹೇಳಿ ಬಾಯಿ ಮುಚ್ಚಿಸಿದರು. ಏನಾದರು ನಾನು ಆ ಪೇಪರ್ ಪಬ್ಲಿಶ್ ಮಾಡಿದರೆ ಉಳಿಗಾಲವಿಲ್ಲ ಎಂದು ಸಹ ಹೆದರಿಸಿದರು"

"ಮತ್ತಷ್ಟು ಸಂಶೋಧನೆ ಮಾಡಿದಾಗ ನನಗೆ ತಿಳಿದಿದ್ದು, ಭೂಮಿಯ ಮೇಲಿನ ಮತ್ತು ಸಮುದ್ರದಾಳದ ಯಾವ ಜೀವಿಯನ್ನು ಈ ಘಟನೆ ಆದರೆ ಉಳಿಸಲು ಸಾಧ್ಯವಿಲ್ಲ, ಆದರೆ ನಾವು ಯಾವುದಾದರು ಅಣುವಿಕಿರಣದ ಪರಿಮಾಣವನ್ನು ಎದುರಿಸುವ ಒಂದು ಲೋಹವನ್ನು ಕಂಡು ಹಿಡಿದು, ಅದರ ಒಳಪದರ ದಿಂದ ಹಳೆಯ ಕಾಲದಲ್ಲಿ ಬೆಳೆದ ಬತ್ತ-ರಾಗಿಯನ್ನು ನಮ್ಮ ರೈತರು ಸಂಗ್ರಹಿಸುತ್ತಿದ್ದ ಖಣಜದ ಮಾದರಿ ರೂಮ್ ಗಳನ್ನು ತಯಾರು ಮಾಡಿ ಭೂಮಿಯ ಒಳಗಡೆ ಸುಮಾರು ಐವತ್ತು ಅಡಿ ಒಳಗೆ ಹತ್ತು ವರ್ಷ ಬಚ್ಚಿಟ್ಟುಕೊಂಡರೆ ನಾವು ಬಚಾವ್ ಆಗಬಹುದೆಂದು. ಆದರೆ ಆ ಹತ್ತು ವರ್ಷ ಎಲ್ಲಾರಿಗೂ ಬೇಕಾದ ಆಹಾರ, ಆಕ್ಸಿಜನ್, ಮತ್ತಿತರ ಪದಾರ್ಥಗಳನ್ನು ಕೂಡಿಡುವುದು ಅಸಾಧ್ಯದ ಸಂಗತಿ ಎನ್ನಿಸಿತು. "

"ನಿನಗೆ ತಿಳಿದಂತೆ ಜೀವವಿಕಾಸ ಈ ಜಗತ್ತಿನಲ್ಲಾಗಲು ಬಹಳ ಮಿಲಿಯನ್ ವರ್ಷಗಳೇ ತೆಗೆದುಕೊಂಡವು. ಪ್ರಬಲ ರೇಡಿಯೋ ತರಂಗಗಳು ಜಗತ್ತಿನ ಎಲ್ಲಾ ಅಣು ಬಾಂಬ್ ಗಳು ಮತ್ತು ಪರಮಾಣುಗಳನ್ನು ಆಕ್ಟಿವೇಟ್ ಮಾಡಿ ಜಗತ್ತಿನ ಎಲ್ಲ ಜೀವಿಗಳನ್ನು 2040  ಇಸವಿಯಲ್ಲಿ ನಾಶಮಾಡಿದರೆ, ಮತ್ತೆ ಜೀವವಿಕಾಸವಾಗುವುದಕ್ಕೆ ಇನ್ನೆಷ್ಟು ಮಿಲಿಯನ್ ವರ್ಷಗಳು ಬೇಕಾಗಬಹುದು? ಜೀವಿಗಳು ನಾಶವಾಗುವುದು ತಡೆಯಲು ಯಾರ ಸಹಾಯ ಸಿಗದಿದ್ದರೂ ನಾನು ಏನಾದರೂ ಮಾಡಲೇಬೇಕು ಎಂದು ತೀರ್ಮಾನಿಸಿದೆ.  ನಿನ್ನ ಅಮ್ಮನಿಗೆ ಈ ವಿಷಯವನ್ನು ತಿಳಿಸಿ, ಯಾರಿಗೂ ಯಾವ ಕಾರಣಕ್ಕೂ ಈ ವಿಷಯವನ್ನು ತಿಳಿಸಬಾರದು ಮತ್ತು ಇದನ್ನು ನಮ್ಮ ರಕ್ಷಣೆಗೋಸ್ಕರ ರಹಸ್ಯವಾಗಿ ಇಡಬೇಕೆಂದು ಆಣೆ ಮಡಿಸಿಕೊಂಡೆ. ನಿನ್ನಮ್ಮ ಮೊದಲು ಭಯ ಪಟ್ಟಳು, ನಂತರ ನನಗೆ ಧೈರ್ಯ ತುಂಬಿ ನನ್ನ ಕೆಲಸಕ್ಕೆ ಸಹಾಯಮಾಡುವುದಾಗಿ ಹೇಳಿದಾಗ ನನಗೆ ಆನೆಯ ಬಲ ಬಂದಂತಾಗಿತ್ತು. "

"ನನ್ನ ಸಂಶೋಧನೆಯ ಪ್ರಕಾರ 13 ಡಿಸೆಂಬರ್ 2040 ದಿನದಂದು ರೇಡಿಯೋ ತರಂಗಗಳು ಭೂಮಿಯನ್ನು ಪ್ರವೇಶಿಸಿ ಜಗತ್ತಿನ ಎಲ್ಲಾ ಅಣು ಬಾಂಬ್ ಗಳು ಮತ್ತು ಪರಮಾಣುಗಳನ್ನು ಆಕ್ಟಿವೇಟ್ ಮಾಡುತ್ತವೆ ಎಂದು ಖಚಿತ  ಪಡಿಸಿಕೊಂಡೆ. ಆ ರೇಡಿಯೋ ತರಂಗಗಳು ಭೂಮಿಯನ್ನು ಪ್ರವೇಶಿಸಲು ತಡೆಯುವುದಕ್ಕೆ ಯಾವ ಉಪಾಯವು ಇಲ್ಲ ಎಂದು ನನಗೆ ತಿಳಿಯಿತು. ಇರುವ ಒಂದೇ ಉಪಾಯ ಖಣಜದ ಮಾದರಿ ರೂಮ್ ಗಳನ್ನು ಯಾವುದಾದರು ಅಣುವಿಕಿರಣವನ್ನು ತಡೆಯುವ ಲೋಹದಿಂದ ಮಾಡಿ ಅಲ್ಲಿ ಜಗತ್ತಿನ ಕೆಲವು ಜೀವಿಗಳನ್ನು ಸಂರಕ್ಷಿಸಿ, ಆ ರೂಮನ್ನು ಸುಮಾರು ಐವತ್ತು ಅಡಿ ಭೂಮಿಯ ಒಳಗೆ ಭದ್ರವಾಗಿಟ್ಟು, ಅಣುವಿಕಿರಣ ಭೂಮಿಯ ಮೇಲೆ 10 ವರ್ಷದ ನಂತರ ಕಡಿಮೆಯಾದಾಗ ಮತ್ತೆ ಆ ಜೀವಿಗಳನ್ನು ಭೂಮಿಗೆ ಬಂದು ಜೀವಿಗಳು ಬದುಕಲು ಅವಕಾಶ ಮಾಡಿಕೊಡ ಬೇಕು.  ಅದು ಕಷ್ಟದ ಕೆಲಸ ಆದರೆ ಅಸಾಧ್ಯವಲ್ಲ."

"ನನ್ನ ಸರ್ಕಾರದ ಕೆಲಸದಲ್ಲಿ ಬಿಡುವು ಮಾಡಿಕೊಂಡು ನನ್ನ ರಿಸರ್ಚ್ ಮುಂದುವರಿಸಿ ಯಾವ ಲೋಹದಿಂದ ಖಣಜವನ್ನು ತಯಾರಿಸಬೇಕೆಂದು ಕಂಡು ಹಿಡಿಯತೊಡಗಿದೆ. ನಮ್ಮ ಹೆಮ್ಮೆಯ ವಿಜ್ಞಾನಿಗಳು ಒಂದು ವಿಚಿತ್ರ ಲೋಹದ ಮಹತ್ವನನ್ನು ಒಂದು ರಿಸರ್ಚ್ ಪೇಪರ್ ನಲ್ಲಿ ವಿಸ್ತಾರವಾಗಿ ತಿಳಿಸಿದ್ದರು. ಅದಕ್ಕೆ ಏನೂ ಹೆಸರಿಡದೆ ಆ ಲೋಹ ಎಂತಹ ಅಣುವಿಕಿರಣಗಳನ್ನುತಡೆಯುವ ಸಾಮರ್ಥ್ಯವಿದೆ ಎಂದು ಖಚಿತ ಪಡಿಸಿಕೊಂಡೆ. ಆ ಲೋಹದ ಕಾಂಬಿನೇಶನ್ ಬಗ್ಗೆ ಮತ್ತೆ ಸಂಶೋಧನೆ ಮಾಡಿ, ಸ್ಯಾಂಪಲ್ ಆಗಿ ಒಂದು ಡಬ್ಬಿಯನ್ನು ಆ ಲೋಹದಿಂದ ತಯಾರಿಸಲು ಹದಿನೈದು ದಿನ ಹಿಡಿಯಿತು. ನಾನು ಇನ್ನು ಕೇವಲ ಐದೂವರೆ ತಿಂಗಳಿನಲ್ಲಿ ನನ್ನ ಎಲ್ಲ ಸಿದ್ಧತೆ ಮುಗಿಸಬೇಕು ಎಂದು ಪ್ರತಿದಿನ ಯಾವ ಕೆಲಸಗಳನ್ನು ಮುಗಿಸಬೇಕೆಂದು ಡೀಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್ ತಯಾರಿಸಿದೆ. ಆ ಲೋಹದ ಡಬ್ಬಿಯ ಒಳಗೆ ಕೆಲವು ಸಾಮಗ್ರಿಗಳನ್ನು ಇತ್ತು ಡಬ್ಬಿಯನ್ನು ಪೂರ್ತಿಯಾಗಿ ಮುಚ್ಚಿದೆ. ಭೂಮಿಯ ಒಳಗೆ ಐವತ್ತು ಅಡಿ ಆಳದಲ್ಲಿ ಆ ಡಬ್ಬಿಯನ್ನು ಹಾಕಿ ಮುಚ್ಚಿದೆ. ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಂಡು, ಕೃತಕವಾಗಿ ಅಣುವಿಕಿರಣಗಳು ಆ ಡಬ್ಬಿಯ ಮೇಲೆ  ಬೀಳುವಂತೆ ಮಾಡಿದಾಗ ನನಗೆ ಖಚಿತವಾಯಿತು ಆ ಡಬ್ಬಿಯ ಒಳಗಿನ ಯಾವ ಪದಾರ್ಥಕ್ಕೂ ಏನೂ ಧಕ್ಕೆ ಯಾಗದಿದ್ದದ್ದು. ಸಂತೋಷದಿಂದ ಕುಣಿದೆ ಕುಪ್ಪಳಿಸಿದೆ, ಸಧ್ಯ ನನ್ನ ಸುತ್ತ ಮುತ್ತ ಯಾರು ಇರಲಿಲ್ಲ. ಮನೆಗೆ ಓಡಿ ಹೋಗಿ ನಿನ್ನ ಅಮ್ಮ ಅನಾಮಿಕಾಗೆ ಎಲ್ಲ ವಿಷಯ ತಿಳಿಸಿದಾಗ ಅವಳು ಸಂತೋಷ ಪಟ್ಟು ನನ್ನ ಸಹಾಯಕ್ಕೆ ನಿಂತಳು"

"ಆ ಲೋಹವನ್ನು ನಮಗೆ ಸುಲಭವಾಗಿ ಸಿಗುವ ಸ್ಕ್ರಾಪ್ ಗಳಿಂದ ತಯಾರಿಸುವ ಸೂತ್ರ ಕಂಡು ಹಿಡಿದೆ -  ಆ ಲೋಹಕ್ಕೆ ನನ್ನ ಮೆಚ್ಚಿನ ಹೆಸರಿಟ್ಟೆ 'ಅನಾಮಿಕೆ' ಅಂತ. ನನ್ನ ಎಲ್ಲ ಕ್ಯಾಲ್ಕ್ಯುಲೇಷನ್ ಪ್ರಕಾರ ನನ್ನ ಬಳಿ ಇದ್ದ ಪದಾರ್ಥಗಳಿಂದ ಅನಾಮಿಕೆ ಲೋಹದಿಂದ ಒಂದು ರೂಮ್, ಅಡುಗೆಮನೆ ಮತ್ತು ಹೊಂದಿಕೊಂಡಂತೆ ಬಾತ್ ರೂಮ್, ಹಾಗೆ ಮತ್ತೊಂದು ರೂಮ್ನಲ್ಲಿ ಎಲ್ಲ ತರಕಾರಿ ಸೊಪ್ಪು ಮರಗಳ ಬೀಜಗಳನ್ನು, ಪ್ರಾಣಿಗಳ ಡಿಎನ್ಎ ಸಾಂಪಲ್ಸ್ ಗಳು, ಮುಖ್ಯವಾದ ಪಶು ಪಕ್ಷಿಗಳ ಮೊಟ್ಟೆಗಳು, ಕಂಪ್ಯೂಟರ್, ನನಗೆ ಬೇಕಾದ ಎಲ್ಲ ಸಂಶೋಧನೆಯ ಇನ್ಸ್ಟ್ರುಮೆಂಟ್ಸ್ ಗಳನ್ನು ಸಂಗ್ರಹಿಸ ಬಹುದೆಂದು. ಈ ಜೀವಿಗಳ ಸಾಂಪಲ್ಸ್ ಮತ್ತು ಬೀಜಗಳಿಂದ ಕೃತಕವಾಗಿ ಕಾಡು ಸೃಷ್ಟಿಸುವುದು ನನ್ನ ಉದ್ದೇಶವಾಗಿತ್ತು. "

"ಆದರೆ ಯಾರಿಗೂ ತಿಳಿಯದಂತೆ ಅನಾಮಿಕೆ ರೂಮನ್ನು ಹೇಗೆ ತಯಾರಿಸುವುದು ಮತ್ತು ಎಲ್ಲಿ ಆಳದ ಹೊಂಡದಲ್ಲಿ ಇಡುವುದು ಎಂದು ಯೋಚಿಸಿದಾಗ, ನಮ್ಮ ಮನೆಯ ಸಮೀಪವಿದ್ದ ಅಲೆಮಾರಿಗಳು ನೆನಪಾದರು. ಅವರು ತಮ್ಮ ಕೈಚಳಕದಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಸ್ಟ್ಯಾಚುಗಳನ್ನು ತಯಾರಿಸುವುದು ನೋಡಿದ್ದೆ. ಹಾಗೆ ಅವರಿಗೆ ನನ್ನ ಸಂಶೋಧನೆಗೆ ಬೇಕಾದಾಗೆಲ್ಲ ಅವರ ಸಹಾಯ ಪಡಿಯುತ್ತಿದ್ದೆ. ಅವರ ಯಜಮಾನ ಸುಬೇದಾರನನ್ನು ಭೇಟಿ ಮಾಡಿ ನಾನು ಒಂದು ಸಂಶೋಧನೆ ಮಾಡುತ್ತಿದ್ದೇನೆ ಅದಕ್ಕೆ ಅವನ ಗುಂಪಿನವರ ಸಹಾಯ ಬೇಕೆಂದಾಗ ಹಣ ಕೊಡಿ ಕೆಲಸ ತಗೊಳ್ಳಿ ಎಂದ. ಅವನಿಗೆ ಎರಡು ದಿನದ ನಂತರ ಸಿಗುತ್ತೇನೆ ಎಂದು ಹೇಳಿ ಹೊರಟೆ"

"ಇನ್ನು ಆಳವಾದ ಜಾಗದ ಬಗ್ಗೆ ಯೋಚಿಸುತ್ತಿರುವಾಗ, ನಿನ್ನಮ್ಮ ನಮ್ಮ ಚಂದದೂರಿನ ಉಪಯೋಗಿಸದೆ ಹಾಳು ಬಿದ್ದಿರುವ ಆಳವಾದ ಕ್ವಾರಿ ಸೈಟ್ ಬಗ್ಗೆ ಜ್ಞಾಪಕ ಮಾಡಿದಳು. ಅದಕ್ಕೆ ಇರಬೇಕು ಹೇಳುವುದು ನಾವು ಯಾವುದಾದರು ಒಳ್ಳೆಯ ಕಾರ್ಯಕ್ಕೆ ಕೈ ಹಾಕಿದರೆ ಮೊದಲು ನಮ್ಮನ್ನು ಪರೀಕ್ಷಿಸಲು ದೇವರು ಕೆಲವು ಅಡೆ-ತಡೆ ಮಾಡ್ತಾನೆ, ನಾವು ಮುನ್ನುಗ್ಗಿ ಜಯಿಸಿದರೆ ಮುಂದಿನ ದಾರಿ ಸುಗಮ ಮಾಡ್ತಾನೆ ಅಂತ."

"ನಾನು ಮತ್ತು ನಿನ್ನಮ್ಮ ಯಾರಿಗೂ ತಿಳಿಯದಂತೆ ಚಂದದೂರಿನ ಕ್ವಾರಿಯ ಪಕ್ಕ ಒಂದು ಬಂಗಲೆ ಯನ್ನು ಬಾಡಿಗೆಗೆ ಪಡೆದುಕೊಂಡು, ಅಲೆಮಾರಿ ಸುಬೇದಾರನ ತಂಡದವರಿಂದ ಅನಾಮಿಕೆ ರೂಮ್ಗಳನ್ನು ತಯಾರಿಸಲು ಯಾವುದೇ ತೊಂದರೆ ಇಲ್ಲದಂತೆ ಶುರು ಮಾಡಿದೆವು. ನಮ್ಮ ಜಾಗಕ್ಕೆ ಕೇವಲ ಕಾಡು ರಸ್ತೆ ಮಾತ್ರ ಇತ್ತು ಮತ್ತು ಅದು ಊರಿನಿಂದ ಬಹಳ ದೂರವು ಇತ್ತು. ಆ ಕ್ವಾರಿಯಲ್ಲಿ ದೆವ್ವವಿದೆ ಎಂದು ಯಾರೋ ಹಬ್ಬಿಸಿದ್ದರಿಂದ ಅಲ್ಲಿಗೆ ಬರಲು ಯಾರು ಧೈರ್ಯ ಮಾಡುತ್ತಿರಲಿಲ್ಲ. "

"ನಮ್ಮ ಅದೃಷ್ಟಕ್ಕೆ, ಆ ಕ್ವಾರಿಯ ಪಕ್ಕ ಯಾವುದೊ ಫ್ಯಾಕ್ಟರಿ ಯವರು ಬೆಟ್ಟದೆತ್ತರದಷ್ಟು ನಮಗೆ ಬೇಕಾದ ಸ್ಕ್ರಾಪ್ ಮೆಟೀರಿಯಲ್ ಗಳನ್ನು ಸುರಿದಿದ್ದರು. ಸರಿ, ನಮ್ಮ ತಂಡಕ್ಕೆ ಎಲ್ಲ ಸೂಚನೆಗಳನ್ನು ಕೊಟ್ಟೆ. ಅಲೆಮಾರಿ ಸುಬೇದಾರ ಮತ್ತು ಅವನ ತಂಡದವರಿಗೆ ನಾವು ಒಂದು ಸಂಶೋಧನೆ ಮಾಡುತ್ತಿದ್ದೇವೆ. ಅವರ ಕೆಲಸಕ್ಕೆ ನಮ್ಮ ಬಳಿ ಇದ್ದ ನಮ್ಮ ತಾತನ ಕಾಲದ ಚಿನ್ನದ ಒಡವೆಗಳು, ಬೆಳ್ಳಿ ಅವರಿಗೆ ಕೊಡುತ್ತೇನೆ ಎಂದು ಮತ್ತು ಐದೂವರೆ ತಿಂಗಳ ನಂತರ ನನ್ನ ಮನೆಯನ್ನು ಅವನ ಹೆಸರಿಗೆ ವರ್ಗಾಯಿಸಲು ಎಲ್ಲ ಕಾಗದಗಳನ್ನು ಸಿದ್ಧಪಡಿಸಿ ಅವನಿಗೆ ತೋರಿಸಿ ನಮ್ಮ ಮನೆಯ ಹಾಲಿನಲ್ಲಿ ಇಟ್ಟೆ. ನಮ್ಮನ್ನು ನಂಬಿದ ಅಲೆಮಾರಿ ಸುಬೇದಾರ ತನ್ನ ತಂಡದವರಿಗೆ ಹುರಿದುಂಬಿಸಿ ಮೂರು ತಿಂಗಳಿನಲ್ಲಿ ನನ್ನ ಕನಸಿನ ಅನಾಮಿಕೆಯನ್ನು ತಯಾರಿಸಿದ. 11 ಅಡಿ x 11 ಅಡಿಯ ರೂಮ್, ಅದಕ್ಕೆ ಅಂಟಿಕೊಂಡಂತೆ 20 ಅಡಿ x 20 ಅಡಿಯ ನನ್ನ ಪ್ರಯೋಗಾಲಯ ಸೃಷ್ಟಿಯಾಗಿತ್ತು. ತಂಡದವರಿಗೆಲ್ಲ ಅವತ್ತು ಅವರಿಷ್ಟದ ಮಾಂಸದ ಊಟ ಹಾಕಿಸಿದೆವು, ಹೌದು ಜೊತೆಗೆ ಹೆಂಡವೂ ಇತ್ತು. ಆ ರಾತ್ರಿ ನಾನು ಮತ್ತು ನಿನ್ನಮ್ಮ ನಿಶ್ಚಿಂತೆ ಯಾಗಿ ನಿನ್ನ ಜೊತೆ ಮಲಗಿದೆವು."

"ಮುಂದಿನ ದಿನಗಳಲ್ಲಿ ನಮಗೆ 11 ವರ್ಷಕ್ಕೆ ಬೇಕಾದ ಆಹಾರ ಪದಾರ್ಥಗಳು ಕೆಡದಂತೆ ಸಂಗ್ರಹಿಸಲು ಕೆಲಸ ಶುರು ಮಾಡಿದೆವು. ನನ್ನ ಸಂಶೋಧನೆಗೆ ಬೇಕಾದ ಎಲ್ಲ ಸಾಮಗ್ರಿಗಳು ಅನಾಮಿಕೆಯ ರೂಮಿನಲ್ಲಿ ಸೇರಲು ಪ್ರಾರಂಭವಾಯಿತು. ನಮಗೆ ಬೇಕಾದ ನೀರಿನ ವ್ಯವಸ್ಥೆ, ಆಕ್ಸಿಜೆನ್ ವ್ಯವಸ್ಥೆ ಅನಾಮಿಕೆ ರೂಮಿನ ಕೆಳಗೆ ಸಂಗ್ರಹಿಸಲು ವ್ಯವಸ್ಥೆ ಆಯಿತು. ಈ ಎಲ್ಲ ಕೆಲಸ ಮುಗಿಸಲು ಮತ್ತೊಂದು ತಿಂಗಳಾಯಿತು. ಇನ್ನು ಕೇವಲ ಒಂದೂವರೆ ತಿಂಗಳ ಸಮಯ ಮಾತ್ರ ಇತ್ತು."

"ನನ್ನ ಪ್ಲಾನ್ ಪ್ರಕಾರ ಇನ್ನು ಒಂದು ತಿಂಗಳಿನಲ್ಲಿ ನಾವು ಮೂರು ಜನ ಅನಾಮಿಕೆಯನ್ನು ಹೊಕ್ಕು, ಕ್ವಾರಿಯ ಒಳಗೆ ಸೇರಬೇಕೆಂದು. ನೀನು ಇನ್ನು ಚಿಕ್ಕವನಾಗಿದ್ದರಿಂದ ನಿನಗೆ ಇದು ಯಾವುದೂ ತಿಳಿಯದಂತೆ ನಿನ್ನನ್ನು ಸ್ವಲ್ಪ ದಿನ ಸ್ಕೂಲಿನ ಹಾಸ್ಟೆಲ್ನಲ್ಲಿ ಇರಲು ವ್ಯವಸ್ಥೆ ಮಾಡಿದ್ದೆವು. ಹಾಗೆ ನಾವು ಅನಾಮಿಕೆಯನ್ನು ಹೊಕ್ಕಮೇಲೆ ನೀನು ಇಂಡ್ಯೂಸ್ಡ್ ಕೋಮದಲ್ಲಿ ಇರುವ ವ್ಯವಸ್ಥೆಗೆ ಬೇಕಾದ ಇನ್ಸ್ಟ್ರುಮೆಂಟ್ಸ್ ಎಲ್ಲ ಸಂಗ್ರಹಿಸಿ, ಮೆಡಿಕಲ್ ಇಕ್ವಿಪ್ಮೆಂಟ್ ಗಳನ್ನು ಎಲ್ಲ ರೂಮಿನ ಒಳಗಡೆ ಇಟ್ಟೆವು. ನಮ್ಮ ಎಲ್ಲ ಕೆಲಸ ಅಂದುಕೊಂಡಂತೆ 20 ದಿನಗಳಲ್ಲಿ ಮುಗಿಯಿತು. ಇನ್ನು ಕೇವಲ 25 ದಿನಗಳು ಮಾತ್ರ ಉಳಿದಿದ್ದವು. "

"ನಾನು, ನಿನ್ನಮ್ಮ ಅನಾಮಿಕೆ ರೂಮಿನ ಎಲ್ಲ ಇನ್ಸ್ಟ್ರುಮೆಂಟ್ಸ್ ಗಳನ್ನು ಮೂರು ಬಾರಿ ಪರೀಕ್ಷಿಸಿದೆವು. ಎಲ್ಲವು ಸರಿ ಇರುವುದು ಖಚಿತ ಪಡಿಸಿಕೊಂಡ ನಂತರ, ನಿನ್ನನ್ನು ಹಾಸ್ಟೆಲ್ ನಿಂದ ಕರೆತಂದೆವು. ನೀನು ನಮ್ಮನ್ನು ನೋಡಿ ಖುಷಿ ಪಟ್ಟೆ."

ಜೀವನ್ ಗೆ ಆ ಸಂಧರ್ಭ ಮಸುಕು ಮಸುಕಾಗಿ ಜ್ಞಾಪಕ ಬಂದಂತಾಯಿತು. ಕಣ್ಣಲ್ಲಿ ನೀರು ತುಂಬಿತು. ಅದನ್ನು ನೋಡಿದ ಮಿಂಚು ಸ್ವಲ್ಪ ಟಿಶ್ಯೂ ಪೇಪರ್ ಕೊಟ್ಟು ಸಂತೈಸಿದ. 

"ನಮಗೆ ಇದ್ದ ಒಂದೇ ಮಾರ್ಗ ಎಂದರೆ ನಾವು ಮೂರು ಜನ ಇಂಡ್ಯೂಸ್ಡ್ ಕೋಮ ಸ್ಥಿತಿಯಲ್ಲಿ 10  ವರ್ಷ ಆರೋಗ್ಯವಾಗಿದ್ದು, ಭೂಮಿಯ ಮೇಲಿನ ಅಣುವಿಕಿರಣ ಕಡಿಮೆ ಆದದನ್ನು ಖಚಿತ ಪಡಿಸಿಕೊಂಡು ಆಚೆ ಬರುವುದೆಂದು. ನಾನು ಮತ್ತು ನಿನ್ನಮ್ಮ ಅನು (ಅನಾಮಿಕ) ಪ್ರತಿ ದಿನ ಕಷ್ಟಪಟ್ಟು ಎಲ್ಲ ಸಿದ್ಧತೆಗಳನ್ನು ಮಾಡಿದೆವು.  ಎಲ್ಲ ಯಂತ್ರಗಳನ್ನು ಸಿದ್ಧಪಡಿಸಿ ಅನಾಮಿಕೆ ರೂಮಿನಲ್ಲಿ ಅಳವಡಿಸಿ, ಎಲ್ಲವು ಸರಿಯಾಗಿ ಕೆಲಸ ಮಾಡುವುದನ್ನು ಪರೀಕ್ಷಿಸಿದೆ. ನಾನು ಸ್ವಾರ್ಥಿಯಾಗಿ ಕೇವಲ ನನ್ನ ಕುಟುಂಬವನ್ನು ಮಾತ್ರ ರಕ್ಷಿಸುವುದನ್ನು ಬಿಟ್ಟು ನನಗೆ ಯಾವ ಮಾರ್ಗವೂ ಸಹ ಕಂಡಿರಲಿಲ್ಲ, ಯಾಕೆಂದರೆ ನನಗೆ ಸಹಾಯ ಮಾಡಲು ನನ್ನ ಆಫೀಸಿನ ಸಹಚರರು, ಅಧಿಕಾರಿಗಳು ಮತ್ತು ಸರ್ಕಾರದವರು ನನ್ನ ಅಧ್ಯಯನವನ್ನು ನಂಬಲೇ ಇಲ್ಲ ನನ್ನನ್ನು ಹುಚ್ಚನ ರೀತಿ ನಡೆಸಿಕೊಂಡರು."

"ದಿನಾಂಕ 10 ಡಿಸೆಂಬರ್ 2040:   ನಾವು ಅನಾಮಿಕೆ ರೂಮಿನಲ್ಲಿ ಹೋಗುವ ದಿನ ಬಂದೇ ಬಿಟ್ಟಿತು. ನನ್ನ ನನಗೀಗ ಗೆಳೆಯನಾಗಿದ್ದ ಬಹಾದ್ದೂರ್ ಗೆ ನಾನು ಒಪ್ಪಿಕೊಂಡಿದ್ದ ಹಣ ಕೊಟ್ಟೆ ಮತ್ತು ನನ್ನ ಮನೆ ಅವನದೇ ಎಂದು ಎಲ್ಲ ಪ್ರಾಪರ್ಟಿ ಪೇಪರ್ಸ್ ಕೊಟ್ಟಿಬಿಟ್ಟೆ. ಅವನು ಬಹಳ ದಿನದಿಂದ ನಾನು ಮಾಡುತ್ತಿರುವ ಕೆಲಸದ ಬಗ್ಗೆ ಕೇಳುತ್ತಲೇ ಇದ್ದ. ಅದಕ್ಕೆ ನಾನು ಕೊಡುತ್ತಿದ್ದ ಒಂದೇ ಉತ್ತರ - ನಾವು ಸಂಶೋಧನೆ ಮಾಡುತ್ತಿದ್ದೇವೆ ಮನುಷ್ಯ ಹೇಗೆ ಆರೋಗ್ಯವಾಗಿ 100 ವರ್ಷ ಬಾಳಬಹುದೆಂದು. ಅದು ಸಫಲವಾದರೆ ಆ ರಹಸ್ಯವನ್ನು ಅವನು ಮತ್ತು ಅವನ ಸಂಗಡಿಗರಿಗೆ ತಿಳಿಸಿ ಅವರನ್ನು 100 ವರ್ಷಗಳ ಕಾಲ ಬದುಕುವಂತೆ ಮಾಡುತ್ತೇನೆ. ನಮ್ಮ ಅನಾಮಿಕೆ ರೂಮನ್ನು ಕ್ವಾರಿಯ ಸುಮಾರು 80 ಅಡಿ ಒಳಗಿನ ಹಳ್ಳಕ್ಕೆ ಹಾಕಿ ಕಲ್ಲು, ಇದ್ದಲು, ಸ್ಕ್ರಾಪ್ ಮೆಟೀರಿಯಲ್ಸ್ ಗಳನ್ನು ಹೇಗೆ ತುಂಬಬೇಕೆಂದು ಬಹಾದ್ದೂರ್ ಗೆ ತಯಾರಿಮಾಡಿ, ನಮ್ಮನ್ನು ಒಂದು ತಿಂಗಳ ನಂತರ ಹಳ್ಳ ದಿಂದ ತೆಗೆಯಬೇಕೆಂದು ಸುಮ್ಮನೆ ಹೇಳಿದ್ದೆ. ನನಗೆ ಖಾತ್ರಿಯಾಗಿತ್ತು ಒಂದು ತಿಂಗಳ ನಂತರ ಯಾವ ಜೀವಿಗಳು ಭೂಮಿಯ ಮೇಲೆ ಇರಲು ಸಾಧ್ಯವೇ ಇಲ್ಲ ಎಂದು. ಅವನ ಜೊತೆ ಅವನು ಬದುಕಿರುವವರೆಗೂ ಮಾತನಾಡಲು ವಾಕಿ- ಟಾಕಿ ಕೊಟ್ಟೆ. ಅವನನ್ನು ಗಟ್ಟಿಯಾಗಿ ಅಪ್ಪಿ, ಅವನು ಮತ್ತು ಅವನ ಸಂಗಡಿಗರಿಗೆಲ್ಲ ಧೀರ್ಘದಂಡ ನಮಸ್ಕಾರ ಮಾಡಿದಾಗ ಅವರು ಭಾವೋದ್ವೇಗದಿಂದ ಅವರೂ ಸಹ ನನಗೆ ಧೀರ್ಘದಂಡ ನಮಸ್ಕಾರ ಮಾಡಿದರು"

"ಭೂಮಿಯ ಮೇಲೆ ಗಣೇಶನ ವಿಗ್ರಹವನ್ನು ಇಟ್ಟು ಭಕ್ತಿ ಇಂದ ಪೂಜೆ ಮಾಡಿ  ನಮಸ್ಕರಿಸಿ, ನಮ್ಮ ಅನಾಮಿಕೆ ರೂಮಿನಲ್ಲಿ ಒಳ ಹೊಕ್ಕು ಅಲ್ಲಿದ್ದವರಿಗೆ ಮತ್ತೆ ನಮಸ್ಕರಿಸಿದೆವು. ಭೂಮಿಯನ್ನು ಕೊನೆಯ ಬಾರಿ ನೋಡಿ, ತಂದಿದ್ದ ಮಣ್ಣನ್ನು ಹಣೆಗೆ ಬಳಿದುಕೊಂಡೆವು. ನಮ್ಮ ರೂಮಿನ ದಪ್ಪನಾದ ಬಾಗಿಲನ್ನು ಭದ್ರವಾಗಿ ಮುಚ್ಚಿ, ಎಲ್ಲವು ಸರಿಯಿದೆಯೇ ಎಂದು ಪರೀಕ್ಷಿಸಿದ ನಂತರ ನಿನ್ನನ್ನು ಮತ್ತು ನಿನ್ನಮ್ಮನನ್ನು ಗಟ್ಟಿಯಾಗಿ ಅಪ್ಪಿದೆ."

"ಬೋರ್ ಆಗುತ್ತೀಯ ಮಗನೆ? ನಿನಗೆ ಈಗ ಹಸಿವಾಗಿರ ಬಹುದು. ಮಿಂಚು ಹೋಗು ಜೀವನ್ ಗೆ ಇಷ್ಟದ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ತೆಗೆದುಕೊಂಡು ಬಾ" ಎಂದ ತಕ್ಷಣ, ಮಿಂಚು ಕುಣಿಯುತ್ತ ಅಡುಗೆ ಕಾರ್ನರ್ ಗೆ ಹೋದ. ಏನೇನೋ ಬಟನ್ ಪ್ರೆಸ್ ಮಾಡಿ ಸ್ವಲ್ಪ ಸಮಯದ ನಂತರ ಎರಡು ದೋಸೆಗಳನ್ನು ತಂದು "ತಿನ್ನೋ ಬೇಗ, ಹೇಳು ನನಗೆ ರುಚಿ ಹೇಗಿದೆ ಎಂದು. ಇನ್ನೂ ದೋಸೆ ಬೇಕಾದರೆ ತಿಳಿಸು ಕ್ವಿಕ್ ಆಗಿ ಮಾಡಿ ತರುವೆ" ಅಂದ.

ಆ ದೋಸೆ ನನಗೆ ಸ್ವರ್ಗದಲ್ಲಿ ಅಮೃತ ಕುಡಿದಷ್ಟು ಸಂತೋಷವಾಯಿತು "ಮಿಂಚು, ಇದು ನನ್ನಮ್ಮ ಅನು ಮಾಡುತ್ತಿದ್ದ ದೋಸೆಯ ಹಾಗೆಯೆ ಇದೇ ಥ್ಯಾಂಕ್ಸ್ ಕಣೋ" ಅಂದಾಗ ಮಿಂಚು, "ಹೇ ಅದು ನಿನ್ನ ಅಮ್ಮ ಮಾಡಿದ ದೋಸೆನೇ ಕಣೋ ಅದನ್ನು ಮತ್ತೆ ಬಿಸಿ ಮಾಡಿದ್ದು ಮಾತ್ರ ನಾನು. ಅದರಲ್ಲಿ ನಿನ್ನ ಅಮ್ಮನ ಪ್ರೀತಿ ತುಂಬಿದೆ ಅದಕ್ಕೆ ನಿನಗೆ ಅಷ್ಟು ಇಷ್ಟವಾಗಿದೆ. ಇದನ್ನು ಕೇಳಿ ಅಳಬೇಡ" ಎಂದು ನಕ್ಕ, ಆದರೆ ಜೀವನ್ ನಗಲಿಲ್ಲ. ದೋಸೆಯನ್ನು ಪೂರ್ತಿ ತಿಂದು, "ಮಿಂಚು ನನಗೆ ಇಷ್ಟು ದೋಸೆ ಸಾಕು, ಇನ್ನು ಸೌತ್ ಇಂಡಿಯನ್ ಫಿಲ್ಟರ್ ಕಾಫಿ ತಾ" ಎಂದು ಆಜ್ಞೆ ಮಾಡಿದ. ಮಿಂಚು ಘಮ ಘಮ ಎನ್ನುತಿದ್ದ ಕಾಫಿ ತಂದು ಕೊಟ್ಟಾಗ, ಜೀವನ್ ನಿಧಾನವಾಗಿ ಆಹ್ವಾದಿಸಿ ಕುಡಿದು ಜೋರಾಗಿ ತೇಗಿದ ನಂತರ ಮಿಂಚುವನ್ನು ಜೋರಾಗಿ ಅಪ್ಪಿದ. 

ಮತ್ತೆ ಅಪ್ಪನ ಮಾತು ಮಾನಿಟರ್ ಮೇಲೆ ಮುಂದುವರಿಯಿತು ...

"ನಮ್ಮ ರೂಮು ಈಗ ಕ್ವಾರಿಯ ಹಳ್ಳದೊಳಗೆ ಇಳಿಯಿತು, ನಾನು ಬಹಾದ್ದೂರ್ ಜೊತೆ ಮಾತನಾಡಿ ನಮ್ಮ ರೂಮನ್ನು ಹೇಳಿದ ರೀತಿ ಮುಚ್ಚಲು ಹೇಳಿದೆ. ಅವನು ನಾನು ಹೇಳಿದ ರೀತಿ ಚಾಚೂ ತಪ್ಪದೆ ಕೆಲಸ ಮಾಡಿ ಮುಗಿಸಿದ. ಪ್ರತಿಯೊಂದನ್ನು ಸರಿಯಿದೆ ಎಂದು ಪರೀಕ್ಷಿಸಿ - ಸಾರ್ ನೀವು ವಾಪಾಸ್ ಬಂದಾಗ ನಿಮಗೆ ನಿಮ್ಮ ಮನೆ ವಾಪಾಸ್ ತಗೊಳ್ಳಿ, ನೀವು ನಾನು ಕೇಳಿದಕ್ಕಿಂತ ಮೂರು ಪಟ್ಟು ಕೊಟ್ಟಿದ್ದೀರಾ ಅಂದ. ಅದಕ್ಕೆ ನಾನು ಇನ್ನು ಮೂರು ದಿನ ಆ ಹಣದಲ್ಲಿ ಎಷ್ಟು ಸುಖ ಅನುಭವಿಸ ಬಹುದೋ ಹೋಗಿ ಅನುಭವಿಸಿ ಎಂದು ತಿಳಿಸಿದಾಗ ಅವನು ನಕ್ಕ. ಮತ್ತೆ ಮೂರು ದಿನ ಯಾವಾಗಲು ಮಾತನಾಡೋಣ ಎಂದು ಹೇಳಿ ವಾಕಿ-ಟಾಕಿ ಬದಿಗಿಟ್ಟೆ."

"12 ಡಿಸೆಂಬರ್ 2040: ನನ್ನ ಊಹೆ ಪ್ರಕಾರ ಇನ್ನೊಂದು ದಿನ ಮಾತ್ರ ಬಾಕಿ ಇತ್ತು . ಆ ದಿನ ನಾವು ಕೋಮಾಗೆ ಹೋಗಲೇ ಬೇಕಿತ್ತು. ನಾವು ಮೂರುಜನ ಬಹುಷಃ ಕೊನೆಯ ಬಾರಿಗೆ ಒಟ್ಟಿಗೆ ಕೂತು ಊಟ ಮಾಡಿದೆವು. ನೀನು ಅವತ್ತು ಬಹಳ ಪ್ರಶ್ನೆಗಳನ್ನು ಕೇಳಿದೆ ಅದಾವುದಕ್ಕೂ ನನ್ನ ಬಳಿ ಉತ್ತರವಿರಲಿಲ್ಲ, ಕಂದ ನಿನಗೆ ನಾಳೆ ಉತ್ತರ ಹೇಳುತ್ತೇನೆ ಎಂದು ಸುಳ್ಳು ಹೇಳಿದೆ ಕ್ಷಮಿಸು. ಈಗ ಬಹುಷಃ ನಿನಗೆ ಎಲ್ಲ ಉತ್ತರಗಳು ಸಿಗುತ್ತಿರಬೇಕು." ಎಂದ ಅಭಿ, ತನ್ನ ಹೆಂಡತಿಯನ್ನು ಕರೆದರು "ಬಾ ಅನು, ಸಾಕು ಕೆಲಸ ನಿಲ್ಲಿಸಿ ನೀನು ಕಂದನ ಜೊತೆ ಮಾತನಾಡು". ಮಾನಿಟರ್ ಮೇಲೆ ಜೀವನ್ ಗೆ ಅವನ ಅಪ್ಪ ಅಮ್ಮ ಒಟ್ಟಾಗಿ ಕಂಡಾಗ ಚೇರಿನಿಂದ ಎದ್ದು ನಮಸ್ಕರಿಸಿ ಮಾನಿಟರ್ ಅಪ್ಪಿ ಕೊಂಡ. ಅಮ್ಮನ ಕಣ್ಣಿನಂಚಿನಿಂದ ಹೊರಬರಲು ಕಣ್ಣೀರು ಕಾತರದಿಂದ ಕಾಯುತ್ತಿದ್ದಂತಿತ್ತು. ಅನು ಮಗನಿಗೆ "ಕಂದ, ನಾವು ಉಳಿಯುತ್ತೇವೋ ಇಲ್ಲವೋ ಗೊತ್ತಿಲ್ಲ ಕಣೋ. ಆದರೆ ನೀನು ಗಾಢನಿದ್ರೆಯಲ್ಲಿ ಇದ್ದಾಗ ನಿನಗೆ ನೀನು ಸ್ಕೂಲಿನಲ್ಲಿ 12ನೆ ಕ್ಲಾಸ್ ತನಕ ಕಲಿಯ ಬೇಕಾದ ಎಲ್ಲ ಸಬ್ಜೆಕ್ಟ್ಸ್ ಅನ್ನು ತಿಳಿಯುವಂತೆ ಆಡಿಯೋ ಮೂಲಕ ನಿನಗೆ ಕಲಿಯುವಂತೆ ನಾನು ವ್ಯವಸ್ಥೆ ಮಾಡಿದ್ದೇನೆ. ಅದರ ಸದುಪಯೋಗ ಮಾಡಿಕೋ. ಅಕಸ್ಮಾತ್ ನೀನು ಎದ್ದಾಗ ನಾವಿಲ್ಲದಿದ್ದರೆ, ನಿನಗೆ ಮುಂದಿನ ಮನುಷ್ಯ ಕುಲಕ್ಕೆ ಯಾವುದೂ ಸರಿ ಅನ್ನಿಸುವುದೋ ಅದನ್ನು ಮಾಡು. ಪಾಪ ಪುಣ್ಯಗಳ ಯೋಚನೆ ಮಾಡದೇ ನಿನ್ನ ನಿರ್ಧಾರ ತೆಗೆದುಕೋ. ನನಗೆ ಮಾತನಾಡಲು ಶಬ್ದಗಳೇ ಹೊಳೆಯುತ್ತಿಲ್ಲ. ಇನ್ನಪ್ಪ ಮಾತನಾಡುತ್ತಾರೆ ನಾನು ಅವರ ಜೊತೆ ಸುಮ್ಮನೆ ಕೂತಿರುತ್ತೇನೆ" ಎಂದ ಅನು, ಅಭಿಯ ಎದೆಯ ಮೇಲೆ ಒರಗಿದಳು. 

ಜೀವನ್ ಕಣ್ಣೊರಿಸಿಕೊಂಡು ಸ್ತಬ್ಧನಾಗಿ ಕೂತ.

ಅಭಿ ತಮ್ಮ ಮಾತನ್ನು ಮುಂದುವರಿಸಿದರು 

" ನನಗೆ ಆಗ ಬಹಳ ಕಾಡಿದ ಒಂದು ಶ್ಲೋಕ ಶ್ರೀ ಆದಿ ಶಂಕರರ ಭಜಗೋವಿಂದಂ ನಲ್ಲಿ ಬರುವ

ಪುನರಪಿ ಜನನಂ ಪುನರಪಿ ಮರಣಂ

ಪುನರಪಿ ಜನನೀಜಠರೇ ಶಯನಮ್|

ಅದರ ಅರ್ಥ ಮತ್ತೆ ಹುಟ್ಟುವುದು, ಮತ್ತೆ ಸಾಯುವುದು, ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಅದೇ ರೀತಿ ನಾವೆಲ್ಲ ಭೂಮಿ ತಾಯಿಯ ಗರ್ಭದಲ್ಲಿ ಸೇರಿ ಮಲಗುವ ಕಾಲ ಬಂದಿದೆ. ಮತ್ತೆ ಹುಟ್ಟುವ ಯೋಚನೆ ಸಧ್ಯಕ್ಕೆ ನನಗಿರಲಿಲ್ಲ. "

"ಇಂಡ್ಯೂಸ್ಡ್ ಕೋಮಾಗೆ ನಿನ್ನನ್ನು ಮತ್ತು ನಿನ್ನಮ್ಮನನ್ನು ಕಳುಹಿಸಿದ ನಂತರ ನಾನು ಕೋಮಾಗೆ ಹೋಗುವುದೆಂದು ತೀರ್ಮಾನಿಸಿದೆ. ಅನುಗೆ ಈ ವಿಷಯ ತಿಳಿಸಿದೆ. ಅದಕ್ಕೆ ಅವಳು, ನೀನು ಕಷ್ಟಪಟ್ಟು ಈ ಕೆಲಸ ಮಾಡಿದ್ದಿಯ ಆದರೆ ಮತ್ತೆ ನಾವು ಬದುಕುಳಿದು ಸೇರಿತ್ತೇವೋ ಇಲ್ಲವೋ ನನಗೆ ಸಂದೇಹವಿದೆ. ನಾವಿಬ್ಬರು ಮದುವೆ ಆದಾಗಿನಿಂದ ನೀನು ನನ್ನನ್ನು ರಾಣಿಯ ಹಾಗೆ ನೋಡಿಕೊಂಡಿದ್ದೀಯ, ಅದಕ್ಕೆ ನಾನು ಚಿರಋಣಿ. ನನ್ನಿಂದ ಏನಾದರು ತಪ್ಪಾಗಿದ್ದಲ್ಲಿ ಕ್ಷಮಿಸು ಅಭಿ ಅಂದಳು. ನನ್ನ ಬಳಿ ಉತ್ತರಿಸಲು ಏನೂ ಪದಗಳಿಲ್ಲದೆ ಅವಳನ್ನು ಅಪ್ಪಿ ಹಿಡಿದೆ. ಇಬ್ಬರು ಒಬ್ಬರನೊಬ್ಬರು ಬೀಳ್ಕೊಡುವ ಸಂದರ್ಭ ಬಂದಾಗ, ಮಲಗಿದ್ದ ನಿನಗೆ ಮುತ್ತಿಟ್ಟವು. ಅನು ನಾನ್ ರೆಡಿ ಅಂದಾಗ, ನಿನ್ನನ್ನು ಮಲಗಿಸಿ, ಅನುಗೆ ಅಳವಡಿಸ ಬೇಕಾದ ಎಲ್ಲ ಟ್ಯೂಬ್ಸ್ ಮತ್ತು ಪ್ರೋಬ್ ಗಳನ್ನು ಫಿಕ್ಸ್ ಮಾಡಿ ಅವಳಿಗೆ ಇಂಡ್ಯೂಸ್ಡ್ ಕೋಮಾಗೆ ಹೋಗಲು ಇಂಜೆಕ್ಷನ್ ಕೊಟ್ಟೆ. ಅವಳು ನಿಧಾನ ವಾಗಿ ನಿದ್ರೆಗೆ ಜಾರುತ್ತ, ಮತ್ತೆ ಸೇರೋಣ ಓಂ ನಮಃ ಶಿವಾಯ ಅಂದು ಕಣ್ಣುಮುಚ್ಚಿದಳು. ಅವಳ ಮೆಡಿಕಲ್ ಮಾನಿಟರ್ ಚೆಕ್ ಮಾಡಿದೆ, ಎಲ್ಲ ಪ್ಯಾರಾಮೀಟರ್ಸ್ ಸರಿಯಾಗಿ ತೋರಿಸಿದ ಮೇಲೆ, ನಿನಗೂ ಎಲ್ಲ ಟ್ಯೂಬ್ಸ್ ಮತ್ತು ಪ್ರೋಬ್ಸ್ ಗಳನ್ನು ಫಿಕ್ಸ್ ಮಾಡಿ, ಇಂಜೆಕ್ಷನ್ ಕೊಟ್ಟೆ. ಆಗಲೇ ನಿದ್ದೆಯಲ್ಲಿದ್ದ ನಿನಗೆ ಇದರ ಅರಿವಾಗಲಿಲ್ಲ. ನಿನ್ನ ಮೆಡಿಕಲ್ ಪ್ಯಾರಾಮೀಟರ್ಸ್ ಕೂಡ ಮಾನಿಟರ್ ನಲ್ಲಿ ತೋರಿಸಲು ಆರಂಭಿಸಿತು. ಒಂದು ಘಂಟೆಯ ನಂತರ ನಾನು ಸಹ ಎಲ್ಲ ಟ್ಯೂಬ್ಸ್ ಮತ್ತು ಪ್ರೋಬ್ಸ್ ಗಳನ್ನು ಫಿಕ್ಸ್ ಮಾಡಿಕೊಂಡು ಇಂಜೆಕ್ಷನ್ ಹತ್ತಿರ ಇಟ್ಟು ಕೊಂಡೆ. "

"ಭೂಮಿಯ ಆಚೆ ನಾನು ಸಿದ್ಧ ಪಡಿಸಿದ್ದ ಸೆನ್ಸರ್ಸ್ ಮತ್ತು ವಿಡಿಯೋ ಕ್ಯಾಮೆರಾ ಗಳಿದ ಅಲ್ಲಿನ ಆಗು ಹೋಗುಗಳು ಟಿವಿ ಮೇಲೆ ಗೋಚರಿಸುತ್ತಿತ್ತು. ಇನ್ನೊಂದು ವಿಷಯ, ನಮ್ಮ ಮೂರು ಜನಕ್ಕೆ ಲಿಕ್ವಿಡ್ ಆಹಾರ, ನೀರು, ಆಕ್ಸಿಜೆನ್ ವ್ಯವಸ್ಥೆ ಆಗುವಂತೆ ಬಾಯಿ ಮತ್ತು ಮೂಗಿಗೆ ಫಿಕ್ಸ್ ಮಾಡಿದ್ದ ಟ್ಯೂಬ್ಸ್ ಗಳಿಂದ ಸರಿಯಾದ ವ್ಯವಸ್ಥೆ ಆಗಿತ್ತು. ಕಿವಿಗೆ ಯಾವುದೇ ಅಪಾಯವಾಗದಂತೆ ಇಯರ್ ಪ್ಲಗ್ಸ್ ಮುಚ್ಚುವಂತೆ ಮಾಡಿದ್ದೆ. ಇನ್ನು ಪ್ರತಿದಿನ ಸಾಕಷ್ಟು ವ್ಯಾಯಾಮ ದೇಹಕ್ಕೆ ಆಗಲು ನಾವು ಮಲಗಿದ್ದಾಗಲೂ ಸುಮಾರು 2 ಕಿಲೋ ಮೀಟರ್ಸ್ ಅಷ್ಟು ವಾಕಿಂಗ್, ಸ್ವಲ್ಪ ಯೋಗ ಮತ್ತು ಕೆಲವು ಬೇಕಾದ ಸ್ಟ್ರೆಚಿಂಗ್ ವ್ಯಾಯಾಮ ನಮಗೆ ಅವುಗಳೇ ಮಾಡಿಸುವ ಉಪಕರಣಗಳನ್ನು ನಮ್ಮ ದೇಹಕ್ಕೆ ಮತ್ತು ಮಂಚಕ್ಕೆ ಫಿಕ್ಸ್ ಮಾಡಲಾಗಿತ್ತು. ಇನ್ನು ಮಲ ಮೂತ್ರಗಳು ಟ್ಯೂಬ್ಸ್ ಮುಖಾಂತರ ನಮ್ಮಿಂದ ಹೊರತೆಗೆದು ಅವನ್ನು ಸಂಸ್ಕರಿಸಿ ಭೂಮಿಯ ಒಳ ಭಾಗಕ್ಕೆ ಕಳಿಸುವ ಹಾಗೆ ನಮ್ಮ ರೂಮನ್ನು ಕಟ್ಟಿದ್ದೆವು."

"ನೀನು ಮತ್ತು ನಿನ್ನಮ್ಮ ಆಗಲೇ ಕೋಮಾಗೆ ಹೋಗಿ ಒಂದು ಘಂಟೆ ಆಯಿತು ನೋಡು" ಎಂದು ನಾವಿಬ್ಬರಿದ್ದ ಬೇರೆ ಬೇರೆ ಮಂಚವನ್ನು ಟಿವಿಯಲ್ಲಿ ತೋರಿಸಿದರು. 

"13 ಡಿಸೆಂಬರ್ 2040: ಆ ದಿನ ಬಂದೇ ಬಿಟ್ಟಿತು, ನಾನು ಭೂಮಿಯಮೇಲೆ ಆಗುತ್ತಿದ್ದ ಎಲ್ಲ ವಿಷಯಗಳನ್ನು ಸೆನ್ಸರ್ ಗಳು, ವಿಡಿಯೋ ಕ್ಯಾಮೆರಾದ ಮೂಲಕ ಹಾಗೂ ಸ್ಯಾಟಲೈಟ್ ಇಮೇಜ್ ಗಳ ಮೂಲಕ ನೋಡುತ್ತಿದ್ದೆ. ಆ ಪ್ರಭಲವಾದ ರೇಡಿಯೋ ತರಂಗಗಳು ಭೂಮಿಯ ವಾಯುಮಂಡಲವನ್ನು ಪ್ರವೇಶಿಸಿದವು. ಬಲವಾದ ಭೂಕಂಪನವಾಯಿತು, ನಮ್ಮ ರೂಮಿಗೆ ಯಾವುದೇ ಅಪಾಯವಾಗಲಿಲ್ಲ. ಸ್ಯಾಟಲೈಟ್ ಇಮೇಜ್ ಗಳು ಭೂಮಿ ಕೆಂಪು ಬಣ್ಣಕ್ಕೆ ತಿರುಗಿ ಎಲ್ಲಡೆ ಬೆಂಕಿ ಹಚ್ಚಿದ ಹಾಗೆ ಗೋಚರಿಸಿತು. ನನಗೆ ಬಹಳ ಭಯವಾಯಿತು, ಹೇಳಿಕೊಳ್ಳಲು ಯಾರು ಇರಲಿಲ್ಲ. ಭೂಮಿಯ ಮೇಲಿನ ಇಂಟರ್ನೆಟ್ ಕನೆಕ್ಷನ್ ಕಟ್ ಆಯಿತು. ಆದರೆ ಸ್ಯಾಟೆಲೈಟ್ ಕನೆಕ್ಷನ್ ಮುಂದುವರಿಯಿತು. ಸ್ಯಾಟೆಲೈಟ್ ಮೂಲಕ ನನಗೆ ತಿಳಿದದ್ದು, ಭೂಮಿಯ ಮೇಲೆ ಅಣುವಿಕಿರಣ ಆಕ್ರಮಿಸಿ ಭೂಮಿಯ ಮೇಲಿನ ಎಲ್ಲ ಜೀವರಾಶಿಗಳು ನಾಶವಾಗಿರುವುದು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಭೂಮಿಯ ಒಳಗಿನ ಅಮೂಲ್ಯ ಖನಿಜ, ತೈಲ, ಯುರೇನಿಯಂ,ಥೋರಿಯಂ, ಪ್ಲುಟೋನಿಯಂ, ಮೊದಲಾದ ಅಣುವಿಕಿರಣ ಪದಾರ್ಥಗಳನ್ನು ಹೊರತೆಗೆದು ಭೂಮಿಯ ಮೇಲೆ ಇಟ್ಟದ್ದೇ ಈ ಎಲ್ಲ ಅನಾಹುತಕ್ಕೆ ಕಾರಣವಾಗಿದ್ದು. ಭೂಮಿಯನ್ನು ಹಾಗೂ ಪ್ರಕೃತಿಯನ್ನು ತನ್ನ ಪಾಡಿಗೆ ಬಿಟ್ಟಿದ್ದಾರೆ ಈಗ ಬಂದ ರೇಡಿಯೋ ತರಂಗಗಳು ಕೇವಲ ಸ್ವಲ್ಪ ಭೂಮಿಯನ್ನು ಕಂಪಿಸಿ ಸಣ್ಣ ಪ್ರಮಾಣದ ಸಾವು ನೋವು ಸಂಭವಿಸುತ್ತಿತ್ತು. ಆದರೆ ದೈವೇಚ್ಛೆ ಇದು ನಡೆಯ ಬೇಕಿತ್ತೇನೋ ನಡೆದಿದೆ."

"ನೀನು ಇನ್ನು ಮುಂದೆ ಏನೂ ಮಾಡಬೇಕೆಂದು ಆಗೋ ಆ ಮಿಂಚು ಹೇಳುತ್ತಾನೆ. ಅವನು ಹೇಳಿದ ಹಾಗೆ ಮಾಡು ಅಥವಾ ನಿನಗೆ ಯಾವುದು ಸರಿ ಎನ್ನಿಸುತ್ತೋ ಹಾಗೆ ಮಾಡು ಮಗನೆ. ಏಕೆಂದರೆ ನಾನು ನನ್ನ ಸಿದ್ಧಾಂತವನ್ನು ಯಾರ ಮೇಲೂ ಇದುವರೆಗೂ ಹೇರಿಲ್ಲ ಮತ್ತು ಮುಂದೆಯೂ ಹೇರುವುದಿಲ್ಲ. "

"ಮುಂಚೆಯೇ ಹೇಳಿದ ಹಾಗೆ ನಿನ್ನ ಮಂಚದ ಪಕ್ಕ ನಾನು ಮತ್ತು ಅನು ಮಲಗಿರುತ್ತೇವೆ. ನಾವು ಅಕಸ್ಮಾತ್ ಸತ್ತರೆ, ನಮ್ಮ ದೇಹಕ್ಕೆ ಅಳವಡಿಸಿರುವ ಸೆನ್ಸರ್ ಗಳು ಗುರುತಿಸಿ ನಮ್ಮ ದೇಹವನ್ನು ಟ್ಯೂಬ್ಸ್ ಮತ್ತು ಪ್ರೋಬ್ಸ್ ಗಳಿಂದ ಬೇರ್ಪಡಿಸಿ, ದೇಹವನ್ನು ಬಾತ್ರೂಮ್ ಸಮೀಪದ ಮತ್ತೊಂದು ಪುಟ್ಟ ಕೋಣೆಗೆ ತೆಗೆದುಕೊಂಡು ಹೋಗಿ, ದೇಹವನ್ನು ಸುಟ್ಟು, ಬೂದಿಯನ್ನು ಭೂಮಿಯ ಒಳಗೆ ಹುಗಿದಿಡುವಂತೆ ಮಾಡಿದ್ದೇನೆ. ನಮ್ಮಿಬ್ಬಿರ ವಯಸ್ಸು 10 ವರ್ಷದ ನಂತರ 70 ದಾಟಿರುತ್ತೆ ಅದಕ್ಕೆ ನಾವು ಬದುಕುವ ಸಾಧ್ಯತೆ ಬಹಳ ಕಡಿಮೆ. ಚಿಂತಿಸದಿರು, ನೀನು ನಮಗೆ ಹಾಗೂ ಪ್ರಕೃತಿಮಾತೆಗೆ ಭರವಸೆಯ ಕೂಸು. ಒಂದು ಜ್ಞಾಪಕ ಇಟ್ಟಿಕೊ ಭಯ ಸಾವನ್ನು ನಿಲ್ಲಿಸುವುದಿಲ್ಲ ಆದರೆ ಬದುಕನ್ನು ನಿಲ್ಲಿಸುತ್ತೆ, ಯಾವುದಕ್ಕೂ ಭಯ ಪಡಬೇಡ - ಧೈರ್ಯ ವಾಗಿ ಮುನ್ನುಗ್ಗು."

"ಇನ್ನು ಮುಂದೆ ಮಿಂಚುನೇ ನಿನಗೆ ತಾಯಿ, ತಂದೆ, ಗೆಳೆಯ ಮತ್ತು ಗೈಡ್." ಮಿಂಚು ಅದನ್ನು ಕೇಳಿ "ನಾನ್ ಹೇಳಲಿಲ್ವ ನಿಂಗೆ" ಅಂದು ಅಪ್ಪಿಕೊಂಡ. 

"ನಾನು ಇನ್ನು ಇಂಜೆಕ್ಷನ್ ತೆಗೆದುಕೊಳ್ಳಲೇ ಬೇಕು. ನಿನಗೆ ಮತ್ತು ಪ್ರಕೃತಿಮಾತೆಗೆ ವಿದಾಯ ಹೇಳುವ ಸಮಯ ಬಂತು. ನಿನಗೆ ಒಳ್ಳೆಯದಾಗಲಿ, ನೀನು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ನನ್ನ ಸಂಪೂರ್ಣ ಸಮ್ಮತಿಯಿದೆ. ಈಗ ರೂಮಿನಲ್ಲಿರುವ ಸೆನ್ಸರ್ ಗಳ ಸಹಾಯದಿಂದ ಎಲ್ಲವು ಆಟೋಮ್ಯಾಟಿಕ್ ಆಗಿ ಕೆಲಸ ಮಾಡುತ್ತೆ. ಮಿಂಚು ಹೇಳಿದ ರೀತಿ ನೀನು ಕೆಲಸ ಮಾಡು. ಥ್ಯಾಂಕ್ಸ್ ಮಿಂಚು ನಿನ್ನ ಸಹಾಯಕ್ಕೆ. ಎಲ್ಲಾರಿಗೂ ಒಳ್ಳೆಯದಾಗಲಿ, ನಮಸ್ಕಾರ" ಅಂದು ಅಭಿ ನಿಧಾನವಾಗಿ ಮಾಯವಾದರು.

ಸ್ವಲ್ಪ ಸಮಯ ಜೀವನ್ ಬಿಕ್ಕಿ ಬಿಕ್ಕಿ ಅತ್ತ. ಮಿಂಚು ಅವನನ್ನು ಅವನ ಪಾಡಿಗೆ ಅವನಿರುವಂತೆ ಬಿಟ್ಟಿದ್ದ. 

ಆಮೇಲೆ ಎದ್ದ ಜೀವನ್ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಂಡ. ಪರವಾಗಿಲ್ಲ ಚೆನ್ನಾಗೆ ಇದ್ದೀನಿ ಎಂದುಕೊಂಡ. 

ಮಿಂಚು ಅವನ ಬಳಿ ಬಂದು "ಜೀವ್, ನೀನು ಈಗ  ಯೋಗ ಮಾಡು ನಾನು ತೋರಿಸಿದ ರೀತಿ ಆಮೇಲೆ ಶವಾಸನ ಮಾಡಿ ಸ್ವಲ್ಪ ಹೊತ್ತು ಮಲಗಿ ಏಳು ಬಾ" ಎಂದು ಜೀವನ್ ಗೆ ಯೋಗ ಮಾಡಿಸಿ ಮಲಗಿಸಿದ.

ಜೀವನ್ ಎದ್ದಾಗ, ಮಿಂಚು ಅವನಿಗೆ ರೂಮಿನ ಎಲ್ಲ ಜಾಗಗಳನ್ನು ತೋರಿಸಿದ. ಅಲ್ಲಿರುವ ಎಲ್ಲ ಮಷೀನ್ ಗಳನ್ನು ಹೇಗೆ ಆಪರೇಟ್ ಮಾಡ ಬೇಕು, ಅವುಗಳು ಯಾವ ಕೆಲಸಕ್ಕೆ ಉಪಯೋಗಿಸ ಬೇಕು ಎಂದು ಹೇಳಿಕೊಟ್ಟ. 

ಜೀವನ್ ರೂಮಿನಲ್ಲಿದ್ದ ಕೆಲವು ಪುಸ್ತಕಗಳು ಮತ್ತು ಕಂಪ್ಯೂಟರ್ ನಲ್ಲಿದ್ದ ಬಹಳ ರಿಸರ್ಚ್ ಪೇಪರ್ ಗಳನ್ನು ನಿಧಾನವಾಗಿ ಓದ ತೊಡಗಿದ. 10 ವರ್ಷ ಅವನು ನಿದ್ದೆಯಲ್ಲೇ ಪ್ಯೂರ್ ಸೈನ್ಸ್ ಗ್ರ್ಯಾಜುಯೆಟ್ ಮಟ್ಟದ ವಿಷಯಗಳ ಅಧ್ಯಯನದ ಉಪಯೋಗ ಅವನಿಗೆ ಗೊತ್ತಾಯಿತು. ಕಂಪ್ಯೂಟರ್ ನಲ್ಲಿ ಅವನ ತಂದೆ ಒಂದು ಫೋಲ್ಡರ್ ಹೆಸರಿಟ್ಟಿದ್ದರು, "Must  watch videos" ಅಂತ. ಆ ವಿಡಿಯೋ ಗಳನ್ನು ಮುಂದಿನ ಮೂರು ದಿನ ನೋಡಿದ. ಪ್ರತಿ ದಿನದ ಬೇರೆ ಕೆಲಸ ಹಾಗೂ ಮಿಂಚು ಜೊತೆ ಆಟವಾಡುವುದನ್ನು ಮರೆಯಲಿಲ್ಲ. ಈ ಎಲ್ಲವನ್ನು ಅಧ್ಯಯನ ಮಾಡಿದ ಮೇಲೆ ಜೀವನ್ ಗೆ ಅನ್ನಿಸಿದ್ದು ಮನುಷ್ಯನೇ ಈ ಜಗತ್ತಿನ ಅವನತಿಗೆ ಕಾರಣ. ಅವನ ಸ್ವಾರ್ಥದಿಂದ ಬೇರೆಯ ಮುಗ್ಧ ಜೀವಿಗಳೆಲ್ಲ ಬಲಿಪಶುಗಳಾದವು ಎಂದು. ಸುಂದರ ಪ್ರಕೃತಿಯನ್ನು ಪೂರ್ತಿ ನಾಶ ಮಾಡಿ ಮನುಷ್ಯ ತಾನು ನಾಶವಾದ. ಅಪ್ಪ ಅವನು ಚಿಕ್ಕವನಾಗಿದ್ದಾಗ ಹೇಳಿದ್ದ ಭಸ್ಮಾಸುರನ ಕಥೆ ಅವನಿಗೆ ಜ್ಞಾಪಕಕ್ಕೆ ಬಂತು. 

ಕುತೂಹಲ ದಿಂದ ಮಾನಿಟರ್ ಬಳಿ ಹೋಗಿ ಭೂಮಿಯ ಮೇಲಿನ ಪರಿಸ್ಥಿತಿ ಹೇಗಿದೆ ಎಂದು ನೋಡಲು ಕುಳಿತ. ಸ್ಯಾಟಲೈಟ್ ಇಮೇಜ್ ಗಳು ಮತ್ತು ಸೆನ್ಸರ್ ಗಳ ಮುಖಾಂತರ ಬಂದ ಎಲ್ಲ ವಿಷಯಗಳನ್ನು ನೋಡಿದ ಮೇಲೆ ತಿಳಿಯಿತು, ಭೂಮಿಯ ಮೇಲೆ ಯಾವುದೇ ಮರ ಗಿಡಗಳು ಸಹ ಇಲ್ಲ, ಯಾವುದೇ ಜೀವಿಗಳು ಇಲ್ಲ ಎಂದು. ಬಹಳ ಬೇಸರ ಮತ್ತು ಕೋಪ ಎರಡು ಜೊತೆ ಜೊತೆ ಯಾಗಿ ಬಂತು. 

ಮಿಂಚು, ಜೀವನ್ ಗೆ ಕೇಳಿದ "ನಿನಗೆ ಆಚೆ ಭೂಮಿಯ ಮೇಲೆ ಹೋಗಲು ಆಸೆ ಇದೆಯಾ? ಈಗ ಅಣುವಿಕಿರಣ ಕಡಿಮೆ ಯಾಗಿದೆ. ಆದರೆ ನೀನು ಸೇಫ್ಟಿ ಉಡುಪು ಧರಿಸಿ ಹೊರಗೆ ಹೋಗ ಬಹುದು. ನಿನಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ನಾನು ತೆಗೆದುಕೊಂಡು ಬರುತ್ತೇನೆ. ನಾವಿಬ್ಬರು ಜೊತೆಗೆ ಕೆಲಸ ಮಾಡಿ ಮತ್ತೆ ಭೂಮಿಯ ಮೇಲೆ ಗಿಡ ಮರ ಬೆಳೆಯುವ ರೀತಿ ಮಾಡಿ ಮತ್ತೆ ಜೀವಿಗಳನ್ನು ಭೂಮಿಗೆ ತರಬಹುದು. ನಿನ್ನ ಅಪ್ಪ ಅದಕ್ಕೆ ಬೇಕಾದ ಎಲ್ಲ ಬೀಜಗಳು, ಜೀವಿಗಳ ಮೊಟ್ಟೆಗಳನ್ನು ಫ್ರೀಜ್ ಮಾಡಿ ಇಟ್ಟಿದ್ದಾರೆ. ನಾವು ಜೀವಿಗಳನ್ನು ಮತ್ತೆ ಹುಟ್ಟಿಸ ಬೇಕಾದರೆ ಈ ಕೆಲಸ ವನ್ನು ಇನ್ನು ಎರಡು ದಿನದಲ್ಲಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಫ್ರೀಜ್ ಮಾಡಿರುವ ಎಲ್ಲ ಸಾಮಗ್ರಿಗಳು ಅವುಗಳ ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಬಾ ಹೋಗಿ ಪ್ರಕೃತಿಯನ್ನು ಸೃಷ್ಟಿಸೋಣ". ಅದನ್ನು ಕೇಳಿ ಜೀವನ್ ಗೆ ಭೂಮಿಯ ಮೇಲೆ ಹೋಗಲು ಆಸೆ ಆಯಿತು.

ಜೀವನ್ ಸೇಫ್ಟಿ ಉಡುಪು ಧರಿಸಿ ಹೋಗಲು ರೆಡಿ ಆದ. ಮಿಂಚು ಭೂಮಿಯ ಮೇಲೆ ತೆಗೆದು ಕೊಂಡು ಹೋಗಲು ಒಂದು ದೊಡ್ಡ ಬಾಕ್ಸ್ ಅನ್ನು ರೆಡಿ ಮಾಡಿದ್ದ. 

ಭೂಮಿಯ ಮೇಲೆ ಹೋಗಲು ಒಂದು ಲಿಫ್ಟ್ ರೀತಿಯ ಕ್ಯಾಪ್ಸುಲ್ ಇತ್ತು ರೂಮಿನ ಕೊನೆಯಲ್ಲಿ. ಮಿಂಚು ಮತ್ತು ಜೀವನ್ ಆ ಲಿಫ್ಟ್ ಒಳ ಹೊಕ್ಕರು. ಭೂಮಿಯ ಮೇಲೆ ತೆಗೆದುಕೊಂಡು ಹೋಗುವ ಬಾಕ್ಸ್ ಲಿಫ್ಟ್ ಕೆಳಗೆ ಫಿಕ್ಸ್ ಮಾಡಿದರು. ಮಿಂಚು ಲಿಫ್ಟ್ ನ ಮಾನಿಟರ್ ಮೇಲೆ ಒಂದು ಕೋಡ್ ಹಾಕಿದಾಗ ನಿಧಾನವಾಗಿ ಲಿಫ್ಟ್ ಮೇಲೆ ಹೋಗಲು ಶುರುವಾಯಿತು. ಲಿಫ್ಟ್ ನಿಂತ ಶಬ್ದವಾಯಿತು, ನಂತರ ಭೂಮಿಯನ್ನು ಕೊರೆಯುವ ಶಬ್ದ ಶುರುವಾಗಿ ನಿಂತು, ವಾಕ್ಯೂಮ್ ಕ್ಲೀನರ್ ಶಬ್ದ ಶುರುವಾಯಿತು. ಲಿಫ್ಟ್ ಮಾನಿಟರ್ ಮೇಲೆ ನಾವು ಭೂಮಿಗೆ ಬಂದಿರುವುದು ತೋರಿಸಿತು. ಲಿಫ್ಟ್ ಮೇಲಿನ ಭಾಗದ ಬಾಗಿಲು ನಿಧಾನವಾಗಿ ಆಟೋಮ್ಯಾಟಿಕ್ ಆಗಿ ತೆಗೆದುಕೊಂಡಿತು. ಲಿಫ್ಟ್ ನಲ್ಲಿದ್ದ ಏಣಿಯ ಮೂಲಕ ಜೀವನ್ ಮತ್ತು ಮಿಂಚು ಹೊರಬಂದು ಭೂಮಿಯ ಮೇಲೆ ಕಾಲಿಟ್ಟರು. ಸೂರ್ಯ ನೆತ್ತಿಯಮೇಲೆ ಇದ್ದ. ಮೊದಲ ಬಾರಿ ಜೀವನ್ ಅಷ್ಟು ಬೆಳಕನ್ನು ನೋಡಿದ್ದು. ಕಣ್ಣಿಗೆ ಧರಿಸಿದ್ದ ಕಪ್ಪು ಕನ್ನಡಕ ಉಪಯೋಗಕ್ಕೆ ಬಂತು. ಸುತ್ತಲೂ ನೋಡಿದ ಜೀವನ್, ಭೂಮಿಯ ಮೇಲೆ ಯಾವ ಜೀವಿಯು ಇರಲಿಲ್ಲ. ಅಪ್ಪ ಮಾನಿಟರ್ ನಲ್ಲಿ ಮೊದಲು ಕ್ವಾರಿ ಇದ್ದದ್ದು, ಭೂಮಿಯ ಮೇಲಿನ ಪರಿಸರವನ್ನು ತೋರಿಸಿದ್ದರು. ಅದು ಈಗ ಬರೀ ಕನಸು ಮಾತ್ರ. ಅವನಿಗೆ ಭೂಮಿಯ ಮೇಲೆ ಯಾಕಾದರೂ ಬಂದೆ ಅನ್ನಿಸತೊಡಗಿತ್ತು. ಅಪ್ಪ ಕೊಟ್ಟಿರುವ ಸಲಕರಣೆಗಳಿಂದ ಖಂಡಿತ ಜೀವಿಗಳನ್ನು ಮರು ಸೃಷ್ಟಿಸಬಹುದು. ಆದರೆ ಮನುಷ್ಯ ಮತ್ತೆ ಸೃಷ್ಟಿಯಾದರೆ ಈ ಪ್ರಕೃತಿಯನ್ನು ಮತ್ತೆ ನಾಶ ಮಾಡುವುದಿಲ್ಲ ಎಂದು ಯಾರು ಗ್ಯಾರಂಟಿ ಕೊಡ್ತಾರೆ? 

ಜೀವನ್ ಜೋರಾಗಿ ಕೂಗತೊಡಗಿದ, ಮಿಂಚು ಗಾಭರಿ ಪಟ್ಟು ದೂರ ಸರಿದ.

" ಹೇ ಮಾನವ ನೀನೆಷ್ಟು ಸ್ವಾರ್ಥಿ ಏನನ್ನೂ ಉಳಿಸಲಿಲ್ಲವಲ್ಲೋ. ಸ್ವರ್ಗದಂತೆ ಇದ್ದ ನಮ್ಮ ಭೂಮಿಯನ್ನು ಸಂಪೂರ್ಣ ನಾಶ ಮಾಡಿದ ನೀನು ಉಳಿದಿಲ್ಲವಲ್ಲೋ? ನಿನ್ನಷ್ಟು ಕ್ರೂರಿ ಯಾರೂ ಇಲ್ಲ. ನಿನ್ನ ರಾಜಕೀಯ, ಆಸ್ತಿ ಕಬಳಿಕೆ, ಸ್ವಾರ್ಥ, ಜಾತಿಗಳ ಗುದ್ದಾಟ, ಹೊಡೆದಾಟ ಇವುಗಳಿಂದ ನಿನಗೆ ಏನು ಸಿಕ್ಕಿತು? ಸಿಕ್ಕಿದ್ದು ನಿನಗೆ ಸಾವು ಮಾತ್ರ! ನಾನು ಮತ್ತೆ ಜೀವಿಗಳನ್ನು ಸೃಷ್ಟಿಸಿ ಭೂಮಿಗೆ ಮತ್ತೆ ಮನುಷ್ಯನನ್ನು ತಂದು ಪ್ರಕೃತಿ ಮಾತೆಗೆ ಅಪಮಾನ ಮಾಡಲ್ಲ." ಅವನು ತಂದಿದ್ದ ಜೀವಿಗಳ ಬಾಕ್ಸ್ ನಿಂದ "Bring  human  back  to  Earth "  ಎನ್ನುವ ಬಾಕ್ಸ್ ಅನ್ನು ತೆಗೆದು ನಾಶ ಮಾಡಿ ಪುಡಿ ಪುಡಿ ಮಾಡಿದ. ಮತ್ತಿತರ ಬಾಕ್ಸ್ ಗಳನ್ನು ತೆಗೆದು ಅದರಲ್ಲಿ ಬರೆದಿದ್ದ ಸೂಚನೆ ಪ್ರಕಾರ ಅವುಗಳನ್ನು ಭೂಮಿಯ ಮೇಲೆ ಇಟ್ಟ. 

ಮಿಂಚು ಕೇಳಿದ "ಜೀವ್, ನೀನು ಭೂಮಿಯ ಮೇಲೆ ಈಗ ಹೇಗೆ ಇರುತ್ತೀಯ? ಮನುಷ್ಯ ಬದುಕಲು ಬೇಕಾದ ಎಲ್ಲ ಸಾಮಗ್ರಿಯನ್ನು ನಾಶ ಮಾಡಿದ್ದಿಯ?"

ಅದಕ್ಕೆ ಜೀವನ್ ಹೇಳಿದ "ನನಗೆ ಅಪ್ಪ ಹೇಳಿದ ಮಾತು ಜ್ಞಾಪಕಕ್ಕೆ ಬಂತು - 'ನಿನಗೆ ಮುಂದಿನ ಮನುಷ್ಯ ಕುಲಕ್ಕೆ ಯಾವುದೂ ಸರಿ ಅನ್ನಿಸುವುದೋ ಅದನ್ನು ಮಾಡು. ಪಾಪ ಪುಣ್ಯಗಳ ಯೋಚನೆ ಮಾಡದೇ ನಿನ್ನ ನಿರ್ಧಾರ ತೆಗೆದುಕೋ.' ನಾನು ಆ ನಿರ್ಧಾರ ತಗೊಂಡಾಯ್ತು - ನಾನು ಸಹ ಇತರ ಮಾನವ ರೀತಿ ನಾಶವಾಗಬೇಕು. ನಾನು ಭೂಮಿಯ ಮೇಲೆ ನನ್ನ ಪೂರ್ವಜರು ಮಾಡಿರುವ ಕೃತ್ಯಗಳಿಗೆ ಜವಾಬ್ದಾರನಾಗಲು ನಾನು ತಯಾರಿಲ್ಲ. ನಾನು ಅನಾಮಿಕೆ ರೂಮಿಗೆ ಹಿಂದಿರುಗುತ್ತೇನೆ. ಮತ್ತೆ ಇಂಡ್ಯೂಸ್ಡ್ ಕೋಮ ಗೆ ಹೋಗಿ, ನನ್ನ ಅಪ್ಪ ಮತ್ತು ಅಮ್ಮನ ರೀತಿ ಸಾವನ್ನು ಬಯಸುತ್ತೇನೆ." ಎಂದಾಗ ಚಿಂಟು "ಮತ್ತೆ ಯೋಚಿಸು ಕಂದ" ಎಂದು ಅಭಿ ಹೇಳಿದ ರೀತಿ ಹೇಳಿದ. 

"ಯೋಚಿಸುವುದಕ್ಕೆ ಏನೂ ಉಳಿದಿಲ್ಲ. ನಾನು ತೆಗೆದುಕೊಂಡಿರುವ ನಿರ್ಧಾರ ನನ್ನ ಪ್ರಕಾರ ಸರಿ" ಎಂದು ಜೀವನ್ ಖಡಾಖಂಡಿತವಾಗಿ ಹೇಳಿದ. 

"ಬಾ, ಆದಿ ಶಂಕರರು ಹೇಳಿದ ರೀತಿ - ಪುನರಪಿ ಜನನಿ ಜಠರೇ ಶಯನಂ ಅಂದಂತೆ ಮತ್ತೆ ಭೂಮಿಯ ಜಠರಕ್ಕೆ ಹೋಗಿ ಅನಾಮಿಕೆ ರೂಮಿನಲ್ಲಿ ಮಲಗೋಣ ಎಂದ. ಪ್ರಕೃತಿ ಮತ್ತೆ ತನ್ನ ನಿಯಮದ ಪ್ರಕಾರ ಜೀವಿಗಳನ್ನು ಸೃಷ್ಟಿಸಲಿ. ಬಹುಷಃ ಪ್ರಕೃತಿ ಮಾತೆ ಮತ್ತೊಂದು ಬಾರಿ ಮನುಷ್ಯನಂಥ ಕ್ರೂರ ಪ್ರಾಣಿಯನ್ನು ಹುಟ್ಟಿಸುವುದಿಲ್ಲ. ಬಾ, ಭೂಮಿ ತಾಯಿಯ ಗರ್ಭದಲ್ಲಿ ಸೇರಿ ಮಲಗುವ ಕಾಲ ಬಂದಿದೆ. ಮತ್ತೆ ಹುಟ್ಟುವ ಯೋಚನೆ ಸಧ್ಯಕ್ಕೆ ನನಗಿರಲಿಲ್ಲ" ಎಂದು ಕೈ ಹಿಡಿದು ಮಿಂಚುವನ್ನು ಲಿಫ್ಟ್ ಗೆ ಎಳೆದುಕೊಂಡು ಹೋದ. 

ಲಿಫ್ಟ್ ನಲ್ಲಿ ಜೀವನ್ ಕೇಳತೊಡಗಿದ ಶ್ಲೋಕ:

"ಪುನರಪಿ ಜನನಂ ಪುನರಪಿ ಮರಣಂ

ಪುನರಪಿ ಜನನೀ ಜಠರೇ ಶಯನಮ್|"


ನಮ್ಮ ದೇವರುಗಳು ಮತ್ತು ನಮ್ಮ ಆಚರಣೆಗಳ ಒಳಅರ್ಥ

- ವಾಸುದೇವ ಕೆ 

ಹಿಂದೂ ಎನ್ನುವುದು ಕೇವಲ ಧರ್ಮವಲ್ಲ  ಆದರೆ ನಮ್ಮ ಬದುಕಿನ ಆಚರಣೆ (way of life). ಅದಕ್ಕೆ ಪೂರಕವಾಗಿ ಈ ಲೇಖನವನ್ನು ಬರೆದಿದ್ದೇನೆ.


ಹಿಂದೂ ದೇವರುಗಳು ಮತ್ತು ನಮ್ಮ ಪುರಾಣದ ಕಥೆಗಳು ಪ್ರಮುಖವಾಗಿಪ್ರಕೃತಿಯೊಳಗೆ ನಾವುಗಳು ಹೇಗೆ ಒಂದಾಗಬೇಕು ಮತ್ತು ಪ್ರಕೃತಿಯನ್ನು ಉಳಿಸುವುದು ಹಾಗು ಪ್ರಕೃತಿ ಆಧಾರನೆಯೇ ಮಾನವ  ಜನ್ಮದ ಮುಖ್ಯ ಉದ್ದೇಶ ಎಂದು ತಿಳಿಸುತ್ತವೆ.

ಗಿಡಮರಪ್ರಾಣಿಪಕ್ಷಿ ಮತ್ತು ಪ್ರಕೃತಿ ಮಾತೆಯ ಪ್ರತಿಯೊಂದು ಪದಾರ್ಥವು ನಮ್ಮ ದೇವಾರಾಧನೆಯಪ್ರಮುಖ ಅಂಗಗಳಾಗಿವೆ. ಅದಕ್ಕೆ ಹೇಳುವುದು, ಹಿಂದೂ ಎನ್ನುವುದು ಧರ್ಮ ಮಾತ್ರವಲ್ಲ, ಅದು ಒಂದು ಪಾರಂಪರಿಕವಾಗಿ ಬಂದ ಬದುಕಿನ ಆಚರಣೆ ಎಂದು.

ತುಳಸಿಗಿಡ ನಮ್ಮ ಮನೆಯಂಗಳದ ಪ್ರಮುಖ ಜಾಗವನ್ನು ಅಲಂಕರಿಸುತ್ತೆ ಮತ್ತು ನಾವುಗಳು ಪ್ರತಿದಿನ  ಗಿಡವನ್ನು ಪೂಜಿಸುತ್ತೇವೆ. ಅದರ ಔಷಧೀಯ ಗುಣಗಳು ಎಲ್ಲರಿಗೂ ಗೊತ್ತಿರುವ ವಿಷಯವೇ.

ಬಹಳ ಹಬ್ಬಗಳಿಗೆ ಮಾವಿನ ಸೊಪ್ಪು ಬೇಕೇಬೇಕು ಮನೆಯ ಮುಖ್ಯದ್ವಾರದ ತೋರಣಕ್ಕೆ, ದೇವರಮನೆಗೆ, ಮಂಟಪಕ್ಕೆ ಬೇಕೇಬೇಕು ಬಾಳೆದಿಂಡಿನ ಅಲಂಕಾರಕನಿಷ್ಠ  ಹಣ್ಣುಗಳ ನೈವೇದ್ಯ   ಅತೀ ಅವಶ್ಯಕ.

 ಪದ್ಧತಿ ಪ್ರತಿ ಗಿಡ ಮತ್ತು ಮರ ಬೆಳೆಯುವ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ನಮ್ಮ  ಪೂರ್ವಜರು ಆಲೋಚಿಸಿಯಾವ ಹಬ್ಬಕ್ಕೆ ಯಾವ ಗಿಡ ಮರದ ಅವಶ್ಯಕತೆ ಇರಬೇಕೆಂದು ತೀರ್ಮಾನಿಸಿರಬೇಕು. ಎಂತಹ ದೂರಾಲೋಚನೆ? ಪ್ರತಿ ಗಿಡ-ಮರದ ಉಳಿವಿಗೆ ತೆಗೆದುಕೊಂಡ ನಿಲುವಿರಬೇಕು.

ಪ್ರತಿ ಹಿಂದೂ ಹಬ್ಬಕ್ಕೆ ಒಂದು ಗಿಡ ಅಥವಾ ಮರದ ಅವಶ್ಯಕತೆ ಇದ್ದೆ ಇರುತ್ತೆ  ಪದಾರ್ಥ  ಹಬ್ಬದ ತಿಂಗಳಿನಲ್ಲಿ ಪ್ರಕೃತಿಯಲ್ಲಿ ಸಿಕ್ಕೇ ಸಿಗುತ್ತದೆ ಮತ್ತು  ಪದಾರ್ಥ ಮನುಷ್ಯನಿಗೆ ಆರೋಗ್ಯದ   ದೃಷ್ಟಿಯಿಂದ  ಋತುವಿನಲ್ಲಿ ಅತಿಅವಶ್ಯಕವಾಗಿರುತ್ತದೆ.

ಪ್ರಮುಖ ಹಬ್ಬಗಳಲ್ಲಿ ಕೆಲವು ಬೇಕೇಬೇಕಾದ ಪದಾರ್ಥ ಮತ್ತು ತಿಂಡಿಗಳು :

  • ಯುಗಾದಿಯ ಬೇವು-ಬೆಲ್ಲ ಮತ್ತು ಒಬ್ಬಟ್ಟು ;
  • ಸಂಕ್ರಾಂತಿಯ ಎಳ್ಳು-ಬೆಲ್ಲ, ಕಬ್ಬು, ಗೆಣಸು, ಅವರೆಕಾಯಿ, ಕಡ್ಲೇಕಾಯಿ ಮತ್ತು ಪೊಂಗಲ್ ;
  • ಶಿವರಾತ್ರಿಯ ಉಪವಾಸಕ್ಕೆ ಅನುಗುಣವಾದ ಫಲಹಾರಗಳು ;
  • ರಾಮನವಮಿಯ ಪಾನಕ ಮತ್ತು ಹೆಸರುಬೇಳೆ ;  
  • ಗೌರಿ - ಗಣೇಶ ಹಬ್ಬದ ಹೋಳಿಗೆ ಮತ್ತು ಕಡುಬು ;
  • ಕೃಷ್ಣ ಜನ್ಮಾಷ್ಟಮಿಯ ಬಗೆಬಗೆಯ ತಿಂಡಿಗಳು ;
  • ದಸರಾ ಹಬ್ಬದ ಪ್ರತಿದಿನದ ವಿಶೇಷ ತಿಂಡಿಗಳು ;
  • ದೀಪಾವಳಿಯ ಕಜ್ಜಾಯ.
ಮೊದಲು ಎಲ್ಲರೂ ಸೇರಿ ಒಟ್ಟು ಕುಟುಂಬಗಳಿದ್ದ ಮನೆಗಳಲ್ಲಿ ಇಂತಹ ತಿಂಡಿಗಳನ್ನು ಹಬ್ಬದ ದಿನ ಮಾತ್ರ ತಯಾರಿಸುತ್ತಿದ್ದರುಆದರೆ ಈಗಿನ ಬಿಟ್ಟು ಕುಟುಂಬಗಳಿರುವ (nuclear familyಹಾಗು  ಸಮಯದ ಅಭಾವದ ಕಾರಣದಿಂದ ಹೊಸ ಹೋಟೆಲ್ಗಳು, ಅಂಗಡಿಗಳು ಹುಟ್ಟಿಕೊಂಡಿವೆ  ತಿಂಡಿಗಳನ್ನು ಹಬ್ಬ ಇರಲಿ ಅಥವಾ  ಇಲ್ಲದಿರಲಿ ನಮಗೆ ಬೇಕಾದಾಗ ಆಸೆಯಾದ ತಿಂಡಿ ತಿನ್ನಿಸೋಕೆ. ಸುಮಾರು ೨೫ ವರುಷಗಳ ಹಿಂದೆ ಒಬ್ಬಟ್ಟು / ಹೋಳಿಗೆ ತಿನ್ನುವುದಕ್ಕೆ ಹಬ್ಬಕ್ಕೇ ಕಾಯಬೇಕಿತ್ತು. ಆದರೆ ಈಗ ನೆನೆಸಿಕೊಂಡಾಗ ಓವರ್ ದಿ ಕೌಂಟರ್ ಯಾವ ತಿಂಡಿ ಬೇಕಾದರೂ ಸಿಗುತ್ತದೆ - ಆದರೆಆ ತಿಂಡಿಗಳಲ್ಲಿ ಅಜ್ಜಿ - ಅಮ್ಮನ ಪ್ರೀತಿ ಓವರ್ ದಿ ಕೌಂಟರ್ ಸಿಗಲ್ಲ!

ಅಂತಹ ಅಂಗಡಿಗಳ ಹೆಸರುಗಳೇ ಆಕರ್ಷಣೀಯ : ಮನೆ ಹೋಳಿಗೆ, ಹೋಳಿಗೆ ಮನೆ, ಕಜ್ಜಾಯದ ಮನೆ, ಕುರುಕು ತಿಂಡಿ, ಹಳ್ಳಿ ಮನೆ, ನೈವೇದ್ಯಮ್, ತಿಂಡಿಮನೆ, ಇಂತಹ ಅಂಗಡಿಗಳು ಪ್ರತಿ ಗಲ್ಲಿ-ಗಲ್ಲಿಗಳಲ್ಲಿ ಬೆಳೆಯುತ್ತಲೇ ಇವೆ.

ಇನ್ನು ಪ್ರಾಣಿಗಳ ಪ್ರಾಮುಖ್ಯತೆ ನಮ್ಮ ದೇವಾರಾಧನೆಯಲ್ಲಿ ನೋಡುವುದಾದರೆ, ಹಸುಗಳ ಹಾಲು ಕುಡಿದು ಜೀವಿಸುತ್ತಿರುವ ನಾವು ಗೋಮಾತೆಗೆ ತಾಯಿಯ ಸ್ಥಾನ ಕೊಟ್ಟಿದ್ದೇವೆ. ಗೋಪೂಜೆ, ಗೋದಾನ ಅತಿ ಶ್ರೇಷ್ಠ ನಮಗೆ.

ಪ್ರತಿ ಪ್ರಾಣಿಯು ದೇವರ ಪ್ರತಿರೂಪವಾಗಿವೆ. ಆನೆಯ ಮುಖದ ಗಜಾನನ ನಮ್ಮ ಪ್ರಥಮ ಪೂಜ್ಯ ದೇವರು. ನಾವು ಆನೆ ನೋಡಿದರೆ, ನಮಗೆ ಮೊದಲೆನಿಸುವುದು ನಮಸ್ಕಾರ ಮಾಡಬೇಕೆಂದು.

ದುಷ್ಠ ವಿನಾಶಕ (Destroyer)

ಶಿವನ ಸಂಸಾರಕ್ಕೆ ಬರುವುದಾದರೆ,  ಶಿವ ಹಾವನ್ನು ಕೊರಳಿಗೆ ಸುತ್ತಿಕೊಂಡು, ನಂದಿ - ಬಸವಣ್ಣನನ್ನು ತನ್ನ ವಾಹನ ಮಾಡಿಕೊಂಡರೆ, ಪಾರ್ವತಿ - ಹುಲಿ-ಸಿಂಹಗಳೇ ವಾಹನ, ಗಣೇಶನಿಗೆ ಹಾವು ಸೊಂಟಪಟ್ಟಿಯಾದರೆಇಲಿ ವಾಹನಸುಬ್ರಮಣ್ಯನನ್ನು ಹಾವಿನ ರೂಪದಲ್ಲಿ   ಆರಾಧಿಸಿದರೆಆತನ ವಾಹನ ನವಿಲು. ತಂದೆ ಮಕ್ಕಳಿಗೆ ಹಾವು ಅವಿಭಾಜ್ಯ ಅಂಗಗಳಾಗಿದೆ. ಆದರೆ ಆಶ್ಚರ್ಯವೆಂದರೆ ಶತ್ರು ಪ್ರಾಣಿಗಳಾದ ಹುಲಿ/ಸಿಂಹ - ನಂದಿ ; ಹಾವು - ಇಲಿ; ಹಾವು - ನವಿಲು ಶಿವನ ಕುಟುಂಬದಲ್ಲಿ ಜೊತೆಯಾಗಿವೆ.  

ಸಂರಕ್ಷಕ (Preserver)    

ವಿಷ್ಣು ಗರುಡ ವಾಹನ, ಆದರೆ ಅವನಿಗೆ ಸರ್ಪರಾಜನೇ ಮಲಗಲು ಹಾಸಿಗೆ. ಗರುಡ ಸರ್ಪ ವೈರಿಗಳಲ್ಲವೇ? ಲಕ್ಷಿಗೆ ಗೂಬೆಯೇ ವಾಹನ. ಗೂಬೆ - ಸರ್ಪ ವೈರಿಗಲ್ಲವೇ?

ಇದು ನಮಗೆ ತಿಳಿಸುವ ಅತ್ಯಮೂಲ್ಯ ಅಂಶವೆಂದರೆ : ನಮ್ಮ ಕುಟುಂಬಗಳಲ್ಲಿ ಪ್ರತಿಯೊಬ್ಬರ  ಯೋಚನಾಕ್ರಮ  ತದ್ವಿರುದ್ದವಾಗಿದ್ದರು ಸಹ ಒಂದು ಸೂರಿನಡಿ ಅನುಸರಿಸಿಕೊಂಡು ಜೀವಿಸಬೇಕು  ಎಂದು.

ಸೃಷ್ಟಿಕರ್ತ  (Creator)    

ಬ್ರಹ್ಮನ ವಾಹನ ಹಂಸ ಮತ್ತು ಜ್ಞಾನ ಕೊಡುವ ಸರಸ್ವತಿಯ ವಾಹನ ಹಂಸ ಮತ್ತು ನವಿಲು ಆಗಿದೆ.  ಎರಡು ವೈರಿಗಳಲ್ಲ! ತ್ರಿಮೂರ್ತಿ ದಂಪತಿ ಮತ್ತು ಕುಟುಂಬದಲ್ಲಿ ಕೇವಲ ಬ್ರಹ್ಮ ಮತ್ತು  ಸರಸ್ವತಿಯವರ ವಾಹನಗಳು ವೈರಿಗಳಲ್ಲ.

ಇದರ ಮೂಲಕ ನಾವು ತಿಳಿಯಬಹುದುಏನನ್ನಾದರೂ ಸೃಷ್ಟಿಸಲು(creation) ಅಥವಾ ಜ್ಞಾನ  ಸಂಪಾದನೆಗೆ (acquiring knowledge)  ವೈರತ್ವ ಇರಬಾರದೆಂದು.  ಏಕೆಂದರೆ ನಮ್ಮ ವೈರಿಗಳಲ್ಲೂ ನಾವು ಕಲಿಯಬೇಕಾದ ಒಳ್ಳೆಯ ವಿಷಯಗಳು ಬಹಳ ಇರುತ್ತವೆ.  ಆದರೆ ದುಷ್ಟ ಸಂಹಾರ (destroy) ಮತ್ತು ಸಂರಕ್ಷಣೆಗೆ(preserve) ವೈರತ್ವದ ಅವಶ್ಯಕತೆ ಇದೆ ಎಂದು.

ಇನ್ನು ನದಿಗಳು ನಮಗೆ ದೇವರ ಸಮಾನ. ಕುಂಭಮೇಳಗಳಲ್ಲಿ ಜಗತ್ತಿನ ಅತೀ ದೊಡ್ಡ ಮನುಷ್ಯರ ಸಂಗಮ ಇದಕ್ಕೆ ನಿದರ್ಶನ. 

ಪ್ರತಿ ಪೂಜೆ ಸಮಾರಂಭಗಳಲ್ಲಿ ಮಂತ್ರ ಪಠನಗಳಲ್ಲಿ ನದಿಗಳಿಗೆ ಪ್ರಾಮುಖ್ಯತೆ ಕೊಡುತ್ತೇವೆ :ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ; ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

ಇನ್ನು ನಮ್ಮ ಪುರಾಣದ ಕಥೆಗಳ ಬಗ್ಗೆ ಚರ್ಚಿಸುವುದಾದರೆಪ್ರತಿ ಕಥೆಯೂ ನಮ್ಮ ಬದುಕಿನ  ಸಂದರ್ಭಕ್ಕೆ ತಕ್ಕ ದಿಕ್ಕು ತೋರಿಸಲು ಸೃಷ್ಟಿಸಲಾಗಿದೆ.

ಶ್ರೀ ರಾಮ ಮಾತು ಕಡಿಮೆ:              ಆದರೆ ಕಾರ್ಯದಿಂದ ಮತ್ತು ದುಷ್ಟಸಂಹಾರದಿಂದ ಆದರ್ಶಪುರುಷನಾದ.

ಶ್ರೀ ಕೃಷ್ಣ ಮಾತಿನಿಂದ ಮಹಾತ್ಮನಾದ:          ಅವನು ಬೋಧಿಸಿದ ಭಗವದ್ಗೀತೆಯೇ ಒಂದು ಉದಾಹರಣೆ.

ಮಹಾಭಾರತದ ಪಂಚಪಾಂಡವರು ನಮ್ಮ ಪಂಚೇಂದ್ರಿಯಗಳ ರೀತಿ. ಅವರಿಗೆ ಸರಿಯಾದ ಮಾರ್ಗದರ್ಶನ ಕೊಟ್ಟು ಕಾಪಾಡಿದ್ದು ಶ್ರೀ ಕೃಷ್ಣ.ಇದು ನಮ್ಮ ಬುದ್ದಿಶಕ್ತಿಯು  ಪಂಚೇಂದ್ರಿಯಗಳನ್ನು ನಿಗ್ರಹಿಸಬೇಕು ಎಂದು ಸಾರುತ್ತದೆ.                              ಕೌರವರು ನೂರು ಜನ, ನಮಗೆ ಬರುವ ನೂರಾರು ಅತಿಆಸೆಯ ಪ್ರತಿಬಿಂಬವಾಗಿದೆ. ಅವುಗಳನ್ನು ಪಂಚೇಂದ್ರಿಯಗಳ ಸರಿಯಾದ ಬಳಕೆಯಿಂದ ಕಡಿವಾಣ ಹಾಕಬೆಂದು ತಿಳಿಸಿಕೊಡುತ್ತದೆ.

 ಎಲ್ಲಾ ವಿಷಯಗಳು ಹಿಂದೂ ಎನ್ನುವುದು ಕೇವಲ ಧರ್ಮವಲ್ಲ  ಆದರೆ ನಮ್ಮ ಬದುಕಿನ ಆಚರಣೆ (way of life) ಎಂದು ಸಾರುತ್ತವೆ

ನಮ್ಮ ಪುರಾಣದ ಕಥೆಗಳು ಮತ್ತು ನಮ್ಮ ಆಚರಣೆಗಳ ಒಳ ಅರ್ಥ ಹುಡುಕುತ್ತ ಹೋದರೆ ಅದಕ್ಕೆ ಕೊನೆಯಿಲ್ಲ.

ಆದರೆ ಆಧುನೀಕತೆಯ ಪ್ರಭಾವದಿಂದ ಮತ್ತು ಅತೀ ಜನಸಂಖ್ಯೆಯಿಂದ   ಪೂಜನೀಯವಾದ ನಮ್ಮ ಪ್ರಕೃತಿ ನಾಶವಾಗುತ್ತಿದೆ, ಕೆರೆ, ನದಿ, ಸಮುದ್ರಗಳು ಕಲುಷಿತವಾಗಿವೆ. ಇದರಿಂದ ಮನುಷ್ಯನ ಅವನತಿ ಸಮೀಪುಸುತ್ತಿದೆ ಅನ್ನಿಸುತ್ತೆ.

ಬಸವನಗುಡಿಯ ಎಂದೂ ಮರೆಯಲಾಗದ ಮೂರು ವೈದ್ಯೋತ್ತಮರು

- ವಾಸುದೇವ ಕೆ  1970 ರಿಂದ 2010ರವರೆಗೆ ನನ್ನ ಆರೋಗ್ಯವನ್ನು ಕಾಪಾಡಿದ ಕೆಲವು ಬಸವನಗುಡಿಯ ವೈದ್ಯೋತ್ತಮರ ಸ್ಮರಣೆಗೆ ಈ ನನ್ನ ಪುಟ್ಟ ಕಾಣಿಕೆ. ಈ ಡಾಕ್ಟರ್ ಗಳ ಕೈಗುಣದಿಂದ...