- ವಾಸುದೇವ ಕೆ
"ವೈದ್ಯೋ ನಾರಾಯಣೋ ಹರಿ" ಅಂದರೆ, ವೈದ್ಯನು ಸಾಕ್ಷಾತ್ ನಾರಾಯಣವೆಂದೂ, ರಕ್ಷಕನೆಂದೂ, ದೇವರ ಸಮಾನನೆಂದೂ ಅರ್ಥ. ಈ ಮಾತನ್ನು ಸತ್ಯಮಾಡಿದವರು ನಾನು ನೋಡಿದ ಈ ಮೂರು ವೈದ್ಯೋತ್ತಮರು. ಇವರ ರೀತಿ ನಿಸ್ವಾರ್ಥದಿಂದ ಹಣಕ್ಕೆ ಆಸೆ ಪಡದೆ ಕಡಿಮೆ ಫೀಸ್ ಪಡೆದು ರೋಗಗಳನ್ನು ಗುಣಮಾಡುವ ಬಹಳ ಡಾಕ್ಟರ್ ಗಳು ಆಗ ಇದ್ದರು. ಈ ಮೂರು ಮಹನೀಯರ ಬಗ್ಗೆ ಇಲ್ಲಿ ತಿಳಿಯಪಡಿಸುತ್ತಿದ್ದೇನೆ.
ಡಾ||ನರಸಿಂಹಾಚಾರ್:
ಸುಮಾರು 1980ರ ತನಕ ನಮ್ಮ ಕುಟುಂಬದ ಎಲ್ಲ ಸದಸ್ಯರಿಗೆ ಫ್ಯಾಮಿಲಿ ಡಾಕ್ಟರ್ ಆಗಿದ್ದವರು ಡಾ||ನರಸಿಂಹಾಚಾರ್ ಅವರು. ಅವರ ವಿಶಾಲವಾದ ಕ್ಲಿನಿಕ್ ನ್ಯಾಷನಲ್ ಕಾಲೇಜು ಸರ್ಕಲ್ ಬಳಿ ಅ.ನಾ.ಕೃಷ್ಣರಾವ್ ರಸ್ತೆಯಲ್ಲಿ ಸಿಟಿ ಸೆಂಟ್ರಲ್ ಲೈಬ್ರರಿ ಎದುರುಗಡೆ ಇತ್ತು. ಈಗ ಆ ಜಾಗದಲ್ಲಿ ಫಾಸ್ಟ್ ಫುಡ್ ಅಂಗಡಿಗಳು ತಲೆಯೆತ್ತಿವೆ. ಆದರೆ ಆಗ, ಆ ರಸ್ತೆಯಲ್ಲಿ ಬಹಳ ಕಡಿಮೆ ಟ್ರಾಫಿಕ್ ಇತ್ತು. ಸುತ್ತಮುತ್ತಲಿನ ಸ್ಕೂಲ್ ಗೆ, ಕಾಲೇಜ್ ಗೆ ಹೋಗುವ ಮಕ್ಕಳು ಬಸ್ ಹತ್ತುತ್ತಿದ್ದ ಮತ್ತು ಇಳಿಯುತ್ತಿದ್ದ ಒಂದು ಜಂಕ್ಷನ್ ಆಗಿತ್ತು.
ಡಾ||ನರಸಿಂಹಾಚಾರ್ ಅವರು ಅಜಾನುಬಾಹು ಮತ್ತು ನೋಡಲು ಯುರೋಪಿಯನ್ ತರ ಇದ್ದರು. ಅವರು ಉದ್ದನಾದ ಬಿಳಿಯ ಕೋಟು ಹಾಕಿಕೊಂಡು ಯಾವಾಗಲು ನಗುಮುಖದಿಂದ ಇರುತಿದ್ದ ಅದ್ಭುತ ವ್ಯಕ್ತಿ. ಡಾ||ನರಸಿಂಹಾಚಾರ್ ಆಗಿನ ಕಾಲದ ಸುಪ್ರಸಿದ್ಧ LMP ಡಾಕ್ಟರ್ ಅಂದರೆ Licensed Medical Practitioner ಅಂತ. ಬ್ರಿಟಿಷ್ ಆಡಳಿತದಲ್ಲಿ ಆಗ ಕೆಲವು ಯೂನಿವರ್ಸಿಟಿ ಗಳು ಈ ಪದವಿಯನ್ನು ನೀಡುತ್ತಿದ್ದವಂತೆ. LMP ಬಗ್ಗೆ ಹೆಚ್ಚಿನ ಮಾಹಿತಿಗೆ ನಿಮಗೆ ಗೊತ್ತಿರುವ ಹಿರಿಯರ ಬಳಿ ಕೇಳಿ, ತಿಳಿದುಕೊಳ್ಳಿ. ಅವರು ಯಾವಾಗಲು ಆಗಿನ ಕಾಲದಲ್ಲಿಯೇ ಜೆನೆರಿಕ್ ಮೆಡಿಸಿನ್ ಮಾತ್ರ ಕೊಡುತ್ತಿದ್ದರು. ಅವರು ಪ್ರತಿ ರೋಗಿಯನ್ನು ನೋಡಿದ ಬಳಿಕ ಪಡೆಯುತ್ತಿದ್ದ ಫೀಸ್ ಕೇವಲ ಐದು ರೂಪಾಯಿ, ನಂತರ ಅದನ್ನು ಹತ್ತು ರೂಪಾಯಿ ಮಾಡಿದ್ದರು.
ಅವರ ಕ್ಲಿನಿಕ್ ನೆಲ ಅಂತಸ್ತಿನಲ್ಲಿದ್ದ ಒಂದು ದೊಡ್ಡ ರೂಮು, ಮುಂದೆ ದೊಡ್ಡ ಬಾಗಿಲು. ಬಾಗಿಲಿನ ಬದಿಯಲ್ಲಿ ಡಾಕ್ಟರ್ ಹೆಸರು ಮತ್ತು ಅವರು ನೋಡುವ ಸಮಯವಿರುವ ಬೋರ್ಡ್ ಇತ್ತು. ದೊಡ್ಡ ರೂಮಿನಲ್ಲಿ ಮರದ ಪಾರ್ಟಿಷನ್ ಮಾಡಿ ಎಡಗಡೆಯಲ್ಲಿ ಎರಡು ಮತ್ತು ಬಲಗಡೆಯಲ್ಲಿ ಎರಡು ಕೋಣೆಗಳನ್ನು ಮಾಡಿದ್ದರು. ಬಲಗಡೆಯ ಮೊದಲನೆಯ ಕೋಣೆ ಕಂಪೌಂಡರ್ ರೂಮಾಗಿತ್ತು, ಅದಕ್ಕೆ ಒಂದು ಕಿಟಕಿ ರೋಡಿನ ಕಡೆ ರೋಗಿಗಳು ಬಂದು ಔಷದಿ ಪಡೆಯುವುದಕ್ಕೆ ಮಾಡಿದ್ದರು. ಬಲಗಡೆಯ ಮತ್ತೊಂದು ಕೋಣೆ ಡಾಕ್ಟರ್ ದಾಗಿತ್ತು. ಆ ಕೋಣೆಯ ಒಳಗೆ ಬಾಗಿಲಿಗೆ ಅಂಟಿದ ಹಾಗೆ ಡಾಕ್ಟರ್ ಒಳಗಡೆ ಕುಳಿತುಕೊಳ್ಳುತ್ತಿದ್ದರು, ಯಾಕೆಂದರೆ ಬಾಗಿಲು ತೆಗೆದು ಹಾಕಲಿಕ್ಕೆ ಅವರಿಗೆ ಸುಲಭ ಆಗಲಿ ಅಂತ. ಎಡಗಡೆಯಲ್ಲಿ ಒಂದು ರೂಮ್ ಓಷಧಿಗಳು ಇಡಲು ವ್ಯವಸ್ಥೆ ಮಾಡಿಕೊಂಡಿದ್ದರು. ಮತ್ತೊಂದು ರೂಮ್ ರೋಗಿಗಳಿಗೆ ಇನ್ನಷ್ಟು ಪರೀಕ್ಷೆ ಮಾಡಲು ಉಪಯೋಗಿಸುತ್ತಿದ್ದರು. ಆ ಕ್ಲಿನಿಕ್ ಇರುವ ಜಾಗ ಹಿಂದಿನ ಮನೆಯಲ್ಲಿದ್ದ ಡಾ||ನರಸಿಂಹಾಚಾರ್ ಅವರ ಅಕ್ಕನಿಗೆ ಸೇರಿದ್ದು ಎಂದು ಯಾರೋ ಹೇಳಿದ ನೆನಪು. ಹಿಂದಿನ ಮನೆಯ ಗಾರ್ಡನ್ ಏರಿಯಾಗೆ ಹೋಗಲು ರೂಮಿನ ಮಧ್ಯದಲ್ಲಿ ಯಾವಾಗಲು ಮುಚ್ಚಿದ್ದ ಬಾಗಿಲಿತ್ತು.
ರೂಮಿನ ಮಧ್ಯದ ಜಾಗ ವಿಶಾಲವಾದ ವೈಟಿಂಗ್ ರೂಮ್, ಎರಡು ಚಿಕ್ಕ ಮೆಟ್ಟಿಲು ಹತ್ತಿ ಒಳಗೆ ಹೋದರೆ ಕ್ಲಿನಿಕ್ಕಿನ ನೆಲ ರೆಡ್ ಆಕ್ಸೈಡ್ ನಿಂದ ಕಂಗೊಳಿಸುತ್ತಿತ್ತು, ವೈಟಿಂಗ್ ತೇಗದ ಮರದ ಫಳ ಫಳ ಎಂದು ಹೊಳೆಯುವ ಪಾಲಿಶ್ ಮಾಡಿದ್ದ ಉದ್ದವಾದ ಬೆಂಚ್ ಗಳು ಗೋಡೆಬದಿಯಲ್ಲಿ ಸುತ್ತಲೂ ಹಾಕಿದ್ದರು. ಮಧ್ಯದಲ್ಲಿ ಒಂದು ಫ್ಯಾನ್, ಬೇಕಾದಷ್ಟು ಬೆಳಕು ಕೊಡಲು ಟ್ಯೂಬ್ ಲೈಟ್ ಗಳು. ಅವರ ಕ್ಲಿನಿಕ್ ಗೆ ಬಂದ ರೋಗಿಗಳು ಮತ್ತು ಅವರ ಜೊತೆ ಬಂದವರು ಕ್ಯೂ ಸಿಸ್ಟಮ್ ಮಾದರಿಯಲ್ಲಿ ಗೋಡೆಗೆ ಬದಿಗಿದ್ದ ಬೆಂಚ್ ಗಳ ಮೇಲೆ ಕುಳಿತುಕೊಳ್ಳಬೇಕಿತ್ತು. ಒಂದು ತುದಿಯಲ್ಲಿ ನೀರು ಕುಡಿಯಲು ವ್ಯವಸ್ಥೆ ಮಾಡಿದ್ದರು. ವೈಟಿಂಗ್ ಟೈಂನಲ್ಲಿ ಕಾಲ ಕಳೆಯಲು ಸಾಕಷ್ಟು ನ್ಯೂಸ್ ಪೇಪರ್ ಗಳು ಮತ್ತು ಮ್ಯಾಗಜಿನ್ ಗಳನ್ನೂ ಇಟ್ಟಿದ್ದರು. ಆ ವೈಟಿಂಗ್ ರೂಮಿನಲ್ಲಿ ಕೂತವರು ಏನಾದರೂ ಒಂದನ್ನು ಹಿಡಿದು ಓದುತ್ತಿದ್ದರು. ಯಾಕೆಂದರೆ ಆಗಿನ್ನೂ ಮೊಬೈಲಾಸುರನ ಆಕ್ರಮಣ ಆಗಿರಲಿಲ್ಲ. ರೋಗಿಗಳು ತಾವೇ ಯಾರು ಮೊದಲು ಬಂದಿದ್ದು, ಯಾರು ನಂತರ ಬಂದಿದ್ದು ಅಂತ ಅವರು ಕುಳಿತ ಜಾಗದಿಂದಲೇ ಅರಿಯುತಿದ್ದರು. ಕ್ಯೂ ಸಿಸ್ಟಮ್ ನೋಡಿಕೊಳ್ಳಲು ಜನ ಇಲ್ಲದಿದ್ದರೂ ಸಹ, ಯಾವುದೇ ಮನಸ್ತಾಪ - ಜಗಳ ರೋಗಿಗಳ ನಡುವೆ ಆಗುತ್ತಿರಲಿಲ್ಲ. ಯಾಕೆಂದರೆ ಆಗ ಕೇವಲ ಬೆಂಗಳೂರಿನಲ್ಲಿ ಮೂಲ ವಾಸಿಗಳು ಮಾತ್ರ ಇದ್ದರು ಮತ್ತು ರೂಲ್ಸ್ ಬ್ರೇಕ್ ಮಾಡೋದಿಕ್ಕೆ ಅಂಜುತ್ತಿದ್ದ ಕಾಲ. ಈಗ ಜನ ಕ್ಯೂನಲ್ಲಿ ನಿಂತು ಕೊಳ್ಳೋದು ಅವಮಾನದ ಸಂಗತಿ ಅಂತ ಕ್ಯೂ ಜಂಪ್ ಮಾಡಿ, ಇಲ್ಲಾಂದ್ರೆ ಯಾರೋ VIP ಇನ್ಫ್ಲುಯೆನ್ಸ್ ತಂದು ಮುಂದೆ ಹೋಗೋವವರೇ ಜಾಸ್ತಿ. ಆಗ ಬೇರೆ ಜಾಗದಿಂದ ಬಂದು ಬೆಂಗಳೂರಿನಲ್ಲಿ ನೆಲಸಿದರೂ ಸಹ ಅವರೂ ಮೂಲ ಬೆಂಗಳೂರಿಗರ ರೀತಿಯೇ ರೂಪಾಂತರಗೊಳ್ಳುತ್ತಿದ್ದರು, ಕನ್ನಡ ಬೇಗ ಕಲಿಯುತ್ತಿದ್ದರು.
ಒಂದು ರೋಗಿಯನ್ನು ನೋಡಿದ ನಂತರ ಮತ್ತೊಂದು ರೋಗಿಯನ್ನು ಕರೆಯಲು ಒಂದು ಗಂಟೆ ಡಾಕ್ಟರ್ ಅವರ ಬಾಗಿಲಿಗೆ ನೇತುಹಾಕಿದ್ದರು. ಒಳಗಿದ್ದ ರೋಗಿ ಹೋದ ನಂತರ ಗಂಟೆ ಬಾರಿಸಿದರೆ ಮುಂದಿನ ರೋಗಿ ಮತ್ತು ಅವರ ಜೊತೆಯ ಒಬ್ಬರು ಡಾಕ್ಟರ್ ರೂಮಿಗೆ ಹೋಗಬೇಕೆಂದು ಸಂದೇಶ. ರೂಮಿನ ಬಾಗಿಲು ಸ್ವಲ್ಪ ತೆಗೆದು ಡಾಕ್ಟರ್ ಬಗ್ಗಿ ನೋಡಿ, "ಬನ್ನಿ ಒಳಗಡೆ" ಎಂದು ನಗು ಮುಖದಿಂದ ಕರೆಯುತ್ತಿದ್ದರು. ಡಾಕ್ಟರ್ ಒಂದು ರೀತಿಯ ಸ್ಲೈಡಿಂಗ್ ಚೇರ್ ಮೇಲೆ ಕುಳಿತುಕೊಳ್ಳುತ್ತಿದ್ದರು. ಅವರ ಎಡಬದಿಗೆ ರೋಗಿ ಕುಳಿತುಕೊಳ್ಳಲು ಮರದ ಚೇರ್ ಇತ್ತು. ಡಾಕ್ಟರ್ ಎದುರುಗಡೆ ಯಾವಾಗಲು ನೀರು ಕುದಿಯುತ್ತಿದ್ದ ಎಲೆಕ್ಟ್ರಿಕ್ ಸ್ಟೆರಲೈಝರ್ ಸ್ವಲ್ಪ ಎತ್ತರದ ಟೇಬಲ್ ಮೇಲೆ ಇರುತ್ತಿತ್ತು. ಅದರಲ್ಲಿ ಇಂಜೆಕ್ಷನ್ ಸಿರಿಂಜ್ ಹಾಕಿ ಇಡುತ್ತಿದ್ದರು. ಡಾಕ್ಟರ್ ಬರೆಯಲು, ನಾವು ಸ್ಕೂಲ್ ನಲ್ಲಿ ಬಳಸುತ್ತಿದ್ದ ಎಕ್ಸಾಮಿನೇಷನ್ ಪ್ಯಾಡ್ ಒಂದು ಇತ್ತು. ಹಾಗೆ ಒಂದು ಸಣ್ಣ ಟೇಬಲ್ ಅವರಮುಂದೆ. ಅವರ ಬಲಗಡೆ ರೋಗಿಗಳನ್ನು ಮಲಗಿದ ಸ್ಥಿತಿಯಲ್ಲಿ ಆರೋಗ್ಯ ತಪಾಸಣೆ ಮಾಡಲು ಒಂದು ಎತ್ತರವಾದ ಮಂಚ, ಅದರ ಮೇಲೆ ಮೆತ್ತಗಿನ ಹಾಸಿಗೆ, ದಿಂಬು. ಮಂಚ ಏರಲು ತುದಿಯಲ್ಲೊಂದು ಮಂಚಕ್ಕೆ ಅಂಟಿದ್ದ ಮೆಟ್ಟಿಲು.
ಡಾಕ್ಟರ್ ನಗುತ್ತ ರೋಗಿಯ ಕೈ ಹಿಡಿದು ನಾಡಿ ಪರೀಕ್ಷೆ ಮಾಡುತ್ತಾ, "ಏನಾಗಿದೆ ನಿಮಗೆ" ಅಂತ ಕೇಳುತ್ತಿದ್ದರು. ಯಾರನ್ನು ಅವರು ಏಕವಚನದಲ್ಲಿ ಮಾತನಾಡಿಸುತ್ತಿರಲಿಲ್ಲ. ಸಣ್ಣ ಮಗು ಬಂದರು ಸಹ ಬಹುವಚನದಲ್ಲೇ ಮಾತನಾಡಿಸುತ್ತಿದ್ದರು. ಆಗ ಎಲ್ಲರಿಗೂ ಬರುತ್ತಿದ್ದ ಕಾಮನ್ ರೋಗ ಜ್ವರ, ನೆಗಡಿ, ಗಂಟಲು ನೋವು, ಹೊಟ್ಟೆ ನೋವು ಮತ್ತು ಆಕಸ್ಮಿಕವಾಗಿ ಆಗುತ್ತಿದ್ದ ಗಾಯಗಳು. ರೋಗದ ಬಗ್ಗೆ ವಿಷಯ ತಿಳಿದುಕೊಂಡು, ತಮ್ಮ ಸ್ಟೆಥಾಸ್ಕೊಪನ್ನು ತಮ್ಮ ಕುತ್ತಿಗೆ ಮೇಲಿಂದ ತೆಗೆದು ರೋಗಿಯ ಎದೆ ಭಾಗ ಮತ್ತು ಬೆನ್ನಿನ ಭಾಗವನ್ನು ಪರೀಕ್ಷಿಸಿದ ನಂತರ, ಕನ್ನಡಿ ಇದ್ದ ಕಿರೀಟವನ್ನು ಧರಿಸಿ, ರೋಗಿಯ ಚೇರ್ ಮೇಲಿದ್ದ ಬಲ್ಬ್ ಆನ್ ಮಾಡಿ, "ಗಂಟಲು ತೋರಿಸಿ, ನಾಲಿಗೆ ಹೊರ ಹಾಕಿ, ಹಾ... ಅಂತ ಜೋರಾಗಿ ಅನ್ನಿ" ಎಂದು ಗಂಟಲು ಪರೀಕ್ಷಿಸುತ್ತಿದ್ದರು. ಎಲ್ಲ ಪರೀಕ್ಷೆಗಳನ್ನು ಮಾಡಿದ ಮೇಲೆ ರೋಗದ ಬಗ್ಗೆ ಬಂದವರಿಗೆ ತಿಳಿಸಿ, ಯಾವ ರೀತಿಯ ಆಹಾರ ಸೇವಿಸ ಬೇಕು ಮತ್ತು ಅವರು ಬರೆದು ಕೊಡುತ್ತಿದ್ದ ಮಾತ್ರೆ ಹಾಗು ಔಷಧೀಯ ಪುಡಿಗಳನ್ನು ಯಾವಾಗ ಸೇವಿಸಬೇಕೆಂದು ವಿವರವಾಗಿ ತಿಳಿಸಿಕೊಡುತ್ತಿದ್ದರು. ಏನಾದರೂ ಗಂಟಲು ಸಮಸ್ಯೆ ಇದ್ದಾರೆ ಒಂದು ಬಾಟಲಿ ನಲ್ಲಿ ಅವರು ಇಟ್ಟಿದ್ದ ಕೆಂಪು ಬಣ್ಣದ Mandl's Paint ಅನ್ನು ಕಡ್ಡಿಗೆ ಸಿಗಿಸಿದ್ದ ಹತ್ತಿಗೆ ಅದ್ದಿದ ನಂತರ ಗಂಟಲಿಗೆ ಸವರುತ್ತಿದ್ದರು. ಆ ಔಷಧಿ ಗಂಟಲಿನ ಸಮಸ್ಯೆಯ ಪರಿಹಾರ ಕೊಡುತ್ತಿತ್ತು. ಏನಾದರು ಹೊಟ್ಟೆಯ ಭಾಗ ಪರೀಕ್ಷೆ ಮಾಡ ಬೇಕಿದ್ದರೆ ಅಥವಾ ಇಂಜೆಕ್ಷನ್ ಕೊಡ ಬೇಕಿದ್ದರೆ ಮಾತ್ರ ಅವರ ಬಲಭಾಗದಲ್ಲಿದ್ದ ಮಂಚದಲ್ಲಿ ರೋಗಿ ಮಲಗಲು ಹೇಳುತ್ತಿದ್ದರು.
ಕೆಲವು ರೋಗಿಗಳು "ಡಾಕ್ಟರ್, ಜ್ವರ ಬೇಗ ಹೋಗಲು ಇಂಜೆಕ್ಷನ್ ಕೊಡಿ" ಎಂದು ರಿಕ್ವೆಸ್ಟ್ ಮಾಡಿಕೊಂಡರೆ, "ನೋಡಿ ಜ್ವರ ಹೋಗಲು ಒಂದು ನಾಲ್ಕು ದಿನವಾಗಬಹುದು. ನಾನು ಕೊಟ್ಟಿರುವ ಗುಳಿಗೆಗಳು ನಿಧಾನವಾಗಿ ಕೆಲಸ ಮಾಡುತ್ತವೆ. ನಿಮ್ಮ ದೇಹ ಕೂಡ ಸ್ಪಂದಿಸಿ ಜ್ವರ ಹೋಗಲಾಡಿಸುತ್ತದೆ. ಸುಮ್ಮನೆ ಹೈ ಡೋಸೇಜ್ ಇರುವ ಇಂಜೆಕ್ಷನ್ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ರೋಗ ಕೈ ಮೀರಿ ಹೋಗುತ್ತಿದ್ದಾರೆ ಮಾತ್ರ ನೀವು ಹೇಳದಿದ್ದರೂ ನಾನು ಇಂಜೆಕ್ಷನ್ ಕೊಡುತ್ತೇನೆ" ಎಂದು ಹೇಳುತ್ತಿದ್ದರು. ಗುಳಿಗೆಗಳು ಯಾವಾಗ ತೆಗೆದುಕೊಳ್ಳಬೇಕು ಎಂದು ಚೀಟಿಯಲ್ಲಿ ಬರೆದು ಕಂಪೌಂಡರ್ ಇದ್ದ ಕಾಲದಲ್ಲಿ ಕಂಪೌಂಡರ್ ಕಿಟಕಿಯಲ್ಲಿ ಔಷಧಿ ತೆಗೆದುಕೊಳ್ಳಲು ಹೇಳುತ್ತಿದ್ದರು. ನಂತರದ ದಿನಗಳಲ್ಲಿ ಕಂಪೌಂಡರ್ ಇರಲಿಲ್ಲ, ಆಗ ಡಾಕ್ಟರ್ ತಾವೇ ಔಷಧಿಗಳ ಬಾಟಲಿ ಇಂದ ಗುಳಿಗೆಗಳನ್ನು ರೋಗಿಗೆ ತೋರಿಸಿ ಕಾಗದದ ಕವರ್ ನಲ್ಲಿ ಹಾಕಿ ಕೊಟ್ಟ ನಂತರ ರೋಗಿಯ ಬಳಿ ಹಣ ಪಡೆಯುತ್ತಿದ್ದರು.
ಮಧ್ಯಾಹ್ನದ ಹೊತ್ತು ರೋಗಿಗಳು ಇರದಿದ್ದರೆ ಟೈಮ್ ವೇಸ್ಟ್ ಮಾಡದೆ ಡಾ||ನರಸಿಂಹಾಚಾರ್ ಖುದ್ದಾಗಿ ಅವರೇ ಪೇಪರ್ ನಿಂದ ಔಷಧಿ ಹಾಕುವುದಕ್ಕೆ ಕವರ್ ಗಳನ್ನು ಮಾಡುತ್ತ ಕುಳಿತಿರುತ್ತಿದ್ದರು. ರೀಡರ್ಸ್ ಡೈಜೆಸ್ಟ್ ಮ್ಯಾಗಜಿನ್ ನಲ್ಲಿ ಅಡ್ವರ್ಟಿಸೆಮೆಂಟ್ ಗಳು ಹಿಂದೆ-ಮುಂದಿನ ಕೆಲವು ಪೇಜ್ ಗಳಲ್ಲಿ ಇರುತಿತ್ತು. ಅಂತಹ ಪೇಜ್ ಗಳನ್ನು ನಿಧಾನವಾಗಿ ತೆಗೆದು ಪೇಪರ್ ಕವರ್ ಮಾಡುತ್ತಿದ್ದದ್ದು ಬಹಳ ಸಾರಿ ನೋಡಿದ್ದೆ. ಅವರು ಕನ್ನಡದಲ್ಲಿ ರೋಗಿಯ ಹೆಸರನ್ನು ಔಷಧಿಯ ಕವರ್ ಮೇಲೆ ಬರೆದು ಕೊಡುತ್ತಿದ್ದರು. ಅವರ ಕನ್ನಡದ ಕೈಬರಹ ತುಂಬಾ ಚೆನ್ನಾಗಿರುತ್ತಿತ್ತು
ಮುಂಚೆಯೇ ಹೇಳಿದ ಹಾಗೆ ಡಾ||ನರಸಿಂಹಾಚಾರ್ ನೋಡುವುದಕ್ಕೆ ಹಾಲಿವುಡ್ ಸ್ಟಾರ್ ಇದ್ಧ ಹಾಗೇ ಇದ್ದರು. ಅವರು ಶುದ್ಧ ಕನ್ನಡದಲ್ಲಿ ಮಾತನಾಡುವುದು ಕೇಳುವುದಕ್ಕೆ ಖುಷಿ ಆಗ್ತಿತ್ತು. ಬಡವರ ಬಳಿ ಹಣ ತೆಗೆದುಕೊಳ್ಳದೆ ಅವರಿಗೆ ಉಚಿತವಾಗಿ ಔಷಧಿಗಳನ್ನು ಸಹ ಕೊಡುತ್ತಿದ್ದರು. ಡಾಕ್ಟರ್ ವೃತ್ತಿಯಲ್ಲದೆ ಅವರು RSS - ರಾಷ್ಟೀಯ ಸ್ವಯಂ ಸೇವಕ ಸಂಘ ದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆದರೆ ಅವರು ತಮ್ಮ ಕ್ಲಿನಿಕ್ನಲ್ಲಿ ಇದರ ಬಗ್ಗೆ ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ. ನಾನು ಇನ್ನು ಚಿಕ್ಕವನಾಗಿದ್ದರಿಂದ ಎಲ್ಲೊ ಕೇಳಿದ ನೆನಪು, ಡಾಕ್ಟರ್ RSS ನಲ್ಲಿ ಯಾವುದೊ ವಿಭಾಗಕ್ಕೆ ಸೆಕ್ರೆಟರಿ ಆಗಿದ್ದರು ಅಂತ. ಆಗ ಪ್ರತಿ ಸಂಕ್ರಾಂತಿ ಹಬ್ಬದ ದಿನ ನ್ಯಾಷನಲ್ ಹೈ ಸ್ಕೂಲ್ ಮೈದಾನದಲ್ಲಿ RSSನ ವಾರ್ಷಿಕ ಸಮಾರಂಭಕ್ಕೆ ಎಲ್ಲರಿಗೂ ಆಹ್ವಾನ ಇರುತ್ತಿತ್ತು. ಆ ಕಾರ್ಯಕ್ರಮದಲ್ಲಿ ನಮ್ಮ ಡಾಕ್ಟರ್ RSS ಚಡ್ಡಿ ಹಾಕಿಕೊಂಡು ಯುನಿಫಾರ್ಮ್ ನಲ್ಲಿ ಮಿಂಚುತ್ತಿದ್ದರು ಮತ್ತು ಅಲ್ಲಿ ಬಂದವರಿಗೆ ಸ್ವತಃ ಅವರೇ ಎಲ್ಲರಿಗೂ ಎಳ್ಳು-ಬೆಲ್ಲ ಕೊಡುತ್ತಿದ್ದರು. ನಾವು ಅವರಿಗೆ ಗೊತ್ತಿದ್ದರಿಂದ ನಮಗೆ ಸ್ವಲ್ಪ ಜಾಸ್ತಿನೇ ಕೊಡುತ್ತಿದ್ದರು.
1975-77 ನಲ್ಲಿ ನಾನು ನ್ಯಾಷನಲ್ ಮಿಡ್ಲ್ ಸ್ಕೂಲ್ ನಲ್ಲಿ ಓದುತ್ತಿದಾಗ ಸರಕಾರ ಎಮರ್ಜೆನ್ಸಿ ಘೋಷಿಸಿದ್ದ ಪರಿಣಾಮ ಡಾ||ನರಸಿಂಹಾಚಾರ್ ಕಣ್ಮರೆಯಾಗಿದ್ದರು. ಸ್ವಲ್ಪ ದಿನಗಳ ನಂತರ ತಿಳಿಯಿತು ಅವರು ಪೊಲೀಸ್ ಗೆ ಸಿಕ್ಕು, ಅರೆಸ್ಟ್ ಆದರೆಂದು. ನಮಗೆ ಒಂದು ಕಡೆ ನಮ್ಮ ಡಾಕ್ಟರ್ ಬಗ್ಗೆ ಕಾಳಜಿ ಉಂಟಾಯಿತು, ಹೇಗಿದ್ದಾರೋ ಏನೋ ಅಂತ. ನಮ್ಮ ಸ್ಕೂಲ್ ನಲ್ಲಿ ನಮಗೆ ಟೀಚರ್ ಗಳು ಸರಕಾರದ ವಿರುದ್ಧ ಎಲ್ಲೂ ಮಾತನಾಡಬಾರದು ಮತ್ತು ಪೊಲೀಸ್ ರ ಹತ್ತಿರ ಹುಷಾರಾಗಿ ಇರಬೇಕು ಎಂದು ಮೆಲ್ಲದನಿ ಯಲ್ಲಿ ಆಜ್ಞೆ ಮಾಡಿದ್ದರು. ಒಂದು ರೀತಿಯ ಭಯದ ವಾತಾವರಣ ಎಲ್ಲಡೆ ಮೂಡಿತ್ತು. ಇನ್ನು ನಮ್ಮ ಆರೋಗ್ಯದ ರಕ್ಷಣೆ ಯಾರು ಮಾಡುತ್ತಾರೆ ಅಂತ ನಮ್ಮ ಕುಟುಂಬದವರಿಗೆ ಆತಂಕವಾಗಿತ್ತು.
ಆಗ ನಮ್ಮ ಡಾಕ್ಟರ್ ವಾಪಾಸ್ ಬರುವವರೆಗೂ ತಾತ್ಕಾಲಿಕವಾಗಿ ಮತ್ತೊಬ್ಬ ವಯಸ್ಸಾದ ಡಾಕ್ಟರ್ - ಅವರ ಹೆಸರು ನೆನಪಿಲ್ಲ ಅವರು ಡಾ||ನರಸಿಂಹಾಚಾರ್ ಕ್ಲಿನಿಕ್ ನಡೆಸಲು ಶುರು ಮಾಡಿದರು. ಆ ಡಾಕ್ಟರ್ ಗೆ ವಯಸ್ಸಾದರಿಂದ ಸ್ವಲ್ಪ ಕಿವಿ ಕೇಳಿಸುತ್ತಿರಲಿಲ್ಲ. ಆದರೆ ಅವರು ಸಹ ಒಬ್ಬ ಒಳ್ಳೆಯ ಡಾಕ್ಟರ್ ಆಗಿದ್ದರು. ತಮಾಷೆ ಅಂದರೆ ಅವರಿಗೆ ವಯಸ್ಸಾದರಿಂದ ಕೇಳಿದ ಪ್ರಶ್ನೆಯನ್ನೇ ಪದೇ ಪದೇ ಕೇಳುತ್ತಿದ್ದರು. "ಕೆಮ್ಮಿದೆಯೇ? ಗಂಟಲು ನೋವಿದೆಯೇ?" ಅಂತ ಕೇಳಿ ನಾಡಿ ಪರೀಕ್ಷೆ ಮಾಡಿ ಮತ್ತೆ, "ಕೆಮ್ಮಿದೆಯೇ? ಗಂಟಲು ನೋವಿದೆಯೇ?" ಅಂತ ಕೇಳುತ್ತಿದ್ದರು. ಅಲ್ಲಿ ನಾವು ಅವರಿಗೆ ಉತ್ತರವನ್ನು ಪುನಃ ಹೇಳುತ್ತಿದ್ದೆವು. ಮನೆಗೆ ಬಂದ ಮೇಲೆ ನಾವು ಅವರನ್ನು ಅನುಕರಿಸಿ, ಮನೆಯಲ್ಲಿದ್ದ ಹಿರಿಯರ ನಾಡಿ ಪರೀಕ್ಷೆ ಮಾಡುವಂತೆ ಅವರಿಗೆ ಹೊಸ ಡಾಕ್ಟರ್ ರೀತಿಯಲ್ಲಿ "ಕೆಮ್ಮಿದೆಯೇ? ಗಂಟಲು ನೋವಿದೆಯೇ?" ಎಂದು ಎರಡು ಮೂರು ಬಾರಿ ಕೇಳಿ ಒದೆ ತಿಂದಿದ್ದು ಉಂಟು.
ಎಮರ್ಜೆನ್ಸಿ ತೆಗೆದರು ಅಂತ ಒಂದು ಶುಭದಿನ ರೇಡಿಯೋ ವಾರ್ತೆಗಳ ಮೂಲಕ ಗೊತ್ತಾದಾಗ ನಮಗೆ ಮೊದಲು ಅನ್ನಿಸತೊಡಗಿದ್ದು ಓಹ್ ನಮ್ಮ ಡಾ||ನರಸಿಂಹಾಚಾರ್ ವಾಪಾಸ್ ಈಗ ಬರಬಹುದು ಅಂತ. ಅವರು ವಾಪಾಸ್ ಬಂದದ್ದು ಗೊತ್ತಾದಾಗ ನಮಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಕೂಡ ಅವರನ್ನು ನೋಡಲು ಹೋದೆವು. ಅವರು ನಮ್ಮನ್ನು ನೋಡಿ ನಕ್ಕು ಮಾತನಾಡಿಸಿದರು. ಆದರೆ ಅವರು ಸುಮಾರು ಒಂದುವರೆ ಎರಡು ವರ್ಷಗಳಲ್ಲಿ ಬಹಳ ಸೊರಗಿ ಹೋಗಿದ್ದರು. ನಾವು ಅವರಿಗೆ ಹೇಗೆ ನೋಡಿಕೊಂಡರು ಎಂದು ಕೇಳಿದಾಗ ಅವರು ಹೇಳಿದ ಒಂದೇ ಉತ್ತರ "ದಯವಿಟ್ಟು ಅದರ ಬಗ್ಗೆ ಯಾರು ನನಗೆ ಕೇಳಬೇಡಿ. ನಾನು ಇನ್ನು ಮುಂದೆ ಕೇವಲ ಡಾಕ್ಟರ್ ಮಾತ್ರ" ಅಂದಿದ್ದರು.
ಸುಮಾರು 1983 ತನಕ ಅವರು ವಯಸ್ಸಾಗಿದ್ದರೂ ಕೂಡ ಟೈಮ್ ಸರಿಯಾಗಿ ಕ್ಲಿನಿಕ್ ತೆಗೆದು ರೋಗಿಗಳನ್ನು ನೋಡುತ್ತಿದ್ದರು. ಯಾವಾಗ ಹೋದರೂ ವಿಶ್ವಾಸದಿಂದ ಮಾತನಾಡಿಸುತ್ತಿದ್ದರು ಮತ್ತು ನಮ್ಮ ಕುಟುಂಬದ ಇತರ ಸದಸ್ಯರ ಬಗ್ಗೆ ವಿಚಾರಿಸುತ್ತಿದ್ದರು. ಆಮೇಲೆ ಒಂದು ದಿನ ವಯಸ್ಸಾದ ಪರಿಣಾಮ ಕ್ಲಿನಿಕ್ ಮುಚ್ಚಿದರು. ಆ ದಿನ ನಮಗೆಲ್ಲ ಬಹಳ ದುಃಖವಾದ ದಿನ. ಅವರನ್ನು ಭೇಟಿ ಮಾಡಿದಾಗ ನಮಗೆ ಅವರು ಮತ್ತೊಬ್ಬ ಡಾಕ್ಟರ್ ಡಾ||ಧ್ರುವನಾರಾಯಣ್ ಬಳಿ ಇನ್ನುಮುಂದೆ ಹೋಗಿ ಎಂದು ತಿಳಿಸಿದರು. ಅವರ ಕಾಲಿಗೆ ಬಿದ್ದು ಬೀಳ್ಕೊಟ್ಟೆವು. ನಂತರ ಅವರ ಬಗ್ಗೆ ಯಾವುದೇ ಮಾಹಿತಿ ತಿಳಿಯಲಿಲ್ಲ. ನಾವು ಎಂದೂ ಮರೆಯಲಾಗದ ಟ್ರೂ ಜಂಟಲ್ಮನ್ ನಮ್ಮ ವೈದ್ಯರತ್ನ ಡಾ||ನರಸಿಂಹಾಚಾರ್ - ಅಮರ.
ಡಾ||ಧ್ರುವನಾರಾಯಣ್:
ಇವರೂ ಸಹ LMP ಡಾಕ್ಟರ್ ಮತ್ತು ಒಳ್ಳೆಯ ಕೈಗುಣ ಇದ್ದ ವೈದ್ಯೋತ್ತಮರು. ಇವರ ಕ್ಲಿನಿಕ್ ಗಾಂಧಿಬಜಾರ್ ಸರ್ಕಲ್ ಬಳಿಯ BASCO (Basavanagudi Co Operative Society) ಎದುರು ಇತ್ತು. ಈಗ ಒಂದು ಅಂಗಡಿ ಮತ್ತು ಫ್ಲೋರ್ ಮಿಲ್ ಆಗಿದೆ. ಅವರ ಕ್ಲಿನಿಕ್ ನಲ್ಲಿ ಮುಂದೆ ಸ್ವಲ್ಪ ಜನ ಕುಳಿತುಕೊಳ್ಳುವಷು ವೈಟಿಂಗ್ ರೂಮ್, ಒಳಗಡೆ ರೋಗ ತಪಾಸಣೆಗೆ ಚೇರ್, ಮಂಚ ಮತ್ತು ಕೆಲವು ಮಾತ್ರ ಔಷಧಿಗಳಿದ್ದ ಕಪಾಟುಗಳಿದ್ದವು. ಈ ಡಾಕ್ಟರ್ ಕೂಡ ಸ್ಮಾರ್ಟ್ ಆಗಿ ಯಾವಾಗಲು ಡ್ರೆಸ್ ಆಗಿರುತ್ತಿದ್ದರು. ರೋಗಿಗಳು ಇಲ್ಲದ್ದಿದ್ದರೆ ನ್ಯೂಸ್ ಪೇಪರ್ ಓದುತ್ತಾ ನೀಳವಾದ ಬೆತ್ತದ ಚೇರ್ ಮೇಲೆ ರೋಡ್ ಗೆ ಮುಖ ಮಾಡಿ ಕುಳಿತುಕೊಳ್ಳುತ್ತಿದ್ದರು. ಇವರೂ ಸಹ ಕಡಿಮೆ ಮಾತನಾಡುತ್ತಿದ್ದ ಟ್ರೂ ಜಂಟಲ್ಮನ್. ಅವರ ಬಳಿ Lambratta ಸ್ಕೂಟರ್ ಇಟ್ಟು. ಸರಿಯಾದ ಸಮಯಕ್ಕೆ ಕ್ಲಿನಿಕ್ ತೆರೆದು, ಕ್ಲೀನ್ ಮಾಡುವವರಿಗೆ ಕ್ಲಿನಿಕ್ ಅನ್ನು ಸರಿಯಾಗಿ ಸ್ವಚ್ಛ ಮಾಡಲು ತಾವೇ ನಿಂತು ನೋಡಿಕೊಳ್ಳುತ್ತಿದ್ದರು.
ನಾವು ಹೋದಾಗ ಕ್ಯೂ ಪ್ರಕಾರ ಒಬ್ಬರಾದ ನಂತರ ಒಬ್ಬರನ್ನು ತಪಾಸಣೆಗೆ ಒಳ ಕೋಣೆಗೆ ಕರೆದು ನಾಡಿ ನೋಡಿ, ಸ್ಟೆಥಾಸ್ಕೋಪ್ ಇಟ್ಟು ಪರೀಕ್ಷಿಸಿ ಒಳ್ಳೆಯ ಔಷಧಿಗಳನ್ನು ಬರೆದುಕೊಟ್ಟು ಅಂಗಡಿಯಲ್ಲಿ ಖರೀದಿಸಲು ಹೇಳುತ್ತಿದ್ದರು. ಅವರು ಮುಂಚಿನ ದಿನಗಳಲ್ಲಿ ಪಡೆಯುತ್ತಿದ್ದ ಫೀಸ್ ಕೇವಲ ಹತ್ತು ರೂಪಾಯಿ ಮಾತ್ರ. ನಂತರ ಇಪ್ಪತ್ತು ರೂಪಾಯಿ ಫೀಸ್ ಮಾಡಿದ್ದರು.
ಇವರೂ ಸಹ ಬಡವರು ಮತ್ತು ಗಾಂಧಿಬಜಾರಿನ ತರಕಾರಿ ಮಾರುವವರು ಬಂದರೆ ಹಣಪಡೆಯದೆ ನೋಡುತ್ತಿದ್ದ ಮಹನೀಯರು.
ನಾನು ನ್ಯಾಷನಲ್ ಹೈ ಸ್ಕೂಲ್ ನಲ್ಲಿ 10ನೇ ತರಗತಿ ಓದುತ್ತಿದ್ದಾಗ ಜಾಂಡಿಸ್ ಬಂತು. ಯಾರೋ ಹೇಳಿದರು ಅಂತ ನನ್ನಪ್ಪ ಅಲ್ಲೇ ಗಾಂಧಿಬಜಾರಿನಲ್ಲಿ ಬೇವಿನ ಔಷಧಿ ಕೊಡುತ್ತಿದ್ದ ಒಂದು ಮನೆಯವರ ಬಳಿ ನನಗೆ ಉಪಚಾರ ಮಾಡಿಸಲು ಶುರು ಮಾಡಿದರು. ಆದರೆ ನನಗೆ ಬಂದಿದ್ದ ಜಾಂಡಿಸ್ ಉಲ್ಬಣ ಗೊಂಡು, ಜ್ವರ ಸಹ ಸ್ವಲ್ಪವೂ ಕಡಿಮೆಯಾಗದೇ, ವೀಕ್ ಆದ ಕಾರಣ ನನಗೆ ನಡೆಯಲಿಕ್ಕೂ ಆಗದಿದ್ದಾಗ ಅಪ್ಪ ಮತ್ತು ಅಮ್ಮ ಕಂಗಾಲಾಗಿ ಡಾ||ಧ್ರುವನಾರಾಯಣ್ ಬಳಿ ಕರೆದುಕೊಂಡು ಹೋದಾಗ, ಡಾಕ್ಟರ್ ಕೋಪದಿಂದ ನಸುನಕ್ಕು "ಅಲ್ಲ ನೀವು ಆರೋಗ್ಯ ಶಾಸ್ತ್ರವನ್ನು ಓದಿರದ ಆ ಮನೆಯಲ್ಲಿ ಯಾಕ್ರೀ ಈ ಹುಡುಗನನ್ನು ಕರೆದುಕೊಂಡು ಹೋದ್ರಿ? ನೋಡಿ ಕಡ್ಡಿಯಾಗಿದ್ದಾನೆ ತ್ರಾಣವೇ ಇಲ್ಲ. ಇನ್ನುಮುಂದೆ ಈ ರೀತಿ ಮಿಸ್ಟೇಕ್ ಮಾಡಬೇಡಿ. ಪ್ರತಿ ದಿನ ಇವನನ್ನು ಕರೆದುಕೊಂಡು ಬನ್ನಿ." ಆಜ್ಞೆ ಮಾಡಿದ್ದರು. ಎರಡು ವಾರದ ನಂತರ ಅವರು ಕೊಟ್ಟ ಔಷಧಿ ಮತ್ತು ಅವರ ಕೈಗುಣ ದಿಂದ ನನಗೆ ಶಕ್ತಿ ಬಂದಂತಾಗಿತ್ತು. ಆಗಲಿಂದ ನಾನು ಅವರನ್ನು ದೇವರ ರೀತಿ ನೋಡುತ್ತಿದ್ದೆ.
ಸಂಪೂರ್ಣ ಗುಣವಾದ ಮೇಲೆ, ಅವರು ನನ್ನನ್ನು ಸ್ಟೆಥಾಸ್ಕೋಪಿನಿಂದ ಪರೀಕ್ಷಿಸಿ, "ನಿನ್ನ ಹೃದಯ ಸ್ವಲ್ಪ ದೊಡ್ಡದಾಗೇ ಇದೆ." ಎಂದು X RAY ಮಾಡಲು ತಿಳಿಸಿದರು. ಅದು ಹೇಗೆ ಹೇಳಿದಿರಿ ಅಂತ ನಾನು ಕೇಳಿದಾಗ, ನನಗೆ ಕೈ ಮುಷ್ಠಿ ಮಾಡಲು ಹೇಳಿದರು. ನನ್ನ ಮುಷ್ಟಿಯನ್ನು ಮುಟ್ಟಿ, "ನೋಡು ಪ್ರತಿ ಮನುಷ್ಯನ ಹೃದಯ ಅವನ ಮುಷ್ಟಿಯಷ್ಟು ದೊಡ್ಡದಿರುತ್ತದೆ. ನನಗೆ ನಿನ್ನ ಹೃದಯ ಈ ನಿನ್ನ ಮುಷ್ಟಿಗಿಂತ ಸ್ವಲ್ಪ ದೊಡ್ಡದಿರಬಹುದು ಎಂದು ಅನುಮಾನವಿದೆ" ಎಂದು ಚಿಕ್ಕ ಅನಾಟಮಿ ಪಾಠ ಮಾಡಿದ್ದರು. X RAY ಬಂದ ಮೇಲೆ, ಅವರು ತಾವು ಹೇಳಿದ್ದನ್ನು ಸಮರ್ಥಿಸಿಕೊಂಡು X RAY ತೋರಿಸುತ್ತಾ "ನೋಡು, ನಿನ್ನ ಹೃದಯ ಸ್ವಲ್ಪ ಮಾತ್ರ ದೊಡ್ಡದಿದೆ, ಅದರಿಂದ ಯಾವುದೇ ತೊಂದರೆ ಇಲ್ಲ. ಹೋಗು ಆಟವಾಡು" ಎಂದು ಹುರಿದುಂಬಿಸ್ಸಿದ್ದರು. ಇದರಿಂದ ಖಾತ್ರಿಯಾಗಿತ್ತು ಅವರು ಯಾವುದೇ ಬೇರೆ ಯಂತ್ರಗಳ ಸಹಾಯವಿಲ್ಲದೆ ಕೇವಲ ನಾಡಿ ಪರೀಕ್ಷೆ ಮತ್ತು ಸ್ಟೆತಾಸ್ಕೋಪ್ ನಿಂದ ಎಷ್ಟು ಸರಿಯಾಗಿ ದೇಹದ ನ್ಯೂನ್ಯತೆಯನ್ನು ಕಂಡುಹಿಡಿಯುತ್ತಿದ್ದರು ಎಂದು.
ನಂತರದ ದಿನಗಳಲ್ಲಿ, BASCO ಹೊಸ ಬಿಲ್ಡಿಂಗ್ ಕಟ್ಟಲು ಆ ಜಾಗದಲ್ಲಿದ್ದ ಫ್ಲೋರ್ ಮಿಲ್ಲಿಗೆ ಜಾಗ ಮಾಡಿ ಕೊಡಲು ಡಾ||ಧ್ರುವನಾರಾಯಣ್ ತಮ್ಮ ಕ್ಲಿನಿಕ್ ಜಾಗವನ್ನು ಕಡಿಮೆ ಮಾಡಿಕೊಳ್ಳಬೇಕಾಯಿತು. ಆದರೂ ಅವರು ಮುಂಚಿನ ರೀತಿಯಲ್ಲೇ ತಮ್ಮ ಕ್ಲಿನಿಕ್ ಅನ್ನು ಮುಂದುವರಿಸಿದ್ದರು.
ಸುಮಾರು 2005ರವರೆಗೂ ಅವರು ನಿರಂತರ ಸೇವೆ ಮಾಡಿದ್ದರು. ನಂತರ ಅವರಿಗೆ ವಯಸ್ಸಾದ ಕಾರಣ ತಮ್ಮ ಕ್ಲಿನಿಕ್ ಅನ್ನು ಲಾಲ್ಬಾಗ್ ವೆಸ್ಟ್ ಗೇಟ್ ಬಳಿಯ ತಮ್ಮ ಮನೆಗೆ ಸ್ಥಳಾಂತರ ಮಾಡಿದರು.
ಮತ್ತೊಂದು ವೈದ್ಯರತ್ನ ನಮ್ಮ ಜೊತೆಗೆ ಇಲ್ಲ ಎಂಬ ಸುದ್ದಿ ನ್ಯೂಸ್ ಪೇಪರ್ ನ ಮೂಲಕ ತಿಳಿದು ಸಂಕಟವಾಯಿತು. ಡಾ||ಧ್ರುವನಾರಾಯಣ್ ಅಮರ.
ಡಾ||ವಾಸುದೇವ್ :
ಇವರೂ ಸಹ ಮತ್ತೊಂದು ವೈದ್ಯ ರತ್ನ. ಮೊದಲು ಅವರ ಕ್ಲಿನಿಕ್ ಟಾಗೋರ್ ಸರ್ಕಲ್ ಬಳಿಯ ಈಗಿನ ಆಂಧ್ರ ರುಚಿಲು ಇರುವ ಜಾಗದ ಕಾರ್ನರ್ ನಲ್ಲಿ ಇತ್ತು. ಇವರ ಕ್ಲಿನಿಕ್ ಡಾ||ನರಸಿಂಹಾಚಾರ್ ಕ್ಲಿನಿಕ್ ಮಾದರಿಯ ವಿಶಾಲವಾದ ವೈಟಿಂಗ್ ರೂಮ್ ಇದ್ದಂತ ಕ್ಲಿನಿಕ್.
ಇವರ ಬಳಿ ನಾನು ಕೇವಲ ಸ್ವಲ್ಪ ವರುಷಗಳು ಮಾತ್ರ ಹೋಗಿದ್ದಿದ್ದು. ಅವರ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ ಅವರ ಕೈಗುಣ ಮುಂಚೆ ಹೇಳಿದ ಎರಡು ವೈದ್ಯೋತ್ತಮರ ರೀತಿಯಲ್ಲೇ ಇತ್ತು. ರೋಗವನ್ನು ಕಂಡುಹಿಡಿದು ಸರಿಯಾದ ಔಷಧಿಗಳನ್ನು ಕೊಡುತ್ತಿದ್ದರು. ಇವರೂ ಸಹ ಬಹಳ ಕಡಿಮೆ ಹಣವನ್ನು ಫೀಸ್ ಆಗಿ ಪಡೆಯುತ್ತಿದ್ದರು.
ನಂತರದ ದಿನದಲ್ಲಿ ಗಾಂಧಿಬಜಾರಿನ ಗೋವಿಂದಪ್ಪ ರೋಡಿಗೆ ತಮ್ಮ ಕ್ಲಿನಿಕ್ ಅನ್ನು ಮನೆಯ ರೀತಿ ಇದ್ದ ಸ್ಥಳಕ್ಕೆ ಶಿಫ್ಟ್ ಮಾಡಿದರು. ಡಾ||ವಾಸುದೇವ್ ಕ್ಲಿನಿಕ್ ಅವರು ನೋಡುವ ಸಮಯದಲ್ಲಿ ರೋಗಿಗಳಿಂದ ತುಂಬಿರುತ್ತಿತ್ತು. ನನ್ನ ಹೆಸರನ್ನು ಕೇಳಿದಾಗ ನಾನು "ವಾಸುದೇವ್" ಅಂದರೆ "ನನ್ನ ಹೆಸರು ಹೇಳ್ಬೇಡ್ರಿ ನಿಮ್ಮ ಹೆಸರು ಹೇಳ್ರಿ" ಅಂತ ಹಾಸ್ಯ ಮಾಡಿದ್ದರು. ಆಗಿನಿಂದ ಅವರು ನನ್ನ ಹೆಸರು ಕೇಳಿದರೆ, "ಸರ್ ನನ್ನ ಹೆಸರು ಮತ್ತು ನಿಮ್ಮ ಹೆಸರು ಒಂದೇ ಸರ್" ಅಂತಿದ್ದೆ. ನಕ್ಕು, ತಮ್ಮ ಪ್ರಿಸ್ಕ್ರಿಪ್ಷನ್ ಬರೆದು ಕೊಡುತ್ತಿದ್ದರು. ನಂತರದ ದಿನಗಳಲ್ಲಿ ಅವರಿಗೂ ಸಹ ವಯಸ್ಸಾದ ರಿಂದ ಅವರ ಕ್ಲಿನಿಕ್ ಬಂದಾಗಿತ್ತು. ಅವರ ಬಗ್ಗೆ ಮಾಹಿತಿ ನನಗೆ ಆಮೇಲೆ ಅಷ್ಟು ತಿಳಿಯಲಿಲ್ಲ.
-------------------------------
ಈಗ ಇಂತಹ ಡಾಕ್ಟರ್ ಸಿಗುವುದು ಅಪರೂಪದ ವಿಷಯ. ಇಂತಹ ಮೂರು ವೈದ್ಯೋತ್ತಮರಿಂದ ಆರೈಕೆ ಪಡೆದಿದ್ದರಿಂದ ಇಲ್ಲಿಯವರೆಗೆ ಆರೋಗ್ಯವನ್ನು ಕಾಪಾಡಿಕೊಂಡು ಬರಲು ನಮಗೆ ಸಹಾಯವಾಯಿತು. ಈ ಮಹನೀಯರು ಎಷ್ಟು ಜನರಿಗೆ ಹಣಕ್ಕೆ ಆಸೆಪಡದೆ, ನಿಸ್ವಾರ್ಥದಿಂದ ರೋಗಮುಕ್ತರನ್ನಾಗಿ ಮಾಡಿದ್ದರೋ ತಿಳಿಯದು. ಇವರ ಬಗ್ಗೆ ಯಾವುದೇ ವಿಷಯ ಡಿಜಿಟಲ್ ಮೀಡಿಯಾದಲ್ಲಿ ಇಲ್ಲದಿರುವುದು ಬಹಳ ಸಂಕಟದ ವಿಷಯ. ನಾನು ಗೂಗಲಮ್ಮನ ಬಳಿ ಈ ಮೂರು ಡಾಕ್ಟರ್ ಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಅವರ ಫೋಟೋಗಾಗಿ ಪ್ರಯತ್ನಿಸಿ ಸೋತೆ. ನಿಮಗೆ ಈ ಮೂವರ ಅಥವಾ ನಿಮಗೆ ಗೊತ್ತಿದ್ದ ಇಂತಹ ಡಾಕ್ಟರ್ ಗಳ ಬಗ್ಗೆ ತಿಳಿದಿದ್ದರೆ ದಯವಿಟ್ಟು ಅವರ ಬಗ್ಗೆ ಬರೆದು ಎಲ್ಲರಿಗೂ ತಿಳಿಸಿಕೊಡಿ. ಅದೊಂದೇ ನಾವು ಮಾಡಬಹುದಾದ ಕೃತಜ್ಞತೆ ಮಹನೀಯರಿಗೆ.